ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಉಪ ಚುನಾವಣೆ: ಸರ್ಕಾರದ ದುರಾಡಳಿತವೇ ಪ್ರಮುಖ ವಿಷಯ–ಸತೀಶ ಜಾರಕಿಹೊಳಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ
Last Updated 22 ಮಾರ್ಚ್ 2021, 11:45 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ, ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ದುರಾಡಳಿತವನ್ನು ಪ್ರಮುಖವಾಗಿ ಮುಂದಿಟ್ಟು ಜನರಿಂದ ಮತ ಕೇಳುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು, ಕೇಂದ್ರ ಸರ್ಕಾರದ ವೈಫಲ್ಯ, ತೈಲ ಬೆಲೆ ಏರಿಕೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದು, ಅತಿವೃಷ್ಟಿ ಹಾಗೂ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ದೊರೆಯದಿರುವುದು ಮೊದಲಾದವುಗಳನ್ನು ಪ್ರಸ್ತಾಪಿಸಲಾಗುವುದು’ ಎಂದರು.

ಪರಿಣಾಮ ಬೀರುವುದಿಲ್ಲ:

ಮಠ ಹಾಗೂ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಇದರಿಂದ ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬಿರುವುದಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲೂ ಕೊಟ್ಟಿದ್ದೆವು. ಈಗ ಯಡಿಯೂರಪ್ಪ ಅವರೂ ಕೊಟ್ಟಿದ್ದಾರೆ. ಇದು ರಾಜಕೀಯ ಎಂದು ಹೇಳುವುದಕ್ಕೆ ಆಗುವುದಿಲ್ಲ’ ಎಂದು ಹೇಳಿದರು.

‘ರಾಜಕೀಯದಲ್ಲಿ ವ್ಯತ್ಯಾಸಗಳು ಇರುತ್ತವೆ. ಅವುಗಳನ್ನು ಸರಿಪಡಿಸಬೇಕಾಗುತ್ತದೆ. ಆದ್ದರಿಂದ ಅಭ್ಯರ್ಥಿ ಘೋಷಣೆ ಮಾಡಿಲ್ಲ, ಬಿಜೆಪಿಯವರೂ ಮಾಡಿಲ್ಲ. ಇನ್ನೂ ಸಮಯವಿದೆ. ಮಾರ್ಚ್ 25 ಅಥವಾ 26ರ ಒಳಗೆ ಘೋಷಿಸಲಾಗುವುದು. ಚುನಾವಣೆ ಪ್ರಚಾರಕ್ಕೆ ಕೇಂದ್ರ ನಾಯಕರಾರೂ ಬರುವುದಿಲ್ಲ. ರಾಜ್ಯ ನಾಯಕರು ಮಾತ್ರ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ದೆಹಲಿಗೆ ತೆರಳುತ್ತೇನೆ:

‘ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನನ್ನ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಮೂರು ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಮಾರ್ಚ್‌ 23ರಂದು ದೆಹಲಿಗೆ ತೆರಳಲಿದ್ದೇನೆ. ವರಿಷ್ಠರೊಂದಿಗೆ ಚರ್ಚಿಸಲಿದ್ದೇನೆ. ಸ್ಪರ್ಧಿಸಲು ನನ್ನ ಆಸಕ್ತಿಗಿಂತ, ಹೈಕಮಾಂಡ್ ನಿರ್ಧಾರ ಮುಖ್ಯವಾಗುತ್ತದೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದಿಂದ ಉಪ ಚುನಾವಣೆಯಲ್ಲಿ ನಮಗೆ ಪ್ಲಸ್ ಅಥವಾ ಮೈನಸ್ ಆಗುವುದಿಲ್ಲ. ಆ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಲು ಪಕ್ಷದ ವೇದಿಕೆಯಲ್ಲಿ ನಿರ್ಧಾರ ಆಗಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಏನು ಕೆಲಸಗಳಾಗಿವೆ? ಬಿಜೆಪಿ ಏನು ಮಾಡಿದೆ ಎನ್ನುವ ಮೇಲೆ ಚುನಾವಣೆ ನಡೆಯುತ್ತದೆ. ಜನರೂ ಜಾಗೃತರಾಗಿದ್ದಾರೆ’ ಎಂದರು.

‘ಸಿ.ಡಿ. ಪ್ರಕರಣ ಬಹಿರಂಗವಾದ ಬಳಿಕ ರಮೇಶ ಜಾರಕಿಹೊಳಿ ಜೊತೆ ಮಾತನಾಡಿಲ್ಲ. ಮಾರ್ಚ್ 23ರಂದು ಬೆಂಗಳೂರಿಗೆ ಹೋಗುತ್ತೇನೆ. ಅವಕಾಶ ಸಿಕ್ಕರೆ ಮಾತನಾಡುತ್ತೇನೆ’ ಎಂದು ಹೇಳಿದರು.

ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣನವರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

* ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣ ತನಿಖೆಯನ್ನು ಪೊಲೀಸರು ಉತ್ತಮವಾಗಿ ನಡೆಸುತ್ತಿದ್ದಾರೆ. ಸ್ಪಷ್ಟತೆ ಸಿಗಲು ಕಾಯಬೇಕಾಗುತ್ತದೆ. ಒತ್ತಾಯ ಮಾಡಲಾಗುವುದಿಲ್ಲ.

-ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷರು, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT