ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕಾನೂನು ಹೋರಾಟ

ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿಕೆ
Last Updated 12 ಏಪ್ರಿಲ್ 2019, 8:56 IST
ಅಕ್ಷರ ಗಾತ್ರ

ಬೆಳಗಾವಿ: ‘ಎಲ್ಲ ವಿರೋಧಗಳನ್ನೂ ಮೆಟ್ಟಿ ನಿಂತು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಬಸವ ಜಯಂತಿ ಪ್ರಯುಕ್ತ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ಸೇನೆ ಹಾಗೂ ಇತರ ಲಿಂಗಾಯತ ಪರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಮಹಾಂತ ಭವನದಲ್ಲಿ ಗುರುವಾರದಿಂದ ಆಯೋಜಿಸಿರುವ ‘ಶರಣರ ದರ್ಶನ’ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಮ್ಮ ಹೋರಾಟ ಧರ್ಮ ಒಡೆಯುವ ಕೆಲಸವಲ್ಲ. ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆತ ನಂತರ ಲಿಂಗಾಯತ ಧರ್ಮದ ಅಡಿಯಲ್ಲಿರುವ ಎಲ್ಲ ಪಂಗಡ– ಉಪ ಪಂಗಡಗಳು ಲಿಂಗಾಯತ ಧರ್ಮದ ಅಡಿಯಲ್ಲಿ ಒಂದಾಗಲಿವೆ. ಹಿಂದುತ್ವದ ರಭಸದಲ್ಲಿ ಕೊಚ್ಚಿ ಹೋಗುತ್ತಿರುವ ಲಿಂಗಾಯತ ಧರ್ಮದ ಒಳ ಪಂಗಡಗಳು ಹಾಗೂ ಲಿಂಗಾಯತರ ಅಸ್ಮಿತೆ ಉಳಿಯಲಿದೆ’ ಎಂದು ಹೇಳಿದರು.

ಅಂಥವರನ್ನು ಹೊರಹಾಕಬೇಕು:

‘ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದಲ್ಲಿ ನಮ್ಮ ಜೊತೆಗಿದ್ದ ಕೆಲ ರಾಜಕೀಯ ನಾಯಕರು ಇಂದು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾವುದೋ ಸ್ವಾರ್ಥಕ್ಕಾಗಿ ನಮ್ಮೊಂದಿಗೆ ಬಂದಿದ್ದವರು, ಈಗ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವವರನ್ನು ಸಂಘಟನೆಯಿಂದ ಹೊರ ಹಾಕಬೇಕು. ಸಂಘಟನೆ ಮತ್ತು ಹೋರಾಟವನ್ನು ಬಲಪಡಿಸಬೇಕು. ಜಾಗತಿಕ ಲಿಂಗಾಯತ ಮಹಾಸಭಾವನ್ನು ರಾಜಕೀಯ ನಾಯಕರಿಲ್ಲದ ಹಾಗೂ ಸಮಾಜದ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಸಂಘಟಿಸಬೇಕು’ ಎಂದು ಸಲಹೆ ನೀಡಿದರು.

‘ವೈದಿಕ ಧರ್ಮದ ವಿರುದ್ಧವಾಗಿ ಹುಟ್ಟಿಕೊಂಡಿರುವ ಲಿಂಗಾಯತ ಧರ್ಮವು ಇಂದು ವೈದಿಕರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ. ಧರ್ಮದ ಅಭಿಮಾನ ಇಲ್ಲದ ಲಿಂಗಾಯತರಿಂದಲೇ ಹೆಚ್ಚು ತೊಂದರೆ ಅನುಭವಿಸುತ್ತಿದೆ. ಲಿಂಗಾಯತರು ಸ್ವಾಭಿಮಾನಿಗಳಾಗಬೇಕು. ಧರ್ಮ ಮತ್ತು ಸಮಾಜದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು’ ಎಂದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಹೊರ ದೇಶದ ಧರ್ಮಗಳಿಗೆ ಸಾಕು ತಾಯಿಯಾಗಿ ಆಶ್ರಯ ನೀಡಿದ ಈ ದೇಶದಲ್ಲಿ ಈ ನೆಲದ ಧರ್ಮವಾದ ಲಿಂಗಾಯತ ಧರ್ಮ ರಾಷ್ಟ್ರ ಧರ್ಮವಾಗಬೇಕು. ಲಿಂಗಾಯತ ಧರ್ಮ ಜಾರಿಗೆ ತರದಿದ್ದರೆ ದೇಶ ನಾಶವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬಸವ ತತ್ವ ಅನುಭಾವ ಕೇಂದ್ರದ ವಾಗ್ದೇವಿ ತಾಯಿ ಉದ್ಘಾಟಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪರುಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಧರ್ಮ ಪೀಠದ ಬಸವಪ್ರಭು ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಗುರುಬಸವ ಮಂಟಪದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ, ಪತ್ರಕರ್ತ ಆರ್.ಎಸ್. ದರ್ಗೆ ಇದ್ದರು.

ರಾಜು ಪದ್ಮನ್ನವರ ಸ್ವಾಗತಿಸಿದರು. ಶಂಕರ ಗುಡಸ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಮಳಗಲಿ ನಿರೂಪಿಸಿದರು. ಆನಂದ ಕರ್ಕಿ ವಂದಿಸಿದರು.

ಪ್ರವಚನ ಕಾರ್ಯಕ್ರಮ ಮೇ 7ರವರೆಗೆ ನಿತ್ಯ ಸಂಜೆ 6.30ರಿಂದ 7.30ರವರೆಗೆ ಮಹಾಂತ ಭವನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT