ಬುಧವಾರ, ಸೆಪ್ಟೆಂಬರ್ 28, 2022
27 °C

ಬೆಳಗಾವಿ ಚಿರತೆ ಹಿಡಿಯಲು ನಾಯಿ ತರಿಸುವೆ: ಸಚಿವ ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ಅಗತ್ಯಬಿದ್ದರೆ ‘ಮುಧೋಳ ನಾಯಿ’ ತರಿಸಿ ಚಿರತೆ ಪತ್ತೆ ಮಾಡುತ್ತೇವೆ...

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಗರದಲ್ಲಿ ಸೋಮವಾರ ಮಧ್ಯಮಗಳ ಮುಂದೆ ಈ ಮಾತು ಹೇಳಿದ ತಕ್ಷಣ ಎಲ್ಲರಲ್ಲೂ ನಗೆ ಮೂಡಿತು.

‘ಇದೇನು ಕಾಮಿಡಿ ಅಲ್ಲ. ಚಿರತೆ ಸೆರೆಗೆ ನಾಯಿ ತರಿಸುತ್ತೀರಾ, ಇದು ಸಾಧ್ಯವಾ ಎಂದು ನಗಬೇಡಿ. ಮುಧೋಳ ನಾಯಿಗೆ ಅಂಥ ಪವರ್‌ ಇದೆ. ಯಾವುದೇ ಪ್ರಾಣಿ ಎಲ್ಲೇ ಅಡಗಿದ್ದರೂ ಅದರ ವಾಸನೆ ಗ್ರಹಿಸಿ, ಪತ್ತೆ ಮಾಡಬಲ್ಲದು ನಮ್ಮ ನಾಯಿ’ ಎಂದರು.

‘ಈಗಾಗಲೇ ಬೆಳಗಾವಿಯಲ್ಲಿ ಎಂಟು ಕಡೆ ಬೋನು ಇಡಲಾಗಿದೆ. 50 ಸಿಬ್ವಂದಿ ನಿಯೋಜಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸುತ್ತಲಿನ ಶಾಲೆಗಳಿಗೆ ರಜೆ ಕೊಡುವುದು ಅನಿವಾರ್ಯ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಸೂಚಿಸಿದ್ದೇನೆ’ ಎಂದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಭಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಥನಿ ಮರಿಯಪ್ಪ, ‘ಮುಧೋಳ ನಾಯಿ ಹಿಂಡನ್ನು ಚಿರತೆ ಸೆರೆಗೆ ಬಳಸುವ ಬಗ್ಗೆ ಪರಿಶೀಲಿಸಲಾಗುವುದು. ನಾಯಿ ಹಿಂಡಿನಿಂದಲೂ ಚಿರತೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಸವಾಲು ಹುಟ್ಟುತ್ತದೆ. ಹಾಗಾಗಿ, ಸಚಿವರ ಸಲಹೆ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

‘ಕಳೆದ 10 ದಿನಗಳ ಹಿಂದೆ ಚಿರತೆ ಗಾಲ್ಫ್‌ ಮೈದಾನದಲ್ಲಿ ಅಡಗಿತ್ತು. ಈ ಮೈದಾನದ ವ್ಯಾಪ್ತಿ ವಿಶಾಲವಾದ್ದರಿಂದ ಚಿರತೆ ಸಿಗುವುದು ಸುಲಭವಲ್ಲ. ಮಂಗಳವಾರದಿಂದ ಬೋನುಗಳ ಸ್ಥಳ ಬದಲಾಯಿಸಿ ಇಡುತ್ತೇವೆ. ಎಂಟು ದಿನಗಳಿಂದ ಚಿರತೆ ಗುರುತು ಎಲ್ಲೂ ಪತ್ತೆಯಾಗಿಲ್ಲ. ಅದು ಮರಳಿ ಕಾಡಿಗೆ ಹೋಗಿರುವ ಸಾಧ್ಯತೆಯೂ ಇದೆ. ಆದರೂ ಖಚಿತವಾಗುವವರೆಗೆ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು