ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

Last Updated 25 ಮೇ 2021, 11:58 IST
ಅಕ್ಷರ ಗಾತ್ರ

ಬೆಳಗಾವಿ: ನೇಕಾರರ ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ನೇಕಾರ ಸಂಘಟನೆಗಳ ಒಕ್ಕೂಟದಿಂದ ನಗರದ ವಡಗಾವಿಯಲ್ಲಿ ನೇಕಾರರು ಮಂಗಳವಾರ ಸಾಂಕೇತಿಕ ಸಭೆ ನಡೆಸಿದರು.

ಅಧ್ಯಕ್ಷ ಗಜಾನನ ಗುಂಜೇರಿ ಮಾತನಾಡಿ, ‘ಎರಡು ವರ್ಷಗಳಿಂದ ನೆರೆ ಹಾವಳಿ ಮತ್ತು ಹೋದ ವರ್ಷ ಕೋವಿಡ್ ಲಾಕ್‌ಡೌನ್‌ನಿಂದ ಎರಡು ಸಂಕಷ್ಟಕ್ಕೆ ಒಳಗಾಗಿದ್ದೆವು. ಈ ವರ್ಷ ಮತ್ತೆ ಕೋವಿಡ್‌ ಕಾರಣದಿಂದ ನೇಕಾರರು, ಮಗ್ಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಮಗ್ಗಗಳು ಸ್ತಬ್ಧವಾಗಿವೆ. ನೂರಾರು ಕುಟುಂಬಗಳು ಕಂಗೆಟ್ಟಿವೆ’ ಎಂದು ತಿಳಿಸಿದರು.

‘ನೇಕಾರರ ಬದುಕು ಗಂಭೀರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಬಹಳಷ್ಟು ಮಂದಿ ಉಪ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಎರಡು ವರ್ಷಗಳಲ್ಲಿ 21 ಜನ ಬಡ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕ ಅಭಯ ಪಾಟೀಲ ಅವರ ಪ್ರಯತ್ನದಿಂದಾಗಿ ಬೆಳಗಾವಿಯಲ್ಲಿ ಇಬ್ಬರಿಗೆ ₹ 2 ಲಕ್ಷ ಪರಿಹಾರ ಸಿಕ್ಕಿದೆ. 19 ಮಂದಿಗೆ ಸರ್ಕಾರದ ಸಹಾಯ ಸಿಗದಿರುವುದು ವಿಪರ್ಯಾಸ’ ಎಂದು ದೂರಿದರು.

‘ನೇಕಾರರು ಹೆಚ್ಚಿರುವ ಮತ ಕ್ಷೇತ್ರದ ಜನಪ್ರತಿನಿಧಿಗಳು ನಮ್ಮ ಪರ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ನೇಕಾರರಿಗೆ ₹ 5 ಸಾವಿರ ವಿತರಣೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವೃತ್ತಿಪರ ನೇಕಾರರನ್ನು ಅಸಂಘಟಿತ ವಲಯದಲ್ಲಿ ಸೇರಿಸಿ, ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳನ್ನು ಕಲ್ಪಿಸಬೇಕು. ಬೇಡಿಕೆ ಇಲ್ಲದೆ ಲಕ್ಷಾಂತರ ಸೀರೆಗಳು ಮನೆಯಲ್ಲಿ ಉಳಿದಿದ್ದು, ಸರ್ಕಾರ ವಿಶೇಷ ಯೋಜನೆ ರೂಪಿಸಿ ನೇರವಾಗಿ ಖರೀದಿಸಬೇಕು. ವಿದ್ಯುತ್ ಬಿಲ್ ಕಟ್ಟಲು ಎರಡು ತಿಂಗಳು ಅವಧಿ ವಿಸ್ತರಿಸಬೇಕು’ ಎಂದು ಸಭೆ ಆಗ್ರಹಿಸಿತು.

ಒಕ್ಕೂಟ ಪ್ರಮುಖರಾದ ಲೋಹಿತ ಮೊರಕರ, ನಾಗರಾಜ ಹೂಗಾರ, ರಮೇಶ ಪಾಟೀಲ, ಶಶಿಧರ ಚೆಲ್ಲಾಪಿಲ್ಲಿ, ಮಂಜುನಾಥ ಭಂಡಾರಿ, ಬಸವರಾಜ ಢವಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT