ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಸರಗಿ: ಕೊಳದೂರು ಗುಡ್ಡದ ವಿಸ್ಮಯ ಗುಹೆ

ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಪ್ರಕೃತಿ ತಾಣ, ಚಾರಣಿಗರಿಗೆ ನೆಚ್ಚನ ಜಾಗ
Last Updated 14 ಆಗಸ್ಟ್ 2022, 4:09 IST
ಅಕ್ಷರ ಗಾತ್ರ

ನೇಸರಗಿ: ದೂರದಿಂದ ನೋಡಿದರೆ ಇಲ್ಲಿ ಬೃಹದ್ದಾದ ಬಂಡೆಗಳು ಮಾತ್ರ ಕಾಣಿಸುತ್ತವೆ. ಹತ್ತಿರ ಹೋದರೆ ವಿಸ್ಮಯಕಾರಿ ಗುಹೆಗಳು ನಿಮ್ಮನ್ನು ಸ್ವಾಗತಿಸುತ್ತವೆ. ದೊಡ್ಡ ಕಂದಕಗಳ ಮಧ್ಯೆ, ಬಂಡೆ ಕೊರಕಲುಗಳ ನಡುವೆ ನೀರಿನ ಝರಿಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತವೆ.

ಪ್ರಕೃತಿಯ ಈ ರಮ್ಯ ತಾಣವನ್ನು ಕಾಣಬೇಕೆಂದರೆ ನೀವು ನೇಸರಗಿ ಸಮೀಪದ ಕೊಳದೂರ ಗ್ರಾಮಕ್ಕೆ ಬರಬೇಕು. ಒಂದೆಡೆ ಹಳ್ಳಿಗಾಡು ಇನ್ನೊಂದೆಡೆ ಗುಡ್ಡಗಾಡು. ಎರಡೂ ಸೌಂದರ್ಯಗಳನ್ನು ಹೊತ್ತುನಿಂತ ಈ ಸ್ಥಳ ಈಗ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಚಾರಣಪ್ರಿಯರಿಗಂತೂ ಇದು ಹೇಳಿಮಾಡಿಸಿದ ಜಾಗ. ಗುಡ್ಡದ ಮೇಲಿರುವ ಯಲ್ಲಮ್ಮನಕೊಳ್ಳ ಎಂದು ಕರೆಯುವ ಜಾಗ ಪ್ರೇಕ್ಷಣೀಯ ಸ್ಥಳವಾಗಿದೆ.

ಈ ಗವಿಗಳ ಸುರಂಗ ಮಾರ್ಗ ಎಲ್ಲಿಗೆ ಸೇರುತ್ತವೆ ಎಂಬುದು ಇನ್ನೂ ಯಾರಿಗೂ ತರ್ಕಕ್ಕೆ ಸಿಕ್ಕಿಲ್ಲ. ಹಲವರು ಇದರೊಳಗೆ ಹೋಗುವ ಉತ್ನ ಮಾಡಿದರೂ ಅದರೊಳಗಿನ ದುರ್ಗಮ ವಾತಾವರಣ ಮುಂದೆ ಬಿಟ್ಟಿಲ್ಲ. ಹಾವು, ಚೇಳು, ಕಾಡು ಜಂತುಗಳು ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ ಎನ್ನುವುದು ಜನರ ಮಾಹಿತಿ.

ನೇಸರಗಿಯಿಂದ 2 ಕಿ.ಮೀ ದೂರದಲ್ಲಿರುವ ಕೊಳದೂರ ಗ್ರಾಮವು 1500 ಜನಸಂಖ್ಯೆ ಹೊಂದಿದೆ. ಗುಡ್ಡದ ಮೇಲಿರುವ ಗುಹೆಗಳೇ ಇದಕ್ಕೆ ದೊಡ್ಡ ಹೆಸರು ತಂದುಕೊಟ್ಟಿವೆ. ಈ ಗುಹೆಗಳ ಸುತ್ತ ಇರುವ ಬಂಡೆಕಲ್ಲುಗಳ ಸಂದಿಯಿಂದ ವರ್ಷವಿಡೀ ನೀರು ಹರಿಯುತ್ತದೆ. ಈ ನೀರು ಎಲ್ಲಿಂದ ಸಂಗ್ರವಾಗಿ ಧುಮುಕುತ್ತದೆ ಎಂಬುದು ತಿಳಿಯಲು ಕಸರತ್ತು ಮಾಡಬೇಕು. ಗುಹೆ ಹಾಗೂ ಖರಿಗಳ ಕಾರಣದಿಂದ ಈ ಪ್ರದೇಶದಲ್ಲಿ ಹಲವು ಪ್ರಾಣಿ, ಪಕ್ಷಿಗಳು ಸಂತತಿ ಬೆಳೆಸುತ್ತಿವೆ.

ವರ್ಷಕೊಮ್ಮೆ ಇಲ್ಲಿಯ ಜನರು ಗುಡ್ಡದಲ್ಲಿರುವ ಯಲ್ಲಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ, ರಾತ್ರಿಯಿಡಿ ಅಡುಗೆ ಮಾಡಿ ಬೆಳಗಿನ ಜಾವ ಕೊಳ್ಳದಲ್ಲಿ ಸ್ನಾನ ಮುಗಿಸಿ, ಜಾತ್ರೆ ನೆರವೇರಿಸುತ್ತಾರೆ.

ಚಾರಣಕ್ಕೆ ಪ್ರಸಿದ್ಧ: ಯುವಜನರು, ಪ್ರವಾಸಿಗಳು ಹಾಗೂ ಚಾರಣಪ್ರಿಯರೇ ಈ ಜಾಗಕ್ಕೆ ಹೆಚ್ಚಾಗಿ ಬರುತ್ತಾರೆ. ರಜೆಯ ದಿನಳಲ್ಲಿ ಚಾರಣಿಗರ ಚಿಲಿಪಿಲಿ ಹೆಚ್ಚು.

ಮಳೆಗಾಲದಲ್ಲಂತೂ ಇಲ್ಲಿನ ಜಲಪಾತಗಳು ಭೋರ್ಗರೆಯುತ್ತವೆ. ಅವುಗಳನ್ನು ನೋಡುವುದೇ ಚಂದ. ಸ್ನಾನ ಮಾಡುವುದಕ್ಕೂ ಅನುಕೂಲವಿದೆ. ಈ ಜಲಪಾತದ ಅಡಿಯಲ್ಲಿ ಒಮ್ಮೆ ಮಿಂದೆದ್ದರೆ ಮೈ ಮನಸ್ಸು ಹಗುರವಾಗುತ್ತದೆ. ಇಲ್ಲಿನ ನೀರು ಶುದ್ಧವಾಗಿದೆ ಎನ್ನುತ್ತಾರೆ ಚಾರಣಿಗ ಅಡಿವೆಪ್ಪ ಮಾಳನ್ನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT