ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ರಸ್ತೆಗಳೇ ಸಂಚಕಾರ ಮೂಲ

ಮಳೆ, ಪ್ರವಾಹ, ಭಾರಿ ವಾಹನಗಳ ಉಪಟಳದಿಂದ ಕಿತ್ತುಹೋದ ಗ್ರಾಮೀಣ ರಸ್ತೆಗಳು
Last Updated 3 ಜುಲೈ 2022, 14:27 IST
ಅಕ್ಷರ ಗಾತ್ರ

ಬೆಳಗಾವಿ: ಮತ್ತೊಂದು ಮಳೆಗಾಲ ಬಂದರೂ ಹಳ್ಳಿಗಳ ಸಂಪರ್ಕ ರಸ್ತೆಗಳು ಮಾತ್ರ ಇನ್ನೂ ದುರಸ್ತಿ ಕಂಡಿಲ್ಲ. ಕಳೆದ ಬಾರಿಯ ಅತಿವೃಷ್ಟಿ ಹಾಗೂ ಪ್ರವಾಹ ಪ್ರಭಾವದಿಂದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಎಲ್ಲೆಂದರಲ್ಲಿ ತಗ್ಗು ಬಿದ್ದಿದ್ದವು. ಅವುಗಳಲ್ಲಿ ಕೆಲವನ್ನು ತೇಪೆ ಹಚ್ಚಿ ದುರಸ್ತಿ ಮಾಡಲಾಗಿದೆ. ಮತ್ತೆ ಕೆಲವು ಇನ್ನೂ ಹಾಗೇ ಇವೆ. ಹೀಗಾಗಿ, ಹಳ್ಳಿ ಮತ್ತು ನಗರಗಳ ಮಧ್ಯೆ ಸಂಚಾರ ಕೊಂಡಿಯಾದ ರಸ್ತೆಗಳೇ ಈಗ ಸಂಚಕಾರ ತರುವಂತಾಗಿವೆ.

ಅತಿಯಾಗಿ ಮಳೆ ಬಿದ್ದ ಬೆಳಗಾವಿ ತಾಲ್ಲೂಕು, ಖಾನಾಪುರ, ಗೋಕಾಕ, ಯರಗಟ್ಟಿ, ಅಥಣಿ, ರಾಯಬಾಗ, ರಾಮದುರ್ಗ ತಾಲ್ಲೂಕುಗಳಲ್ಲಿ ನೂರಾರು ಕಿಲೋಮೀಟರ್ ರಸ್ತೆ ಹಾಳಾಗಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ಪ್ರತಿದಿನ ಓಡಾಡುವ ಜನ, ಶಾಲೆ– ಕಾಲೇಜಿಗೆಬರುವ ವಿದ್ಯಾರ್ಥಿಗಳು, ಜೀವನೋಪಾಕ್ಕೆ ಅಲೆಯುವ ವ್ಯಾಪಾರಿಗಳು, ನೌಕರರು ಈ ರಸ್ತೆಗಳಲ್ಲೇ ಸಂಚರಿಸು
ತ್ತಾರೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳು ಹಾಳಾಗುತ್ತವೆ ಎನ್ನುವುದಕ್ಕಿಂತ ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವುದೇ ದೈನಂದಿನ ಚಿಂತೆಯಾಗಿದೆ.

ಎಲ್ಲಿ ಎಷ್ಟು ರಸ್ತೆ ಹಾಳು?: ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿ ಫೆಬ್ರುವರಿವರೆಗೆ 264 ಕಿ.ಮೀ.
ಪ್ರಮುಖ ರಸ್ತೆಗಳು, 149 ಕಿ.ಮೀ. ರಾಜ್ಯ ಹೆದ್ದಾರಿ ಕಳೆದ ಬಾರಿಯ ಮಳೆ ಮತ್ತು ಪ್ರವಾಹದಿಂದ ಹಾಳಾಗಿವೆ. ಈಗಾಗಲೇ ಹಲವು ಕಡೆ ಟೆಂಡರ್‌ ಕರೆಯಲಾಗಿದೆ. ಇನ್ನೂ ಶೇ 40ರಷ್ಟು ಕಾಮಗಾರಿಗಳು ಅನುಮೋದನೆಗಾಗಿ ಕಾಯುತ್ತಿವೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಜಲ್ಲಿಕಲ್ಲು ಟಿಪ್ಪರ್‌ಗಳದ್ದೇ ದರ್ಬಾರ್‌

ಎಂ.ಕೆ.ಹುಬ್ಬಳ್ಳಿ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಲ್ಲಿ ಭಾರಿ ವಾಹನ
ಗಳ ಓಡಾಟ ಹೆಚ್ಚಾಗಿದೆ. ಮೇಲಾಗಿ, ಮಿತಿಗಿಂತ ಹೆಚ್ಚು ಭಾರ ಹೊತ್ತು ಸಾಗುವ ಈ ವಾಹನಗಳು ರಸ್ತೆಗೆ ಮತ್ತಷ್ಟು ಕಂಟಕ
ವಾಗಿವೆ. ಇಲಾಖೆಯ ಅಧಿಕಾರಿಗಳು ಇದು ಕಂಡೂ ಕಾಣದಂತೆ ಇದ್ದಾರೆ.

ಬೆಳಗಾವಿ ತಾಲ್ಲೂಕಿನ ಹಿರೇಬಾಗೇ ವಾಡಿ ಹಾಗೂ ಸುತ್ತಲಿನ ಗುಡ್ಡದ ಪ್ರದೇಶಗಳಲ್ಲಿರುವ ಜಲ್ಲಿಕಲ್ಲು ಉತ್ಪಾದನಾ ಕ್ವಾರಿಗಳಿಂದ ಅಧಿಕ ಭಾರದ ಜಲ್ಲಿಕಲ್ಲು (ಕಡಿ) ಹೊತ್ತು ಬರುವ ಟಿಪ್ಪರ್‌ಗಳ ಸಂಚಾರದ ಕಾರಣ ಈ ರಸ್ತೆಗಳು ಹಾಳಾಗಿವೆ.

ಎಂ.ಕೆ.ಹುಬ್ಬಳ್ಳಿ– ಚಿಕ್ಕಬಾಗೇವಾಡಿ ರಸ್ತೆಯಲ್ಲಿ ಅಧಿಕ ಬಾರ ಹೊತ್ತು ರಸ್ತೆ ಹಾಳು ಮಾಡಿದ್ದ ಟಿಪ್ಪರ್‌ಗಳ ವಿರುದ್ಧ ಕಳೆದ ವರ್ಷ ಪ್ರತಿಭಟನೆ ನಡೆಸಲಾಗಿತ್ತು. ಆಗ ಸ್ಥಳಕ್ಕಾಗಮಿಸಿದ್ದ ಕಿತ್ತೂರು ತಹಶೀಲ್ದಾರ್‌ ಸೋಮಲಿಂಗಪ್ಪ ಹಾಲಗಿ, ರೈತರಸಮಸ್ಯೆಗೆ ಸ್ಫಂದಿಸಿ ಟಿಪ್ಪರ್‌ಗಳ ಸಂಚಾರಕ್ಕೆಕಡಿವಾಣ ಹಾಕಿದ್ದರು. ಆದರೆ, ಈಗ ಮತ್ತೆ ಇದೇ ರಸ್ತೆಗೆ ಟಿಪ್ಪರ್‌ಗಳು ಲಗ್ಗೆ ಇಡುತ್ತಿವೆ.

ಪ್ರಧಾನಿ ಆದೇಶದ ರಸ್ತೆಗೂ ರಕ್ಷಣೆಯಿಲ್ಲ: ಹಾಳಾಗಿದ್ದ ತಮ್ಮೂರಿನ ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶಾಂತೇಶ ಹುಬ್ಬಳ್ಳಿ ಅವರುಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಫಲವಾಗಿ ಕಳೆದ ಐದು ವರ್ಷಗಳ ಹಿಂದೆಗದ್ದಿಕರವಿನಕೊಪ್ಪ ಗ್ರಾಮಕ್ಕೆ ಗುಣ
ಮಟ್ಟದ ರಸ್ತೆ ನಿರ್ಮಿಸಲಾಗಿದೆ. ಆದರೆ,ಜಲ್ಲಿಕಲ್ಲು ತುಂಬಿಕೊಂಡು ಸಾಗುವ ಟಿಪ್ಪರ್‌ಗಳ ಹಾವಳಿಯಿಂದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಗುಂಡಿಮಯ ಮುಖ್ಯರಸ್ತೆ

ನೇಸರಗಿ: ನೇಸರಗಿ ಮತ್ತು ಮೇಕಲಮರಡಿ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಜನಸಾಮಾನ್ಯರು ಗುಂಡಿಗಳ ಮಧ್ಯೆ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.

ರಸ್ತೆ ದುರಸ್ತಿ ಬಗ್ಗೆ ಜನ ಪ್ರಶ್ನೆ ಮಾಡಿದರೂ ಈಗಲೂ ಕೊರೊನಾ– ಲಾಕ್‌ಡೌನ್‌ ಸಮಸ್ಯೆಗಳನ್ನೇ ಜನಪ್ರತಿನಿಧಿ
ಗಳು ಹೇಳುತ್ತಿದ್ದಾರೆ. ಬೇಸಿಗೆಯಲ್ಲಿ ಜನ ಹೇಗೋ ಸಹಿಸಿಕೊಂಡರು. ಆದರೆ, ಈಗ ಮಳೆಗಾಲ ಬಂದಿದ್ದರಿಂದ ಸಂಚಾರ ಮತ್ತಷ್ಟು ಸಂಚಕಾರ ತರುವಂತಾಗಿದೆ.

ಕಬ್ಬು ಸಾಗಿಸಲು ಪರದಾಟ

ಸವದತ್ತಿ: ತಾಲ್ಲೂಕಿನ ಸಿಂಗಾರಗೊಪ್ಪ, ಅಸುಂಡಿ, ಕರೀಕಟ್ಟಿ ಗ್ರಾಮಗಳ ಸಂಪರ್ಕ ರಸ್ತೆ ತೀರ ಹದಗೆಟ್ಟಿವೆ. ನಡೆದಾಡಲು ಬಾರದಂಥ ಪರಿಸ್ಥಿತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ನಿತ್ಯ ಒಂದಿಲ್ಲೊಂದು ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಸವಾರರು ಸಿಲುಕುತ್ತಿದ್ದಾರೆ.

ಈ ಭಾಗದ ರೈತರು ಅಪಾರ ಪ್ರಮಾಣದ ಕಬ್ಬು ಬೆಳೆಯುತ್ತಾರೆ. ಅದನ್ನು ಕಟಾವು ಮಾಡಿ ಸಾಗಿಸಲು ಪರದಾಡುವಂತಾಗಿದೆ. ಹದಗೆಟ್ಟ ರಸ್ತೆ
ಯಿಂದ ಹಲವು ಟ್ರ್ಯಾಕ್ಟರ್‌ಗಳು ಪಲ್ಟಿಯಾಗಿ ಅನಾಹುತಗಳು ಸಂಭವಿಸಿವೆ. ಈ ಭಾಗದಿಂದ ಸವದತ್ತಿಗೆ ಆಗಮಿ
ಸುವ ಶಾಲಾ ಮಕ್ಕಳೂ ಸಹಿತ ಸಮಸ್ಯೆಎದುರಿಸುತ್ತಿದ್ದಾರೆ. ಸಾರಿಗೆ ಘಟಕದ 105 ಬಸ್‍ಗಳಲ್ಲಿ ಸುಮಾರು 60 ವಾಹನ
ಗಳು ವಿದ್ಯಾರ್ಥಿಗಳ ಕುರಿತಾಗಿಯೇ ಸಂಚರಿಸುತ್ತಿವೆ ಎನ್ನುತ್ತಾರೆ ಘಟಕ ವ್ಯವಸ್ಥಾಪಕ ಗಣೇಶ ಜವಳಿ.

ಕೆಟ್ಟುಹೋದ ಸುಣಧೋಳಿ ರಸ್ತೆ

ಮೂಡಲಗಿ: ತಾಲ್ಲೂಕಿನ ಸುಣಧೋಳಿ ಯಿಂದ ಸುಣಧೋಳಿ ಕ್ರಾಸ್‌ವರೆಗೆ 3 ಕಿ.ಮೀ ರಸ್ತೆ ಪೂರ್ಣ ಕೆಟ್ಟುಹೋಗಿದ್ದು ಇಲ್ಲಿಯ ಜನರಿಗೆ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ.

ಈ ರಸ್ತೆಯು ಕುಲಿಗೋಡ, ಕೌಜಲಗಿಭಾಗದ ಗ್ರಾಮಗಳಿಗೆ ತೆರಳಲು ಅವಶ್ಯಕವಾಗಿದೆ. ಇದು ಕೆಟ್ಟು ಬಹಳಷ್ಟು ವರ್ಷಗಳಾಗಿದ್ದರೂ ದುರಸ್ತಿಯಾಗಿರುವುದಿಲ್ಲ. ಮಳೆಯಾದರೆ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರ ಅಳಲು.ಮುನ್ಯಾಳ, ಶಿವಾಪುರಖಾನಟ್ಟಿ ಗ್ರಾಮಗಳ ವ್ಯಾಪ್ತಿಯ ಮೂಡಲಗಿ ಮಾರಾಪುರ ರಸ್ತೆ ಮಳೆಗಾಲದಲ್ಲಿ ಗದ್ದೆಯಂತಾಗುತ್ತದೆ.

ಯಾರು ಏನಂತಾರೆ?

ಮುನವಳ್ಳಿಯ ಸುತ್ತಲಿನ ಹಳ್ಳಿಯ ಜನರು ಕಬ್ಬು ಬೆಳೆಯುವ ಕಾರಣ ವಾಹನಗಳ ಓಡಾಟ ಹೆಚ್ಚು. ಇದರಿಂದ ಹೊಲದ ರಸ್ತೆಗಳು ಬಹುತೇಕ ಕೆಟ್ಟಿವೆ. ಆ ರಸ್ತೆಗಳಿಗೆ ಕೆಂಪು ಮಣ್ಣು ಹಾಕಿ ಹಾಗೇ ಬಿಟ್ಟಿದ್ದಾರೆ. ಮಣ್ಣು ಕೆಸರಾಗಿ ರಸ್ತೆಗಳು ಹದೆಗೆಟ್ಟಿವೆ. ತಗ್ಗು– ಗುಂಡಿಗಳು ಉಂಟಾಗಿ ಸಂಚಾರ ಮಾಡಲು ಕಷ್ಟವಾಗುತ್ತಿದೆ. ಮುನವಳ್ಳಿಯ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯಿಂದ ಬಡ್ಲಿ ಗ್ರಾಮದವರೆಗೆ ರಸ್ತೆ ತೀವ್ರ ಹದೆಗೆಟ್ಟಿದೆ.

ಕಿರಣ ಯಲಿಗಾರ, ಮುನವಳ್ಳಿ

***
ಖಾನಾಪುರ ತಾಲ್ಲೂಕಿನ ಅಮಗಾಂವ ಗ್ರಾಮ ಮುಖ್ಯ ವಾಹಿನಿಯಿಂದ 8 ಕಿ.ಮೀ. ಒಳಗೆ ಭೀಮಗಡ ವನ್ಯಧಾಮದ ವ್ಯಾಪ್ತಿಯಲ್ಲಿದೆ. ಅರಣ್ಯ ಇಲಾಖೆಯವರು ರಸ್ತೆ, ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಅಮಗಾಂವ ಗ್ರಾಮ ಸಾರಿಗೆ, ಆರೋಗ್ಯ, ಪಡಿತರ ಧಾನ್ಯಗಳ ಪೂರೈಕೆ, ಅಂಚೆ, ಹಿರಿಯ ಪ್ರಾಥಮಿಕ ಶಿಕ್ಷಣ ಮತ್ತಿತರ ಸೌಲಭ್ಯಗಳಿಂದ ವಂಚಿತವಾಗಿದೆ.

ಕೃಷ್ಣ ಭರಣಕರ್, ಗ್ರಾ.ಪಂ ಸದಸ್ಯ, ಅಮಗಾಂವ

ವರ್ಷದ ಹಿಂದೆ ನಮ್ಮೂರ ರಸ್ತೆ ಹದಗೆಟ್ಟಿದೆ. ವಾಹನ ಸಂಚಾರ ಕಷ್ಟವಾಗಿದೆ. ಮಳೆ ಬಂದು ಮತ್ತಷ್ಟು ರಸ್ತೆ ಹಾನಿಯಾಗಿದೆ. ಕೂಡಲೇ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದು ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ.

ಮಹಾಂತೇಶ ಹಿರೇಮಠ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ

ಜಲ್ಲಿಕಲ್ಲು ಸಾಗಿಸುವ ಟಿಪ್ಪರ್‌ಗಳಿಂದ ಈಗಾಗಲೇ ರಸ್ತೆ ಸಂಪೂರ್ಣ ಹಾಳಾಗಿವೆ. ಮನೆಯಲ್ಲೂ ದೂಳು ಆವರಿಸುತ್ತಿದೆ. ಅಧಿಕಾರಿಗಳು ಇಂಥ ವಾಹನಗಳ ಮೇಲೆ ನಿಗಾ ಇಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಟಿಪ್ಪರ್‌ಹಾವಳಿನಿಲ್ಲಿಸಿ,ರಸ್ತೆದುರಸ್ತಿಮಾಡಬೇಕಿದೆ.ಇದಕ್ಕಾಗಿಹೋರಾಟಕ್ಕೆ ಸಿದ್ಧತೆ ನಡೆಸಿದ್ದೇವೆ.

ವಿನೋದ ಸಂಗೊಳ್ಳಿ, ಎಂ.ಕೆ.ಹುಬ್ಬಳ್ಳಿ

ದಶಕಗಳ ಹೋರಾಟದ ಫಲವಾಗಿ ನಮ್ಮೂರಿಗೆ ಐದು ವರ್ಷಗಳ ಹಿಂದೆ ಉತ್ತಮ ರಸ್ತೆ ನಿರ್ಮಾಣವಾಗಿದೆ. ಈಗ ಈ ರಸ್ತೆಯಲ್ಲಿ ಜಲ್ಲಿಕಲ್ಲು ಸಾಗಿಸುವ ಟಿಪ್ಪರ್‌ಗಳ ಹಾವಳಿ ಶುರುವಾಗಿವೆ. ರಸ್ತೆ ಮತ್ತೆ ಹಾಳಾಗುತ್ತಿದೆ. ಹೆದ್ದಾರಿ ಮೂಲಕ ಹೋದರೆ ಟೋಲ್‌ ಹಣ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಚಾಲಕರು ಗ್ರಾಮದ ಅಡ್ಡ ದಾರಿಗಳಲ್ಲಿ ಓಡಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು.

ಶಾಂತೇಶ ಹುಬ್ಬಳ್ಳಿ, ಗದ್ದಿಕರವಿನಕೊಪ್ಪ

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಮರಿಗೇರಿಯ ಮುಖ್ಯರಸ್ತೆಯ ಮೇಲಿನ ಡಾಂಬರ್ ಕಿತ್ತುಹೋಗಿದೆ. ಕೆಲವು ಕಡೆ ಸಿಮೆಂಟ್ ರಸ್ತೆ ಮಾಡಿದ್ದರೂ ಗುಣಮಟ್ಟದಿಂದ ಕೂಡಿಲ್ಲ. ಗ್ರಾಮಗಳ ಸಂಪರ್ಕ ರಸ್ತೆಗಳ ಡಾಂಬರ್‌ ಕಿತ್ತು ಕಲ್ಲುಗಳು ಮೇಲೆದ್ದಿವೆ. ಮಳೆಗಾಲದಲ್ಲಿ ಜನ ಸಂಚಾರ ಕಿರಿಕಿರಿಯಾಗುತ್ತಿದೆ.

ಬಸವರಾಜ ಪಾಟೀಲ, ಮರುಗೇರಿ

*

ಕಾಡಂಚಿನಲ್ಲಿ ಸಂಚಾರ ಹೈರಾಣ

ಖಾನಾಪುರ: ತಾಲ್ಲೂಕಿನಲ್ಲಿ 250ಕ್ಕೂ ಹೆಚ್ಚು ಗ್ರಾಮಗಳು ಕಾಡಂಚಿಗೆ ಇವೆ. ಮುಕ್ಕಾಲು ಭೂಭಾಗ ಅರಣ್ಯ ಪ್ರದೇಶವಿದೆ.
ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಅವಕಾಶ ನೀಡದಿರುವ ಕಾರಣ ಗವ್ವಾಳಿ, ಪಾಸ್ತೊಳ್ಳಿ, ದೇಗಾಂವ, ಕೊಂಗಳಾ, ಜಾಮಗಾಂವ, ಅಮಗಾಂವ, ವರ್ಕಡ, ಕಿರಾವಳಾ, ಸಡಾ, ಚೋರ್ಲಾ, ಮಾನ, ಹುಳಂದ ಸೇರಿದಂತೆ ಕಾನನದಂಚಿನ‌ ಬಹುತೇಕ ಗ್ರಾಮಗಳಿಗೆ ಸರಿಯಾದ‌ ರಸ್ತೆ ಇಲ್ಲ.

ಈ‌ ಗ್ತಾಮಗಳನ್ನು ಸಂಪರ್ಕಿಸುವ ರಸ್ತೆಗಳ ನಡುವೆ ಸೇತುವೆ ಕಟ್ಟಿಲ್ಲ. ಹೀಗಾಗಿ ಇಂದಿಗೂ ಈ ಗ್ರಾಮಗಳು ಮಳೆಗಾಲದಲ್ಲಿ ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡು ನಡುಗಡ್ಡೆಯಾಗಿ ಮಾರ್ಪಡುತ್ತವೆ. ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಕಾನನದಂಚಿನ‌ ಗ್ರಾಮಗಳಿಗೆ ರಸ್ತೆ, ಸೇತುವೆ, ವಿದ್ಯುತ್ ಪೂರೈಕೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ ತಾಲ್ಲೂ
ಕಿನ ಕಾನನದಂಚಿನ‌ ಗ್ರಾಮಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ನಿರಾಸಕ್ತಿ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿ ದ್ದಾರೆ ಎಂಬುದು ಹಳ್ಳಿಗರ ದೂರು.

ಪ್ರಜಾವಾಣಿ ತಂಡ: ಸಂತೋಷ ಈ. ಚಿನಗುಡಿ, ಇಮಾಮ್‌ಹುಸೇನ್‌ ಗೂಡುನವರ, ಬಾಲಶೇಖರ ಬಂದಿ, ಬಸವರಾಜ ಶಿರಸಂಗಿ, ಪ್ರದೀಪ ಮೇಲಿನಮನಿ, ಚ.ಯ.ಮೆಣಶಿನಕಾಯಿ, ಎಸ್.ವಿಭೂತಿಮಠ, ಪ್ರಸನ್ನ ಕುಲಕರ್ಣಿ, ರವಿಕುಮಾರ ಹುಲಕುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT