ಭಾನುವಾರ, ಜೂನ್ 13, 2021
22 °C

ಎಲ್ಲಿ ಬಂತು ಅಚ್ಛೇ ದಿನ್: ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೊರೊನಾ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇಡೀ ದೇಶದಲ್ಲಿ ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಛೇ ದಿನ್ ಘೋಷಣೆ?’ ಎಂದು  ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೇಳಿದ್ದಾರೆ.

ಈ ಬಗ್ಗೆ ಭಾನುವಾರ ಹೇಳಿಕೆ ನೀಡಿರುವ ಅವರು, ‘ನಮಗೆ 2013ರಲ್ಲಿ ಇದ್ದಂತಹ ದಿನಗಳೇ ಇದ್ದರೆ ಸಾಕು ಎಂದು ಜನರು ಬೇಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

‘ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ₹ 20 ಲಕ್ಷ ಕೋಟಿ ಪ್ಯಾಕೇಜ್‌ಗೆ ಜನ ಕಾಯುತ್ತಿದ್ದಾರೆ. ಅದಿನ್ನೂ ಬಂದಿಲ್ಲ. ಈ ಸಂದರ್ಭದಲ್ಲಿ 2ನೇ ಅಲೆ ಬಂದಿದೆ. 3ನೇ ಅಲೆ ಬರಲಿದೆ. ಆದರೆ, ಶವದಲ್ಲೂ ರಾಜಕಾರಣ ಮಾಡುವುದನ್ನು ಬಿಜೆಪಿಯಿಂದ ಕಲಿಯಬೇಕು ಎನ್ನುವಂತಾಗಿದೆ’ ಎಂದು ಟೀಕಿಸಿದ್ದಾರೆ.

‘ಕರ್ನಾಟಕದಲ್ಲೂ ಕೊರೊನಾ ಕರ್ಫ್ಯೂ ನಗೆಪಾಟಲಿಗೀಡಾಗಿದೆ. ಆಮ್ಲಜನಕ ಸಿಗದೆ ಜನರು ಸಾಯುತ್ತಿದ್ದಾರೆ. ಸರ್ಕಾರ ದಿವ್ಯ ನಿರ್ಲಕ್ಷ್ಯದಿಂದಿದೆ. ಸಚಿವರೆಲ್ಲರಿಗೂ ನಾಚಿಕೆಯಾಗಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

‘ಜಿಲ್ಲೆಗೆ ಬಾಗಲಕೋಟೆಯ ಗೋವಿಂದ ಕಾರಜೋಳ ಅವರನ್ನು ಉಸ್ತುವಾರಿ ಮಂತ್ರಿ ಮಾಡಲಾಗಿದೆ. ಆದರೆ ಅವರಿಗೆ ಜಿಲ್ಲೆಯ ಬಗ್ಗೆ ಮಾಹಿತಿಯೇ ಇಲ್ಲ. ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಯಾರೊಬ್ಬರೂ ಸಮರ್ಥರಿಲ್ಲ ಎಂದು ಬೇರೆ ಜಿಲ್ಲೆಯವರನ್ನು ನೇಮಕ ಮಾಡಿದಂತಿದೆ. ಜಿಲ್ಲೆಯ ಪರಿಸ್ಥಿತಿ ಕೈ ಮೀರಿ ಹೋಗಿದೆ’ ಎಂದು ಕಿಡಿಕಾರಿದ್ದಾರೆ.

‘ಕೇಂದ್ರ ಸರ್ಕಾರ ಎಲ್ಲ ವಿಷಯಗಳಲ್ಲೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಸಂಸದರಿಗೆ ಗಟ್ಟಿಯಾಗಿ ಪ್ರಶ್ನಿಸುವ ಧೈರ್ಯವಿಲ್ಲವೇ? ಸಂಸದರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಎಲ್ಲಿ ಅಡಗಿಕೊಂಡಿದ್ದಾರೆ? ರಾಜ್ಯದ ಪರ ದನಿ ಎತ್ತುವ ಮೂಲಕ ಜೀವಂತ ಇದ್ದೀನಿ ಎನ್ನುವುದನ್ನು ತೋರಿಸಲಿ’ ಎಂದು ಸವಾಲು ಹಾಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು