ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ, ಪರಿಸರ ಒಂದಕ್ಕೊಂದು ಪೂರಕ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

Last Updated 4 ಮಾರ್ಚ್ 2021, 13:22 IST
ಅಕ್ಷರ ಗಾತ್ರ

ಬೆಳಗಾವಿ: ‘ವನ್ಯಜೀವಿ ಮತ್ತು ಪರಿಸರವು ಅನಂತ ಕೋಟಿ ಜೀವರಾಶಿಯ ಉಸಿರು. ಅವುಗಳನ್ನು ಅಗಲಿಸಲಾಗದು. ಅವು ಒಂದಕ್ಕೊಂದು ಪೂರಕವಾದವು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಇಲ್ಲಿನ ರಾಮತೀರ್ಥ ನಗರದಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭಾಂಗಣದಲ್ಲಿ ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವೇದಿಕೆ ಉದ್ಘಾಟನೆ ಹಾಗೂ ವನ್ಯಜೀವಿ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವನ್ಯಜೀವಿಗಳ ಅಳಿವು ಪರಿಸರದ ನಾಶಕ್ಕೆ ಕಾರಣವಾಗುತ್ತದೆ. ಗುಡ್ಡ–ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಂತಹ ವಸ್ತುಗಳನ್ನು ಹಾಕಬಾರದು. ನಮಗೆ ಬೇಕಾದ ಆಮ್ಲಜನಕಕ್ಕೆ ಪರಿಸರದ ಕೊಡುಗೆ ಅದ್ವಿತೀಯವಾಗಿದೆ. ವನ್ಯಪ್ರಾಣಿಗಳು ಕಾಡಿನಲ್ಲಿರಲಿ; ನಾವು ನಾಡಿನಲ್ಲಿರೋಣ. ಕಾಡಿನ ದಾರಿ ನಮ್ಮದಾದರೆ, ನಾಡಿನ ದಾರಿ ವನ್ಯಪ್ರಾಣಿಗಳದ್ದಾಗುತ್ತದೆ. ಆಗ, ಸಮತೋಲನ ಇರುವುದಿಲ್ಲ. ಸಂಘರ್ಷಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಜನಜಾಗೃತಿಗೆ ಮುಂದಾಗಿರುವ ವೇದಿಕೆಯ ಕಾರ್ಯ ಶ್ಲಾಘನೀಯವಾದುದು’ ಎಂದು ತಿಳಿಸಿದರು.

ಬೆಳಗಾವಿ ವೃತ್ತದ ಮುಖ್ಯ ಅರಣ್ಯಾಧಿಕಾರಿ ಬಸವರಾಜ ಪಾಟೀಲ ಮಾತನಾಡಿ, ‘ಬೆಳಗಾವಿ ಜನರ ಬಹುದಿನಗಳ ಬೇಡಿಕೆಯಲ್ಲೊಂದಾದ ಮೃಗಾಲಯದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಮೂರು ಸಿಂಹಗಳನ್ನು ತರಿಸಿದ್ದೇವೆ. ಹುಲಿ, ಕರಡಿ, ಚಿರತೆ ಮೊದಲಾದವುಗಳನ್ನು ತರಿಸಲು ಯೋಜಿಸಲಾಗಿದೆ. ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.

ರಾಮತೀರ್ಥನಗರದ ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ನಿರ್ದೇಶಕ ಮಹೇಶ ಮಾವಿನಕಟ್ಟಿ ಒಂದು ಪ್ರಾಣಿಯ ದತ್ತಿಗೆ ₹ 20ಸಾವಿರ ನೀಡಿದ್ದಕ್ಕೆ ಅವರನ್ನು ಬಸವರಾಜ ಪಾಟೀಲ ಪುಷ್ಪ ನೀಡಿ ಗೌರವಿಸಿದರು.

ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ ವನ್ಯಪ್ರಾಣಿಗಳ ಕುರಿತ ಸ್ವರಚಿತ ಜಾಗೃತಿ ಕವನ ವಾಚಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ, ವೇದಿಕೆಯಖಜಾಂಚಿ ಜಗದೀಶ ಮಠದ, ಸದಸ್ಯರಾದ ಪ್ರೊ.ಎಸ್.ಎಸ್. ಅಬ್ಬಾಯಿ, ಪ್ರಾಚಾರ್ಯ ಉಮೇಶ ರಜಪೂತ, ಎಸ್.ಸಿ. ಕಮತ, ಎಸ್.ಎನ್. ಮೂಲಿಮನಿ, ರಾಜೇಂದ್ರ ಗೌಡಪ್ಪಗೋಳ, ವಿಲಾಸ ಕೆರೂರ, ಡಿ.ಎಂ. ಟೊಣ್ಣೆ, ಎ.ಪಿ. ಮಾನಗೆ, ಎ.ಎಸ್. ಚಿಂಗಳೆ ಇದ್ದರು.

ರಾಜಶ್ರೀ ಕುಳ್ಳಿ ಪ್ರಾರ್ಥಿಸಿದರು. ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲೇಶ ರೊಟ್ಟಿ ಸ್ವಾಗತಿಸಿದರು. ಮಾರುತಿ ಕದಮ್ ಪರಿಚಯಿಸಿದರು. ವೇದಿಕೆ ಉಪಾಧ್ಯಕ್ಷ ಶ್ರೀಶೈಲ ಮಠದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT