ಬುಧವಾರ, ನವೆಂಬರ್ 13, 2019
25 °C
ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ

‘ಮೆಗಾ ಡೈರಿ’ ಸ್ಥಾ‍ಪನೆಗೆ ಸಹಕಾರ

Published:
Updated:
Prajavani

ಬೆಳಗಾವಿ: ‘ನಗರದಲ್ಲಿ ಮೆಗಾ ಡೈರಿ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಬೆಮುಲ್‌) ಸಹಕಾರ ಕೊಡಲಾಗುವುದು’ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಇಲ್ಲಿನ ಬೆಮುಲ್‌ ಆವರಣದಲ್ಲಿ ಮಂಗಳವಾರ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಮೆಗಾ ಡೈರಿಯಿಂದ ಈ ಭಾಗದ ನೂರಾರು ಜನರಿಗೆ ಉದ್ಯೋಗ ದೊರೆಯಲಿದೆ. ದಕ್ಷಿಣದ ಜಿಲ್ಲೆಗಳಲ್ಲಿರುವಂತೆ ಬೆಳಗಾವಿಯಲ್ಲೂ ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸಲಾಗುವುದು. 300ರಿಂದ 400 ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕೊಡಲಾಗುವುದು. ನೆರೆ ಅಥವಾ ಅತಿವೃಷ್ಟಿಯಿಂದ ಸೊಸೈಟಿಗಳು ಹಾನಿಗೆ ಒಳಗಾಗಿದ್ದರೆ, ದುರಸ್ತಿಗಾಗಿ ಆರ್ಥಿಕ ನೆರವು ಕೊಡಲಾಗುವುದು’ ಎಂದು ತಿಳಿಸಿದರು.

ತೊಂದರೆ ತಪ್ಪಿದೆ: ‘ಹೈನುಗಾರಿಕೆಗೆ ಧಕ್ಕೆ ತರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ವಿದೇಶದವರಿಗೆ ಪೈಪೋಟಿ ಕೊಡುವುದಕ್ಕೆ ನಮ್ಮ ರೈತರಿಂದ ಸಾಧ್ಯವಾಗುವುದಿಲ್ಲ. ಬಡ ಹೈನುಗಾರರು ಮತ್ತು ರೈತರಿಗೆ ಆಗುತ್ತಿದ್ದ ತೊಂದರೆ ತಪ್ಪಿದಂತಾಗಿದೆ’ ಎಂದರು.

‘ಹಾಲನ್ನೇ ನಂಬಿಕೊಂಡು ಉಪಜೀವನ ನಡೆಸುವವರು ಬಹಳಷ್ಟು ಮಂದಿ ನಮ್ಮ ರಾಜ್ಯದಲ್ಲಿದ್ದಾರೆ. ಅಂಥವರಿಗೆ ಅನುಕೂಲಕ್ಕೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಬೇರೆ ಉಸಾಬರಿಗೆ ಹೋಗುವುದಿಲ್ಲ: ‘ನಾನು ಈ ಸರ್ಕಾರದಲ್ಲಿ ಸಚಿವನಾಗಬೇಕೆಂದು ಪ್ರಯತ್ನಿಸಿಲ್ಲ. ಪ್ರಯತ್ನಿಸಿದ್ದರೆ ಆಗುತ್ತಿದ್ದೆ. ಆದರೆ, ಕೆಎಂಎಫ್‌ ಅಧ್ಯಕ್ಷನಾಗಬೇಕು, ಈ ಮೂಲಕ ರೈತರ ಸೇವೆ ಮಾಡಬೇಕು ಎನ್ನುವ ಬಯಕೆ ಇತ್ತು. ಅದು ನನಸಾಗಿದೆ. ಅರಭಾವಿ ಮತಕ್ಷೇತ್ರ ಹಾಗೂ ಕೆಎಂಎಫ್ ಕೆಲಸಗಳನ್ನಷ್ಟೇ ಮಾಡುತ್ತೇನೆ. ಬೇರಾವುದೇ ಉಸಾಬರಿಗೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸಬೇಕು. ಒಕ್ಕೂಟದಿಂದ ಸಿದ್ಧಪಡಿಸುವ ಪಶು ಆಹಾರವನ್ನು ಜಾನುವಾರುಗಳಿಗೆ ಕೊಡಬೇಕು. ಆಗ ಹಾಲಿನ ಗುಣಮಟ್ಟ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

‘ದಕ್ಷಿಣದ ಜಿಲ್ಲೆಗಳ ರೀತಿಯಲ್ಲಿ ಉತ್ತರ ಕರ್ನಾಟಕದ ಹಾಕು ಒಕ್ಕೂಟಗಳೂ ಬೆಳೆಯಬೇಕು. ಇದಕ್ಕೆ ಪ್ರೋತ್ಸಾಹ ನೀಡಲಾಗುವುದು. ಹಾಲಿಗೆ ಒಂದೊಂದು ಒಕ್ಕೂಟದಲ್ಲಿ ಒಂದೊಂದು ರೀತಿಯ ಖರೀದಿ ದರ ಇದೆ. ಹಾಲಿನ ಉತ್ಪಾದನೆ ಕಡಿಮೆ ಇರಲಿ, ಜಾಸ್ತಿಯಾಗಲಿ ಖರೀದಿ ದರ ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ದರ ಕಡಿಮೆ ಆಗದಂತೆ ಕ್ರಮ ವಹಿಸಲಾಗುವುದು. ಪ್ರಸ್ತುತ ಒಕ್ಕೂಟಕ್ಕೆ ನಿತ್ಯ 77 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದನ್ನು ಕೋಟಿ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇನ್ನೂ ಹೆಚ್ಚಿನ ಉಪ ಉತ್ಪನ್ನಗಳ ತಯಾರಿಕೆಗೂ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಬೆಮುಲ್ ಅಧ್ಯಕ್ಷ ವಿವೇಕರಾವ್‌ ಪಾಟೀಲ, ನಿರ್ದೇಶಕರು, ಮುಖ್ಯ ವ್ಯವಸ್ಥಾಪಕ ಉಬೇದುಲ್ಲಾ ಖಾನ್‌ ಇದ್ದರು.

ಸಂಧ್ಯಾರಾಣಿ ಪ್ರಾರ್ಥಿಸಿದರು. ಸಮನ್ವಯ ಸಂಸ್ಥೆ ಶಾಲೆಯ ಮಕ್ಕಳು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ನಿರ್ದೇಶಕ ಬಿ.ಎಂ‌. ಪರವಣ್ಣವರ ಸ್ವಾಗತಿಸಿದರು. ಅಧಿಕಾರಿ ಜಿ.ಆರ್. ಮಣ್ಣೇರಿ ಪ್ರಾಸ್ತಾವಿಕ ಮಾತನಾಡಿದರು.

ಪ್ರತಿಕ್ರಿಯಿಸಿ (+)