ಚಿಕ್ಕೋಡಿ ಕ್ಷೇತ್ರದಾದ್ಯಂತ ಜಾಗೃತಿ: ‘ಫಲ’ ನೀಡೀತೇ ಅರಿವು ಕಾರ್ಯಕ್ರಮಗಳ ಸರಣಿ?

ಸೋಮವಾರ, ಮೇ 20, 2019
32 °C

ಚಿಕ್ಕೋಡಿ ಕ್ಷೇತ್ರದಾದ್ಯಂತ ಜಾಗೃತಿ: ‘ಫಲ’ ನೀಡೀತೇ ಅರಿವು ಕಾರ್ಯಕ್ರಮಗಳ ಸರಣಿ?

Published:
Updated:
Prajavani

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯಿಂದ ಮತದಾನ ಜಾಗೃತಿಗಾಗಿ ಆಯೋಜಿಸಿದ ಸರಣಿ ಕಾರ್ಯಕ್ರಮಗಳಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗುವುದೇ ಎನ್ನುವ ಕುತೂಹಲ ಮೂಡಿದೆ.

‌ಏ. 23ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ನಿಪ್ಪಾಣಿ, ಚಿಕ್ಕೋಡಿ–ಸದಲಗಾ, ಅಥಣಿ, ಕಾಗವಾಡ, ಕುಡಚಿ ರಾಯಬಾಗ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 8,06,052 ಪುರುಷರು, 7,73,257 ಮಹಿಳೆಯರು ಸೇರಿ ಒಟ್ಟು 15,79,309 ಮತದಾರರಿದ್ದಾರೆ. ಇಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ಚುನಾವಣಾ ಆಯೋಗದ ಸೂಚನೆ ಪ್ರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ವತಿಯಿಂದ ಹಾಗೂ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ನೂರಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಹಲವೆಡೆ:

ಚುನಾವಣೆ ಘೋಷಣೆಗೂ ಮುನ್ನವೇ ಆರಂಭವಾಗಿದ್ದ ಅರಿವು ಚಟುವಟಿಕೆಗಳು, ಘೋಷಣೆಯಾದ ನಂತರವಂತೂ ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ. ಈವರೆಗೆ ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಈ ಸರ್ಕಸ್‌ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವ ನಿರೀಕ್ಷೆ ಎಲ್ಲರದಾಗಿದೆ. ಬಹಳಷ್ಟು ಕಡೆಗಳಲ್ಲಿ ತೋಟ‍ಪಟ್ಟಿಗಳಿಂದ ಕೂಡಿರುವ ಪ್ರದೇಶಗಳಿರುವ ಈ ಕ್ಷೇತ್ರದಲ್ಲಿನ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ.

ಇಲ್ಲಿ ಮತದಾನ ಜಾಗೃತಿ ರಥ ಸಂಚರಿಸಿದೆ. ಬಿಎಲ್‌ಒಗಳ ಸಮಾವೇಶ ಮಾಡಲಾಗಿದೆ. ವಿವಿಧ ಮತಗಟ್ಟೆಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆಯನ್ನೂ ನೀಡಲಾಗಿದೆ. ಜಾಗೃತಿ ಗೀತೆಗಳ ಕಾರ್ಯಕ್ರಮ ನಡೆದಿದೆ. ನಗರಸಭೆ ವಾಹನಗಳ ಮೂಲಕ ಮತದಾನ ಜಾಗೃತಿ ಸಾರುವ ಆಡಿಯೊ ಕ್ಲಿಪ್ ಬಿತ್ತರಿಸಲಾಗಿದೆ. ಅಂಗವಿಕಲರ ಬೈಕ್ ರ‍್ಯಾಲಿ ನಡೆಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಮತದಾನ ಮಾಹಿತಿ ಕುರಿತಾದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕ, ಡೊಳ್ಳಿನ ಪದಗಳ ಕಾರ್ಯಕ್ರಮ. ಪ್ರಭಾತ ಪೇರಿಗಳನ್ನು ನಡೆಸಲಾಗಿದೆ.

ಶಾಲಾ ಮಕ್ಕಳಿಂದಲೂ:

ಮಕ್ಕಳ ಮೂಲಕ ಪೋಷಕರಿಗೆ ತಿಳಿಸಲು ಶಾಲಾ ಮಕಳಿಂದ ಪತ್ರ ಚಳವಳಿ ನಡೆಸಲಾಗಿದೆ. ಅವರಿಂದ ಜಾಗೃತಿ ಜಾಥಾ ಕೂಡ ಆಯೋಜಿಸಲಾಗಿತ್ತು. ಪ್ರೌಢಶಾಲಾ ಮಕ್ಕಳಿಗೆ ರಂಗೋಲಿ, ಪ್ರಬಂಧ ಸ್ಪರ್ಧೆ ಕೂಡ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮತದಾನದ ಜಾಗೃತಿ ಚಟುವಟಿಕೆಗಳು ಜರುಗಿವೆ. ಮೊಂಬತ್ತಿ ಮೆರವಣಿಗೆ ಮಾಡಲಾಗಿದೆ. ಈ ಭಾಗದ ಜಾತ್ರೆ ಮತ್ತು ಉತ್ಸವಗಳಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ವಿಶೇಷ ಮತದಾನದ ಜಾಗೃತಿ ಸ್ಟಾಲ್ ಹಾಕಿ ತಿಳಿವಳಿಕೆ ಮೂಡಿಸಲಾಗಿದೆ. ಮ್ಯಾರಾಥಾನ್, ಬೈಸಿಕಲ್ ಜಾಥಾ ಮೊದಲಾದ ಕಾರ್ಯಕ್ರಮಗಳು ನಡೆದಿವೆ. ಸಾರ್ವಜನಿಕರನ್ನು ಒಳಗೊಳಿಸಿಕೊಳ್ಳುವ ಯತ್ನವೂ ಆಗಿದೆ. ಇದರಿಂದಾಗಿ ಮತದಾನ ‍ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಅಧಿಕಾರಿಗಳದಾಗಿದೆ.

ಕ್ಷೇತ್ರದಲ್ಲಿ ಬಿಸಿಲಿನ ಝಳ ಜೋರಾಗಿದೆ. ಇದು ಮತದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಕ್ಷೇತ್ರದೊಂದಿಗೆ ಜಿಲ್ಲೆಯಲ್ಲಿ ಜಾಗೃತಿಗಾಗಿ ಹಲವು ಚಟುವಟಿಕೆಗಳನ್ನು ನಡೆಸಲಾಗಿದೆ. ಹೀಗಾಗಿ, ಈ ಬಾರಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದಾರರು ಹಕ್ಕು ಚಲಾಯಿಸಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಬೇಕು. ನಿರ್ಭೀತಿಯಿಂದ ಮತಗಟ್ಟೆಗಳಿಗೆ ಬರಬೇಕು. ಮತದಾರರಿಗೆ ಅಗತ್ಯವಾದ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಚಿಕ್ಕೋಡಿ ಚುನಾವಣಾಧಿಕಾರಿ ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !