ಬೆಳಗಾವಿ: ತಾಲ್ಲೂಕಿನ ಶಿಂಧೊಳ್ಳಿ ಗ್ರಾಮದ ತೆರೆದ ಬಾವಿಯಲ್ಲಿ ಗುರುವಾರ ಬೆಳಿಗ್ಗೆ ಮಹಿಳೆಯೊಬ್ಬರು ಬಿದ್ದು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಭಾರತಿ ಪೂಜಾರಿ(48) ಮೃತರು.
‘ಶಿಂಧೊಳ್ಳಿಯ ಮಸಣವ್ವ ದೇವಸ್ಥಾನಕ್ಕೆ ಗುರುವಾರ ಕಳ್ಳರು ನುಗ್ಗಿದ್ದರು. ಇದೇ ವೇಳೆ, ಭಾರತಿ ತಮ್ಮ ಮನೆಯ ದನ–ಕರುಗಳ ಸಗಣಿ ಎತ್ತಿ, ತಿಪ್ಪೆಗೆ ಎಸೆಯಲು ಹೋಗಿದ್ದರು. ಆಗ ದೇವಾಲಯದಲ್ಲಿ ಕಳ್ಳತನ ನಡೆಯುತ್ತಿರುವುದನ್ನು ನೋಡಿದ್ದರು. ಈ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿ, ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಕಳ್ಳರು ಭಾರತಿ ಅವರನ್ನೇ ಬಾವಿಯಲ್ಲಿ ತಳ್ಳಿ ಕೊಲೆ ಮಾಡಿದ್ದಾರೆ’ ಎಂದು ಕುಟುಂಬಸ್ಥರು ಮಾರಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಗಣಿ ಎಸೆಯಲು ಹೋದ ಭಾರತಿ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹೆದರಿ ಹುಡುಕಾಟ ನಡೆಸಿದರು. ದೇಗುಲದ ಎದುರಿನ ಸಗಣಿ ಬುಟ್ಟಿ, ಬಾವಿ ಬಳಿಯ ಪಾದರಕ್ಷೆ ನೋಡಿ, ಪೊಲೀಸರಿಗೆ ಮಾಹಿತಿ ಕೊಟ್ಟರು. ನಂತರ ಬಾವಿಯಲ್ಲಿ ಶವ ಪತ್ತೆಯಾಯಿತು.
‘ಶಿಂಧೊಳ್ಳಿಯಲ್ಲಿ ಮಹಿಳೆಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರು ತಾವಾಗಿಯೇ ಬಾವಿಗೆ ಬಿದ್ದಿದ್ದಾರೆಯೇ ಅಥವಾ ಯಾರಾದರೂ ತಳ್ಳಿದ್ದಾರೆಯೇ ಎನ್ನುವ ಕುರಿತು ತನಿಖೆ ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ದೇವಾಲಯದಲ್ಲಿ 40 ಗ್ರಾಂ ಬೆಳ್ಳಿ ಆಭರಣ ಕಳ್ಳತನವಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.