ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ನಿಷೇಧಕ್ಕೆ ಮಹಿಳೆಯರ ಹಕ್ಕೊತ್ತಾಯ

ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ
Last Updated 19 ಡಿಸೆಂಬರ್ 2018, 12:05 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿ ಮದ್ಯ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ನೂರಾರು ಮಹಿಳೆಯರು ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ನಮಗೆ ನೀರು ಬೇಕು; ಬಿಯರ್‌ ಬೇಡ’ ಎಂದು ಘೋಷಣೆ ಕೂಗಿದ ಅವರು, ಮಹಿಳಾ ಸಬಲೀಕರಣ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಮದ್ಯ ತಯಾರಿಕೆ, ಮಾರಾಟ ಹಾಗೂ ಸೇವಿಸುವುದಕ್ಕೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಎಲ್ಲ ಸ್ತರದ ಮಹಿಳೆಯರಿರುವಂತೆ ಮಹಿಳಾ ಮೀಸಲಾತಿ ಜಾರಿಯಾಗಬೇಕು. ಮಹಿಳಾ ಮೀಸಲು ಕ್ಷೇತ್ರಗಳನ್ನು ಕಾಯ್ದಿರಿಸಬೇಕು. ವಿಧಾನಸಭೆ, ಲೋಕಸಭೆ ಸೇರಿದಂತೆ ಎಲ್ಲ ಸಾಂಸ್ಥಿಕ ರಚನೆಗಳಲ್ಲೂ ಶೇ 33ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ನೀಡಬೇಕು. ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರಕ್ಕಾಗಿ ಕಾಯದೇ ಪ್ರತಿ ಪಕ್ಷದದವರೂ ಮಹಿಳಾ ಮೀಸಲಾತಿಯನ್ನು ಕಲ್ಪಿಸಬೇಕು. ಆಯ್ಕೆ ಸಮಿತಿ, ಕಾರ್ಯಕಾರಿ ಸಮಿತಿ, ಸಂಸದೀಯ ಸಮಿತಿ ಸೇರಿದಂತೆ ಪಕ್ಷದ ಪ್ರತಿ ಹಂತ, ಮಂತ್ರಿಮಂಡಲ ಹಾಗೂ ನಿಗಮ–ಮಂಡಳಿಗಳಲ್ಲೂ ಮಹಿಳೆಯರಿಗೆ ಶೇ 33 ಮೀಸಲಾತಿ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಬಜೆಟ್‌ ಮಂಡಿಸಿ:

‘ಸರ್ಕಾರ, ಪ್ರತಿ ವರ್ಷವೂ ಕಡ್ಡಾಯವಾಗಿ ಮಹಿಳಾ ಬಜೆಟ್‌ ಮಂಡಿಸಬೇಕು. ಎಲ್ಲ ಪಕ್ಷಗಳೂ ಪ್ರತ್ಯೇಕವಾಗಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಬೇಕು. ಪಕ್ಷ, ಸಂಘಟನೆಗಳಲ್ಲೂ ಲೈಂಗಿಕ ದೌರ್ಜನ್ಯ ದೂರು ನಿರ್ವಹಣಾ ಸಮಿತಿ ರಚಿಸಬೇಕು. ಹೆಣ್ಣು ಮಕ್ಕಳು ಮುಕ್ತವಾಗಿ ಪಾಲ್ಗೊಳ್ಳುವಂಥ ವಾತಾವರಣವನ್ನು ಪಕ್ಷ, ರಾಜಕಾರಣದ ಎಲ್ಲ ಹಂತಗಳಲ್ಲೂ ಕಲ್ಪಿಸಬೇಕು. ಮಹಿಳಾ ನಾಯಕತ್ವ ಕಟ್ಟುವುದನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಕುಟುಂಬ ರಾಜಕಾರಣ ನಿಲ್ಲಿಸಿ, ಸಾಮಾನ್ಯ ಕಾರ್ಯಕರ್ತೆಯರಿಗೂ ಚುನಾವಣೆಗಳಲ್ಲಿ ಟಿಕೆಟ್‌ ನೀಡಬೇಕು. ಸಾರ್ವಜನಿಕ ಹಣ ದುರುಪಯೋಗ ಮಾಡಿದವರು, ಹೆಣ್ಮಕ್ಕಳನ್ನು ಹೀನಾಯವಾಗಿ ಕಾಣುವವರಿಗೆ, ಕಿರುಕುಳ ನೀಡುವವರಿಗೆ, ಲಿಂಗ ತಾರತಮ್ಯ ಮಾಡುವವರಿಗೆ ಟಿಕೆಟ್ ಕೊಡಲೇಬಾರದು. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಿಗೆ ಬದ್ಧರಾಗಿ, ಕೈಗೊಂಡ ಕ್ರಮಗಳ ಕುರಿತು ಆರು ತಿಂಗಳಿಗೊಮ್ಮೆ ಸಾರ್ವಜನಿಕ ಸಭೆ ಕರೆದು ವರದಿ ಒಪ್ಪಿಸಬೇಕು. ಸಮಾನತೆ ಹಾಗೂ ಪ್ರಾತಿನಿಧ್ಯ ನಮ್ಮ ಹಕ್ಕು ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

ಹೋರಾಟಕ್ಕೆ ಸಚಿವ ಯು.ಟಿ. ಖಾದರ್, ಶಾಸಕಿ ಸೌಮ್ಯಾ ರೆಡ್ಡಿ, ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್‌ ಬೆಂಬಲ ಸೂಚಿಸಿದರು. ‘ಮದ್ಯ ನಿಷೇಧ ಹಾಗೂ ಮಹಿಳಾ ಪ್ರಾತಿನಿಧ್ಯ ವಿಷಯದ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದು ಸೌಮ್ಯಾ ರೆಡ್ಡಿ ಭರವಸೆ ನೀಡಿದರು.

ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರಾರ ಶಾರದಾ ಗೋಪಾಲ, ಶಿವಾಜಿ ಕಾಗಣೀಕರ, ಸರಸ್ವತಿ, ವಾಣಿ, ಪ್ರತಿಭಾ, ಅಭಯ್ ನೇತೃತ್ವ ವಹಿಸಿದ್ದರು. ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT