ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕೇಂದ್ರದಲ್ಲಿ ಜಾತಿ ತಾರತಮ್ಯ ಸಹಿಸೋಲ್ಲ: ಸಚಿವ ಅಶೋಕ್

Last Updated 19 ಅಕ್ಟೋಬರ್ 2020, 6:00 IST
ಅಕ್ಷರ ಗಾತ್ರ

ಬೆಳಗಾವಿ: ಕಲಬುರ್ಗಿಯ ಕೆಲವು ಪರಿಹಾರ ಕೇಂದ್ರಗಳಲ್ಲಿ ಜಾತಿ ತಾರತಮ್ಯ ಮಾಡುತ್ತಿರುವ ದೂರುಗಳು‌ ಕೇಳಿ ಬಂದಿರುವುದನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಆ ರೀತಿ ಮಾಡಿದ ಅಧಿಕಾರಿ ಅಥವಾ ಯಾರೇ ಇರಬಹುದು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾದ ಜಿಲ್ಲೆಗಳಲ್ಲಿ ಪರಿಹಾರ ವಿತರಣೆ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೊಂದವರಿಗೆ ನೆರವಾಗುವ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದೇವೆ. ಇದರಲ್ಲಿ ಹಣಕಾಸಿನ ತೊಂದರೆ‌ ಇಲ್ಲ ಎಂದರು.

ಪರಿಹಾರ ಕೇಂದ್ರಗಳಲ್ಲಿ ಗುಣಮಟ್ಟದ ಊಟ ಕೊಡಬೇಕು. ಅದಕ್ಕಾಗಿ ಮಾನದಂಡ ನಿಗದಿಪಡಿಸಿದ್ದೇನೆ. ಯಾವ್ಯಾವ ಉಪಹಾರ ಕೊಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ.

ಪರಿಹಾರ ಕೇಂದ್ರಗಳಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು. ಪೌಷ್ಟಿಕ ಆಹಾರ‌ ಕೊಡಬೇಕು. ಇದು ಕಟ್ಟುನಿಟ್ಟಿನ ಆದೇಶ. ಇದನ್ನು ಉಲ್ಲಂಘಿಸಿದರೆ ಎಷ್ಟೇ ದೊಡ್ಡ ಅಧಿಕಾರಿಗಳಿದ್ದರೂ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು‌ ಎಚ್ಚರಿಕೆ ನೀಡಿದರು.

ಈಗಿನ ಅಂದಾಜಿನ ಪ್ರಕಾರ ₹ 3ಸಾವಿರ‌ ಕೋಟಿಗೂ ಹೆಚ್ಚಿನ ಹಾನಿಯಾಗಿದೆ. 10 ಮಂದಿ ನಿಧನರಾಗಿದ್ದಾರೆ. 8000 ಮಂದಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ‌ಕಲ್ಪಿಸಲಾಗಿದೆ. ಕೋವಿಡ್ ‌ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಸಾಬೂನು ಹಾಗೂ ಮಾಸ್ಕ್ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ಹಾಗೂ ಅತಿವೃಷ್ಟಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದನ್ನು ಮೆಟ್ಟಿ ನಿಂತು ಈ ಎರಡೂ ಸಂಕಷ್ಟಗಳಿಂದ ಹೊರಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಖಾತೆಯಲ್ಲಿ ₹88 ಕೋಟಿ ಇದೆ. ಪರಿಹಾರ ಕಾರ್ಯಕ್ಕೆ ಹಣಕಾಸಿನ ತೊಂದರೆ ಇಲ್ಲ. ₹ 666 ಕೋಟಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎಂದರು.

ರಾಯಬಾಗ ತಹಶೀಲ್ದಾರ್ ಕೋವಿಡ್ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಅವ್ಯವಹಾರ ಮಾಡಿದರೆ ದೇವರಿಗೆ ಮೋಸ ಮಾಡಿದಂತೆಯೇ. ಅಂಥವರು ಯಾರಾದರೂ ಇದ್ದರೆ ಕೆಲಸದಲ್ಲಿ‌ ಇರಲು ನಾಲಾಯಕ್ ಆಗಿದ್ದಾರೆ. ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಒಂದು ನಿಮಿಷವೂ ಕೆಲಸದಲ್ಲಿ ಇರಲು ನಾಲಾಯಕ್ ಅವರು. ಅವರನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ದುರ್ಬಳಕೆ ಮಾಡಿಕೊಳ್ಳುವವರನ್ನು ಕೆಲಸದಲ್ಲಿ ಇರಲು‌ ಬಿಡುವುದಿಲ್ಲ ಎಂದರು.

ಆರ್.ಆರ್. ನಗರದಲ್ಲಿ ಕೆಪಿಸಿಸಿ ಅಧ್ಯಕ್ಷರೇ ಫೀಲ್ಡಿಗೆ ಇಳಿದರೂ ಅವರಿಗೆ ಕಾರ್ಯಕರ್ತರು ಇಲ್ಲದಂತಾಗಿದೆ. ಬೂತ್ ಏಜೆಂಟ್ ಕೂಡ ಆ ಪಕ್ಷದವರಿಗೆ ಸಿಗುತ್ತಿಲ್ಲ. ಅಲ್ಲಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಲಿದೆ. ಶಿರಾದಲ್ಲಿ ಹೊಸದಾಗಿ ಪಕ್ಷ ಕಟ್ಟಬೇಕಿದೆ. ಅಲ್ಲೂ ನಾವು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಘೋಷಣೆ ಆದ ಮೇಲೆ ಇಡೀ ಆಡಳಿತ ಚುನಾವಣಾ ಆಯೋಗದ ಅಧೀನದಲ್ಲಿ ಬರುತ್ತದೆ. ಸರ್ಕಾರಕ್ಕೆ ಯಾವುದೇ ಹಿಡಿತ ಇರುವುದಿಲ್ಲ. ಪ್ರಕರಣ ದಾಖಲಿಸುವುದೇನೆ ಇದ್ದರೂ ಆಯೋಗದವರು ಮಾಡುತ್ತಾರೆ. ಕಾಂಗ್ರೆಸ್ ನವರಿಗೆ ಅಷ್ಟೂ ಸಾಮಾನ್ಯ ಜ್ಞಾನವಿಲ್ಲವೇ? ಹಾಗಿದ್ದರೆ ಕಾನೂನು ಉಲ್ಲಂಘನೆ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿಯೇ? ಎಂದು ಕೇಳಿದರು.

ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT