ಬೆಳಗಾವಿ: ‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 40ರಷ್ಟು ಮಕ್ಕಳಿದ್ದಾರೆ. ಪ್ರತಿಯೊಂದು ಮಗುವಿನ ಬದುಕು ಘನತೆಯಿಂದ ಕೂಡಿರಬೇಕಾದರೆ ಅವರ ಹಕ್ಕುಗಳನ್ನು ರಕ್ಷಿಸಬೇಕು. ಈ ವಿಚಾರದಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ, ನಗರದ ವಾರ್ತಾ ಭವನದಲ್ಲಿ ಗುರುವಾರ ‘ಮಕ್ಕಳ ಘನತೆಯ ಬದುಕು’ ಪುಸ್ತಕ ಬಿಡುಗಡೆ ಹಾಗೂ ‘ಮಕ್ಕಳ ರಕ್ಷಣೆಯಲ್ಲಿ ಮಾಧ್ಯಮದ ಶಿಷ್ಟಾಚಾರ’ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
‘ಮಕ್ಕಳ ಕುರಿತು ಯಾವುದೇ ವರದಿ ಮಾಡುವ ಮುನ್ನ ಶಿಷ್ಟಾಚಾರ ಪಾಲಿಸುವುದು ಬಹಳ ಮುಖ್ಯ. 18 ವರ್ಷದ ಒಳಗಿನ ಮಕ್ಕಳು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಪಟ್ಟಾಗ ಆ ಮಗುವಿಗೆ ‘ಬಾಲಾಪರಾಧಿ’ ಎಂಬ ಪದ ಬದಲಾಗಿ ‘ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಗು’ ಎಂದು ಬಳಸಬೇಕು. ತನಿಖೆ ಸಂದರ್ಭದಲ್ಲಿ ಮಗುವನ್ನು ದಾಖಲಿಸುವ ಕೇಂದ್ರವನ್ನು ‘ರಿಮ್ಯಾಂಡ್ ಹೋಮ್’ ಎಂಬ ಶಬ್ದವನ್ನು ಬಳಸದೆ ‘ವೀಕ್ಷಣಾಲಯ’ ಎಂಬ ಪದ ಬಳಸಬೇಕು’ ಎಂದು ತಿಳಿಸಿದರು.
‘ಅದರಂತೆ, 18 ವರ್ಷ ಒಳಗಿನ ಮಕ್ಕಳ ಲೈಂಗಿಕ ಹಲ್ಲೆ ಪ್ರಕರಣದ ಸಂದರ್ಭದಲ್ಲಿ ‘ಅತ್ಯಾಚಾರ’ ಎಂಬ ಪದ ಬಳಕೆ ಮಾಡದೆ ಲೈಂಗಿಕ ಹಲ್ಲೆ, ದೈಹಿಕ ಹಿಂಸೆ, ಕಿರುಕುಳ ಅಥವಾ ಶೋಷಣೆ ಎಂಬ ಪದ ಬಳಕೆ ಮಾಡಬೇಕು’ ಎಂದೂ ವಿವರಿಸಿದರು.
‘ದೇಶದ ಅಪರೂಪದ ಆಸ್ತಿಯಾದ ಮಕ್ಕಳ ಕುರಿತಾದ ಲೇಖನಗಳು, ಪತ್ರಿಕಾ ವರದಿಗಳು, ಕಥೆ– ಕಾದಂಬರಿಗಳು, ಮಕ್ಕಳ ಸ್ನೇಹಿಯಾಗಿದ್ದು ಹೆಚ್ಚು ಪ್ರಸಾರಗೊಳಿಸಲು ಎಲ್ಲ ಮಾಧ್ಯಮದವರು ಆಸಕ್ತಿ ತೋರಬೇಕು’ ಎಂದರು.
ಪುಸ್ತಕ ಬಿಡುಗಡೆ: ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳಿ ಮೋಹನ್ ರೆಡ್ಡಿ ಅವರು ‘ಮಕ್ಕಳ ಘನತೆಯ ಬದುಕು‘ ಪುಸ್ತಕ ಬಿಡುಗಡೆ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಪತ್ರಕರ್ತರಾದ ಮೃತ್ಯುಂಜಯ ಯಲ್ಲಾಪುರಮಠ, ಕುಂತಿನಾಥ ಕಲಮನಿ, ರಾಜು ಗವಳಿ, ರವಿ ಉಪ್ಪಾರ, ಸತೀಶ ಗುಡಗನಟ್ಟಿ, ಜಗದೀಶ ವಿರಕ್ತಮಠ, ಸಂತೋಷ ಚಿನಗುಡಿ ಸೇರಿದಂತೆ ವಿವಿಧ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ/ ಮಕ್ಕಳ ಸಹಾಯವಾಣಿ ಸಿಬ್ಬಂದಿ ಇದ್ದರು.
‘ಮಕ್ಕಳ ಗುರುತು ಬಹಿರಂಗ ಮಾಡಬೇಡಿ’ ‘ಯಾವುದೇ ವರದಿ ಬರೆಯುವಾಗ ಮಾಧ್ಯಮದವರು ಮಕ್ಕಳ ಘನತೆ ಕಾಪಾಡುವಲ್ಲಿ ಆಸ್ಥೆ ವಹಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಮುರಳಿ ಮೋಹನ್ ರೆಡ್ಡಿ ಸಲಹೆ ನೀಡಿದರು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಮಕ್ಕಳಿಗೆ ಸಂಬಂಧಿಸಿದಂತೆ ಪ್ರಕರಣ ಗಮನಕ್ಕೆ ಬಂದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಬಾಲ ನ್ಯಾಯ ಕಾಯ್ದೆ–2015ರ ಅನ್ವಯ ಸೆಕ್ಷನ್ 74ರ ಪ್ರಕಾರ ಮಕ್ಕಳ ವೈಯಕ್ತಿಕ ಮಾಹಿತಿ ಹಾಗೂ ಮಗುವಿನ ಭಾವಚಿತ್ರ ಮಗುವಿನ ವಿಳಾಸ ಗುರುತನ್ನು ಬಹಿರಂಗ ಮಾಡುವಂತಿಲ್ಲ. ಒಂದು ವೇಳೆ ಬಹಿರಂಗಪಡಿಸಿದ್ದಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಬಹುದು’ ಎಂದು ಹೇಳಿದರು. ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಲೋಕ ಅದಾಲತ್ ಮೂಲಕ ಎಷ್ಟೋ ಪ್ರಕರಣಗಳನ್ನು ಸುಖಾಂತ್ಯ ಮಾಡಲಾಗುತ್ತಿದೆ. ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ. ಆದರೆ ನ್ಯಾಯಾಧೀಶರ ಸಂಖ್ಯೆ ಎರಡು ಸಾವಿರ ಕೂಡ ದಾಟಿಲ್ಲ. ಹೀಗಾಗಿ ಲೋಕ ಅದಾಲತ್‌ಗಳ ಮೂಲಕ ಹಾಗೂ ಪ್ರಾಧಿಕಾರದ ಮೂಲಕ ಕಾನೂನು ತಿಳಿವಳಿಕೆ ಪಡೆದು ಬಗೆಹರಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಾಧ್ಯಮರಂಗವು ಇದರಲ್ಲಿ ಕಾಳಜಿ ತೋರಬೇಕು’ ಎಂದೂ ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.