ಶುಕ್ರವಾರ, ಸೆಪ್ಟೆಂಬರ್ 17, 2021
31 °C
ಕಾರ್ಯಾಗಾರ

ಕಾಂಗರೂ ಮಾದರಿ ಆರೈಕೆ ಅವಶ್ಯ: ಡಾ.ಎಚ್‌.ಬಿ. ರಾಜಶೇಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಅಭಿವೃದ್ದಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಶೇ 45ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ರೋಗಕ್ಕೊಳಗಾಗುತ್ತಿದ್ದಾರೆ ಹಾಗೂ  ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ, ತಾಯ್ತನದ ಬಂಧ ಬಿಗಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯವಶ್ಯವಾಗಿದೆ’ ಎಂದು ಯುಎಸ್ಎಂ–ಕೆಎಲ್‌ಇ ನಿರ್ದೇಶಕ ಡಾ.ಎಚ್‌.ಬಿ. ರಾಜಶೇಖರ ಅಭಿಪ್ರಾಯಪಟ್ಟರು.

ಇಲ್ಲಿನ ಯಳ್ಳೂರು ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕ್ಕಮಕ್ಕಳು, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಿಂದ ‘ವಿಶ್ವ ಕಾಂಗರೂ ಮಾದರಿ ಆರೈಕೆ ದಿನ’ದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಯಿ–ಮಗುವಿನ ಬಾಂಧವ್ಯ ಅನನ್ಯವಾದುದು. ಅದು ಬಿಡಿಸಲಾರದ ಬಂಧನವಾಗಿದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾಂಗರೂ ಮಾದರಿ ಆರೈಕೆ ಪೂರಕವಾಗಿದೆ. ಇದು ಅನಾದಿ ಕಾಲದಿಂದಲೂ ರೂಢಿಯಲ್ಲಿದ್ದರೂ, ಪ್ರಗತಿ ಹೊಂದುತ್ತಾ ಹಾಗೂ ಸಂಶೋಧನೆಗೆ ಒಳಪಡುತ್ತಾ ತನ್ನದೇ ವಿವಿಧ ರೂಪುರೇಷೆಗಳಿಂದ ಶ್ರೀಮಂತವಾಗಿದೆ. ಅದನ್ನು ಉಪಯೋಗಿಸಿಕೊಂಡು ಆರೋಗ್ಯಯುತ ತಾಯ್ತನದ ಸುಖ ಅನುಭವಿಸಲು ಅನುವು ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ದಾರಿದೀಪ:

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿ, ‘ಆರೋಗ್ಯ ಶಿಕ್ಷಣ ಎನ್ನುವುದು ಜೀವ ಉಳಿಸುವ ಜ್ಞಾನವಾಗಿದೆ. ಇದು ಶಿಶುವಿನ ಜನನದಿಂದ ಹಿಡಿದು ಬೆಳೆದು ಆರೋಗ್ಯಯುತ ಜೀವನ ಹೊಂದಿ ಮರಣ ಹೊಂದುವವರೆಗಿನ ಪಯಣವನ್ನು ಸರಾಗಗೊಳಿಸುವ ದಾರಿದೀಪವಾಗಿದೆ’ ಎಂದು ತಿಳಿಸಿದರು.

‘ಕಡಿಮೆ ತೂಕವಿರುವ ಮತ್ತು ದಿನ ತುಂಬದೇ ಹೆರಿಗೆ ಆದ ಮಕ್ಕಳನ್ನು ತಾಯಿ ತನ್ನ ಚರ್ಮಕ್ಕೆ ಚರ್ಮ ತಾಗುವಂತೆ ಎದೆಯ ಮೇಲೆ ಹಾಕಿಕೊಂಡು 6ರಿಂದ 8 ಗಂಟೆಗಳ ಕಾಲ ಆರೈಕೆ ಮಾಡುವುದನ್ನು ಕಾಂಗರೂ ಮಾದರಿ ಆರೈಕೆ ಎನ್ನುತ್ತಾರೆ’ ಎಂದರು.

ತಾಯ್ತನ ಸಾಕಾರಗೊಳಿಸುವ ಸೇತು:

‘ಈ ಆರೈಕೆಯು ತಾಯ್ತನ ಸಾಕಾರಗೊಳಿಸುವ ಸೇತುವಾಗಿದೆ. ಮಗುವಿನ ಪಂಚೇಂದ್ರಿಯಗಳ ವಿಕಾಸ, ಸುಖ ನಿದ್ದೆ, ಬುದ್ಧಿಶಕ್ತಿಯ ಬೆಳವಣಿಗೆ ಮೊದಲಾದ ಅದ್ಭುತ ಗುಣಗಳನ್ನು ಹೊಂದಿದೆ. ಇದನ್ನು ಮಗುವು ಎರಡೂವರೆ ಕೆ.ಜಿ. ತೂಕ ತಲುಪುವವರೆಗೆ ಅಥವಾ ಅದರ ನಂತರವೂ ಮಾಡಬಹುದಾಗಿದೆ’ ಎಂದು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹಿರಿಯ ಮಕ್ಕಳ ಮಕ್ಕಳ ತಜ್ಞ ಡಾ.ಸುರೇಶ ಕಾಖಂಡಕಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ ಉಪನ್ಯಾಸ ನೀಡಿದರು.

ಕೆಎಲ್‌ಇ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉಡಚನಕರ ಮತ್ತು ಕೆಎಲ್ಇ ಶತಮಾನೋತ್ಸವ ನರ್ಸಿಂಗ್ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ವಿಕ್ರಾಂತ ನೇಸರಿ, ತಜ್ಞ ವೈದ್ಯರಾದ ಡಾ.ಅನಿತಾ ಮೋದಗೆ, ಸೌಮ್ಯಾ ವೇರ್ಣೇಕರ, ಡಾ.ಸಂತೋಷಕುಮಾರ ಕರಮಸಿ, ಡಾ.ಬಸವರಾಜ ಕುಡಸೋಮನ್ನವರ, ಡಾ.ವಿದ್ಯಾ ಕಾಖಂಡಕಿ, ಡಾ.ಸತೀಶ ಧಾಮನಕರ, ಡಾ.ರವೀಂದ್ರ ನರಸಾಪುರೆ, ಡಾ.ಗೀತಾಂಜಲಿ ತೋಟಗಿ, ಡಾ.ದರ್ಶಿತ್ ಶೆಟ್ಟಿ, ಯುಎಸ್ಎಂಕೆಎಲ್‌ಇ ಸಮುದಾಯ ವಿಭಾಗದ ಡಾ.ಮೂಹನ ಸುಂಕದ ಭಾಗವಹಿಸಿದ್ದರು.

ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭಾವತಿ ಪಾಟೀಲ ನಿರೂಪಿಸಿದರು. ಡಾ.ಅನುರಾಧಾ ಉಗಲೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು