ಭಾನುವಾರ, ಮೇ 22, 2022
24 °C
ಜಿಐಟಿಯಲ್ಲಿ ಆರಂಭವಾದ ಕಾರ್ಯಾಗಾರ ಉದ್ಘಾಟಿಸಿದ ಕರಿಸಿದ್ದಪ್ಪ

ಎನ್‌ಇಪಿಯಿಂದ ಶೈಕ್ಷಣಿಕ ಪರಿವರ್ತನೆ: ಡಾ.ಕರಿಸಿದ್ದಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಿಂದಾಗಿ ಇಡೀ ದೇಶದಲ್ಲಿ ಶೈಕ್ಷಣಿಕ ರಂಗದಲ್ಲಿನ ಪರಿವರ್ತನೆಗೆ ಸಜ್ಜಾಗಿದೆ’ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.

ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಎನ್‌ಇಪಿ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನೀತಿಯು ತಾಂತ್ರಿಕ ಮತ್ತು ವ್ಯವಸ್ಥಾಪಕ ಸಾಮರ್ಥ್ಯವನ್ನು ವೃದ್ಧಿಸಲಿದೆ. ಉನ್ನತ ಸಮಗ್ರತೆ ಮತ್ತು ನೈತಿಕ ಮೌಲ್ಯಗಳೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುವ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರನ್ನು ತಯಾರಿಸಲು ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ರಚಿಸುತ್ತದೆ’ ಎಂದು ಹೇಳಿದರು.

‘ಈ ನೀತಿಯು ಶಿಕ್ಷಣದ ನಿಯಂತ್ರಕ ವ್ಯವಸ್ಥೆಗಳು ಮತ್ತು ಆಂತರಿಕ ಆಡಳಿತ ವ್ಯವಸ್ಥೆಗಳನ್ನು ಪುನರ್‌ರಚಿಸುತ್ತದೆ. ಜಾಗತಿಕ ಕಲ್ಯಾಣಕ್ಕೆ ಕೊಡುಗೆ ನೀಡುವಂತಹ ಸರಿಯಾದ ಪಾತ್ರ, ಬದ್ಧತೆ ಮತ್ತು ನೈತಿಕತೆ ಹೊಂದಿರುವ ವೃತ್ತಿಪರ ಯುವಕರನ್ನು ನಿರ್ಮಿಸುವ ಅಗತ್ಯವಿದೆ. ಇದಕ್ಕಾಗಿ ಎನ್‌ಇಪಿ ಅನುಷ್ಠಾನಕ್ಕೆ ಶಿಕ್ಷಣ ತಜ್ಞರು ಮತ್ತು ಶಿಕ್ಷಕರು ನಿರ್ಣಾಯಕ ಆಗುತ್ತಾರೆ. ಮಾಡುವ, ನೋಡುವ ಮತ್ತು ಓದುವ ಮೂಲಕ ಕಲಿಯುವ ಅಗತ್ಯವು ನೀತಿಯ ಪ್ರಮುಖ ಅಂಶಗಳಾಗಿವೆ’ ಎಂದರು.

ವಿಟಿಯು ಕುಲಸಚಿವ ಡಾ.ಆನಂದ ಎಸ್. ದೇಶಪಾಂಡೆ ಮಾತನಾಡಿ, ‘ಎನ್‌ಇಪಿಯು ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸುತ್ತದೆ.  ಬಲವಾದ ರಾಷ್ಟ್ರವನ್ನು ನಿರ್ಮಿಸಲು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ನೀಡುತ್ತದೆ’ ಎಂದು ಹೇಳಿದರು.

‘ಎನ್‌ಇಪಿ ಅನುಷ್ಠಾನದಲ್ಲಿ ಬೋಧನೆ, ಸಂಶೋಧನೆ ಮತ್ತು ಅನುಭವದ ಕಲಿಕೆಗೆ ನೀಡಲಾದ ಆದ್ಯತೆಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳನ್ನು ಮುಖ್ಯವಾಗಿ ವಿಂಗಡಿಸಲಾಗುವುದು. ಶಿಕ್ಷಕರ ನೇಮಕಾತಿ, ವೃತ್ತಿ ಯೋಜನೆ ಮತ್ತು ಸಾಮಾಜಿಕ ಪರಿಗಣನೆಗಳು ನೀತಿಯ ಅನುಷ್ಠಾನದೊಂದಿಗೆ ಮೌಲ್ಯವನ್ನು ಪಡೆಯುತ್ತವೆ’ ಎಂದರು.

ಮೌಲ್ಯಮಾಪನ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ, ‘ವಿಟಿಯು ಮೌಲ್ಯಮಾಪನ ವ್ಯವಸ್ಥೆಯಲ್ಲಿ ಎನ್‌ಇಪಿಯನ್ನು ಅಳವಡಿಸಲಾಗುವುದು. ಪ್ರಸ್ತುತ ಅನುಸರಿಸುತ್ತಿರುವ ಗ್ರೇಡಿಂಗ್ ವ್ಯವಸ್ಥೆಗಳನ್ನು ಸುಧಾರಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೈಗಾರಿಕೆ ಮತ್ತು ಮಾರುಕಟ್ಟೆ ಅಗತ್ಯತೆಗಳನ್ನು ಪೂರೈಸುವ ಪಠ್ಯಕ್ರಮದೊಂದಿಗೆ ತಾಂತ್ರಿಕ ಸಾಮರ್ಥ್ಯಗಳನ್ನು ಸುಧಾರಿಸುವುದರ ಜೊತೆಗೆ ಕೌಶಲ ಅಭಿವೃದ್ಧಿಯತ್ತ ನೀತಿಯು ಗಮನಹರಿಸುತ್ತದೆ’ ಎಂದು ವಿವರಿಸಿದರು.

ಕೆಎಲ್ಎಸ್ ಜಿಐಟಿ ಆಡಳಿತ ಮಂಡಳಿ ಸದಸ್ಯ ರಾಜೇಂದ್ರ ಬೆಳಗಾಂವಕರ, ಕೆಎಲ್‌ಎಸ್ ಜಿಐಟಿ ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ಮಾತನಾಡಿದರು.

ಎಂಬಿಎ ವಿಭಾಗದ ಅಧ್ಯಾಪಕ ಡಾ.ಸಂಜೀವ್ ಎಸ್. ಇಂಗಳಗಿ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಾಪಕ ಡಾ.ವಾಣಿ ಆರ್‌. ಹುಂಡೇಕರ ನಿರೂಪಿಸಿದರು. ಅಧ್ಯಾಪಕ ಡಾ.ರಾಜೇಂದ್ರ ಇನಾಮದಾರ ಸಂಯೋಜಿಸಿದರು. ಎಂಬಿಎ ವಿಭಾಗದ ಡೀನ್ ಡಾ.ಕೃಷ್ಣಶೇಖರ ಲಾಲ್‌ದಾಸ್ ವಂದಿಸಿದರು.

****

ವಿದ್ಯಾರ್ಥಿಗಳ ವಿಕಾಸವು ಶೈಕ್ಷಣಿಕ ರಂಗದಲ್ಲಿ ಪ್ರಮುಖ ಬದಲಾವಣೆಗಳನ್ನು ಬಯಸುತ್ತಿದೆ ಮತ್ತು ಆ ಬದಲಾವಣೆಗಳನ್ನು ಎನ್‌ಇಪಿಯು ಖಚಿತಪಡಿಸುತ್ತದೆ.

–ರಾಜೇಂದ್ರ ಬೆಳಗಾಂವಕರ, ಸದಸ್ಯ, ಕೆಎಲ್ಎಸ್ ಜಿಐಟಿ ಆಡಳಿತ ಮಂಡಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು