ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day 2023 | ಹಸಿರು ಹೊದಿಕೆ ಹೊದ್ದ ‘ಗುಡ್ಡಗಾಡು’ ಪ್ರದೇಶಗಳು

ಶಿವಾಜಿ ಕಾಗಣಿಕರ ಪರಿಸರ ಪ್ರೇಮ, ರೈತರಿಗೆ ಉತ್ತಮ ಫಲ ತಂದುಕೊಡುತ್ತಿರುವ ಮರಗಳು
Published 4 ಜೂನ್ 2023, 20:54 IST
Last Updated 4 ಜೂನ್ 2023, 20:54 IST
ಅಕ್ಷರ ಗಾತ್ರ

ಬೆಳಗಾವಿ: ‘ಬಂಬರಗಾ, ಕಟ್ಟಣಭಾವಿ, ದೇವಗಿರಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಇದ್ದಲಹೊಂಡ ಗ್ರಾಮಗಳು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದವು. ಇಲ್ಲಿ ಗುಡ್ಡ ಕೊರೆದು ರೈತರು ಕೃಷಿ ಮಾಡಿದರೂ, ಉತ್ತಮ ಫಸಲು ಬರುತ್ತಿರಲಿಲ್ಲ. ಅವರಿಗೆ ಅನುಕೂಲವಾಗಲೆಂದು 1995ರಿಂದ 2010ರ ಅವಧಿಯಲ್ಲಿ ಕೃಷಿಭೂಮಿ, ಬದುಗಳು, ಹಳ್ಳ–ಕೆರೆಯ ದಂಡೆಯಲ್ಲಿ ನೆಟ್ಟಿದ್ದ ಸಸಿಗಳಿಂದು ಆಳೆತ್ತರಕ್ಕೆ ಬೆಳೆದುನಿಂತಿವೆ. ಇವು ರೈತರಿಗೆ ಪ್ರತಿವರ್ಷ ಉತ್ತಮ ಆದಾಯ ತಂದುಕೊಡುತ್ತಿವೆ’

–ಹೀಗೆಂದು ಮಾತು ಆರಂಭಿಸಿದವರು ತಾಲ್ಲೂಕಿನ ಕಡೋಲಿಯ ಪರಿಸರವಾದಿ ಶಿವಾಜಿ ಕಾಗಣಿಕರ.

ಕಳೆದ ನಾಲ್ಕು ದಶಕಗಳಿಂದ ಬೆಳಗಾವಿ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಅವರು ಸದ್ದಿಲ್ಲದೆ ‘ಹಸಿರು ಕ್ರಾಂತಿ’ ಮಾಡುತ್ತಿದ್ದಾರೆ. ಒಂದು ಕಾಲಕ್ಕೆ ಬೆಟ್ಟ–ಗುಡ್ಡಗಳಿಂದಲೇ ಕೂಡಿದ್ದ ಗ್ರಾಮಗಳು, ಅವರ ಪ್ರಯತ್ನದಿಂದಾಗಿ ಹಸಿರು ಹೊದಿಕೆ ಹೊದ್ದು ನಳನಳಿಸುತ್ತಿವೆ. ತಮ್ಮ ಬದುಕಿಗೆ ಆಧಾರವಾದ ಮರಗಳನ್ನು ಸಾವಿರಾರು ರೈತರು ನಿರ್ವಹಣೆ ಮಾಡುತ್ತಿದ್ದಾರೆ.

2 ಲಕ್ಷ ಸಸಿಗಳು ಸಮೃದ್ಧವಾಗಿ ನಿಂತಿವೆ:

‘1985ರಿಂದ ನಿಂಗ್ಯಾನಟ್ಟಿ, ಬಂಬರಗಾ ಶಾಲೆಗಳಲ್ಲಿ ಸಸಿ ನೆಡುವುದನ್ನು ಆರಂಭಿಸಿದೆ. 1995ರಲ್ಲಿ ಜರ್ಮನ್‌ನ ರುಡಾಲ್ಫ್‌ ಕಂಪನಿ ಹಾಗೂ ಜನ ಜಾಗರಣ ಸಂಸ್ಥೆ ಸಹಯೋಗದಲ್ಲಿ ‘ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ’ ಕೈಗೆತ್ತಿಕೊಂಡೆವು. ಈ ಭಾಗದಲ್ಲಿ ಹಸಿರುಮಯ ವಾತಾವರಣ ನಿರ್ಮಾಣದ ಜೊತೆಗೆ ರೈತರಿಗೆ ನೆರವಾಗುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕೆ ಕಂಪನಿ ₹30 ಲಕ್ಷ ಅನುದಾನ ಕೊಟ್ಟಿತು. ಸತತ 15 ವರ್ಷಗಳ ಕಾಲ 2.5 ಲಕ್ಷ ಸಸಿಗಳನ್ನು ನೆಟ್ಟೆವು. ಅವುಗಳಲ್ಲಿ 2 ಲಕ್ಷ ಬದುಕುಳಿದಿವೆ. ಇಳಿಜಾರು ಪ್ರದೇಶಗಳಲ್ಲಿ ಹರಿದುಹೋಗುತ್ತಿದ್ದ ಮಳೆನೀರನ್ನು ಅಲ್ಲಿಯೇ ಇಂಗಿಸುವ ವ್ಯವಸ್ಥೆ ಮಾಡಿದೆವು.  ಗೋಡಂಬಿ, ಹಲಸು, ಮಾವು, ಬಿದಿರಿನ ಮರಗಳು ರೈತರ ಕೈಹಿಡಿದಿವೆ’ ಎಂದು ಹೇಳಿದ 74ರ ಹರೆಯದ ಕಾಗಣಿಕರ ಮಾತಿನಲ್ಲಿ ಬೆಳಕಿತ್ತು.

‘ನಾವು ಪರಿಸರ ಸಂರಕ್ಷಣೆಯೊಂದಿಗೆ ಜಲಸಂರಕ್ಷಣೆಗೂ ಒತ್ತು ಕೊಟ್ಟಿದ್ದೇವೆ. ನಿಂಗ್ಯಾನಟ್ಟಿಯಲ್ಲಿ ಮೂರು, ಕಟ್ಟಣಭಾವಿಯಲ್ಲಿ ಎರಡು, ಗುರಾಮಟ್ಟಿಯಲ್ಲಿ ಒಂದು ಕೆರೆ ಅಭಿವೃದ್ಧಿಪಡಿಸಿದ್ದೇವೆ. ಕಟ್ಟಣಭಾವಿ, ಗುರಾಮಟ್ಟಿ, ಇದ್ದಲಹೊಂಡದಲ್ಲಿ ತೆರೆದ ಬಾವಿ ಕೊರೆಯಿಸಿದ್ದೇವೆ. ಜೊತೆಗೆ ಹಳ್ಳಗಳು, ಕಾಲುಗೆಗಳನ್ನು ಪುನಶ್ಚೇತನ ಗೊಳಿಸಿದ್ದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ನಾವು ಅಭಿವೃದ್ಧಿಗೊಳಿಸಿದ ಜಲಮೂಲಗಳು ಜನ–ಜಾನುವಾರುಗಳ ದಾಹ ನೀಗಿಸುತ್ತಿವೆ’ ಎಂದು ವಿವರಿಸಿದರು.

ಶಿವಾಜಿ ಕಾಗಣಿಕರ ಅವರು ಬಂಬರಗಾ, ನಿಂಗ್ಯಾನಟ್ಟಿಯ ರಸ್ತೆಬದಿಯಲ್ಲೂ ಹಲವು ಸಸಿ ಬೆಳೆಸಿದ್ದಾರೆ. ಇದರಿಂದಾಗಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದ್ದು, ನೂರಾರು ಸವಾರರು ಈ ಮಾರ್ಗದಲ್ಲಿ ನಿತ್ಯ ಖುಷಿಯಿಂದ ಸಂಚರಿಸುತ್ತಿದ್ದಾರೆ.

ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಶಿವಾಜಿ ಕಾಗಣಿಕರ ಮಾಡಿದ ಸಾಧನೆ ಪರಿಗಣಿಸಿ, ರಾಜ್ಯ ಸರ್ಕಾರ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಡಿ.ದೇವರಾಜ ಅರಸು ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಅವರು ಭಾಜನವಾಗಿದ್ದಾರೆ.

ಬೆಳಗಾವಿ ತಾಲ್ಲೂಕಿನ ನಿಂಗ್ಯಾನಟ್ಟಿನಲ್ಲಿ ತಾವು ನೆಟ್ಟು ಪೋಷಿಸಿದ ಮರ ತೋರಿಸುತ್ತಿರುವ ಪರಿಸರವಾದಿ ಶಿವಾಜಿ ಕಾಗಣಿಕರ/ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ನಿಂಗ್ಯಾನಟ್ಟಿನಲ್ಲಿ ತಾವು ನೆಟ್ಟು ಪೋಷಿಸಿದ ಮರ ತೋರಿಸುತ್ತಿರುವ ಪರಿಸರವಾದಿ ಶಿವಾಜಿ ಕಾಗಣಿಕರ/ಪ್ರಜಾವಾಣಿ ಚಿತ್ರ
ಅಂದು ಮಾಡಿದ ಕೆಲಸ ಈಗ ಫಲ ಕೊಡುತ್ತಿದೆ. 2 ಲಕ್ಷ ಸಸಿಗಳು ಸಮೃದ್ಧವಾಗಿ ಬೆಳೆದುನಿಂತಿವೆ.
– ಶಿವಾಜಿ ಕಾಗಣಿಕರ, ಪರಿಸರವಾದಿ
ಮರಗಳೇ ನಮಗೆ ಆಧಾರ
‘ನನ್ನದು 1 ಎಕರೆ 10 ಗುಂಟೆ ಜಮೀನಿದೆ. ಅಲ್ಲಿ ರಾಗಿ ಶೇಂಗಾ ಬೆಳೆಯುತ್ತಿದ್ದೆ. ಒಮ್ಮೊಮ್ಮೆ ಉತ್ತಮ ಫಸಲೇ ಬರುತ್ತಿರಲಿಲ್ಲ. ಆದರೆ ಶಿವಾಜಿ ಕಾಗಣಿಕರ ನೆಟ್ಟು ಪೋಷಿಸಿದ ಮಾವು ತೆಂಗು ಚಿಕ್ಕು ಹಲಸು ಬೇವಿನ ಮರಗಳೇ  ನಮಗೀಗ ಆಧಾರವಾಗಿವೆ. ಅವುಗಳಿಂದ ಉತ್ತಮ ಆದಾಯ ಕೈಗೆಟುಕುತ್ತಿದ್ದು ನೆಮ್ಮದಿಯಿಂದ ಬದುಕು ಸಾಗಿಸುವಂತಾಗಿದೆ’ ಎಂದು ನಿಂಗ್ಯಾನಟ್ಟಿಯ ಶಂಕರ ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT