ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾದಿಂದ ಮಾನಸಿಕ ತೊಂದರೆ ಸೃಷ್ಟಿ’

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
Last Updated 10 ಅಕ್ಟೋಬರ್ 2020, 13:53 IST
ಅಕ್ಷರ ಗಾತ್ರ

ಬೆಳಗಾವಿ: ‘ಕೊರೊನಾ ಭೀತಿಯಿಂದ ಮಾನಸಿಕ ತೊಂದರೆಯೂ ಆಗುತ್ತಿದೆ. ಈ ಸಂದರ್ಭವನ್ನು ಅರಿತು ನಡೆದರೆ ಹಾಗೂ ಮುನ್ನೆಚ್ಚರಿಕೆ ವಹಿಸಿದರೆ ನೆಮ್ಮದಿಯ ಜೀವನ ನಡೆಸಬಹುದು’ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಶನಿವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರೋಗ್ಯವೆಂದರೆ ಕೇವಲ ಸದೃಢ ಆರೋಗ್ಯ ಸ್ಥಿತಿಯಲ್ಲ. ಅದು ಮಾನಸಿಕ, ದೈಹಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ಮೊದಲಾದ ಅತ್ಯಮೂಲ್ಯ ಅಂಶಗಳನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿ ದೈಹಿಕವಾಗಿ ಆರೋಗ್ಯವಂತನಾಗಿದ್ದು, ಮಾನಸಿಕವಾಗಿ ಅನಾರೊಗ್ಯ ಪೀಡಿತನಾಗಿದ್ದರೆ ಅದು ಅವನ ದೈಹಿಕ ಸ್ಥಿತಿಗತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಆತನ ಇನ್ನಿತರ ಆರೋಗ್ಯದ ಅಂಶಗಳ ಮೇಲೂ ತೊಂದರೆ ಆಗುತ್ತದೆ. ಆದ್ದರಿಂದ ಮಾನಸಿಕ ಆರೋಗ್ಯವು ತನ್ನದೇ ಆದ ಪ್ರಾಶಸ್ತ್ಯ ಹೊಂದಿದೆ’ ಎಂದು ತಿಳಿಸಿದರು.

ಬುಡಮೇಲು ಮಾಡಿದೆ:‘ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಭೀತಿಯು ಜನರ ದೈನಂದಿನ ಜೀವನ ಕ್ರಮವನ್ನೇ ಬುಡ ಮೇಲು ಮಾಡಿದೆ. ಇದಕ್ಕೆಲ್ಲ ಅಂಜದೆ ಮಾನಸಿಕವಾಗಿ ಸದೃಢವಾಗಿರಬೇಕು. ಮಾಸ್ಕ್‌ ಧರಿಸುವುದುಹಾಗೂ ಅಂತರ ಕಾಯ್ದುಕೊಳ್ಳುವುದರಿಂದ ಕೊರೊನಾ ವಿರುದ್ಧದ ಹೋರಾಟ ಸುಲಭವಾಗಲಿದೆ’ ಎಂದು ಹೇಳಿದರು.

ಯುಎಸ್‌ಎಂ–ಕೆಎಲ್‌ಇಯ ವೈದ್ಯ ಸಿ.ಎನ್. ತುಗಶೆಟ್ಟಿ, ‘ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾಗೂ ಸಂಗಡಿಗರು ಅಥವಾ ವೈದ್ಯರ ಸಮಾಲೋಚನೆಯಿಂದ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ’ ಎಂದರು.

ಮೆಟ್ಟಿ ನಿಲ್ಲಬೇಕು:ಸಂಪನ್ಮೂಲ ವ್ಯಕ್ತಿಯಾಗಿದ್ದ ಮನೋವೈದ್ಯ ಡಾ.ಅಂಟೋನಿಯೊ ಕರವ್ಹಾಲೊ, ‘ಕಳೆದ ಡಿಸೆಂಬರ್‌ನಿಂದ ವಿಶ್ವದೆಲ್ಲೆಡೆ ಹಾಗೂ ಮಾರ್ಚನಿಂದ ಭಾರತದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಕೌಟುಂಬಿಕ ಸ್ಥಿತಿಗತಿಗಳ ಮೇಲೆ ಕೊರೊನಾ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಸಹನೀಯವಾಗಿ ಒತ್ತಡ ಹೇರುತ್ತಿದೆ. ಇದರಿಂದ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡ ವರದಿಗಳಿವೆ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಮನೋಭಾವ ತೋರಿದರೆ ಎಲ್ಲವನ್ನೂ ಸಮರ್ಥವಾಗಿ ಎದುರಿಸಬಹುದು’ ಎಂದು ಸಲಹೆ ನೀಡಿದರು.

ಕೆಎಲ್‌ಇ ಶತಮಾನೋತ್ಸವ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ವಿಕ್ರಾಂತ ನೇಸರಿ ಮಾತನಾಡಿದರು. ಡಾ.ಸತೀಶ ಧಾಮಣಕರ, ನರ್ಸಿಂಗ್ ಸೂಪರಿಂಟೆಂಡೆಂಟ್‌ ಇಂದುಮತಿ ವಾಘಮಾರೆ ಇದ್ದರು.

ಮಲ್ಲಿಕಾರ್ಜುನ ಮಾಯಣ್ಣವರ ಸ್ವಾಗತಿಸಿದರು. ಸಂತೋಷ ಇತಾಪೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT