ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ: ರಮೇಶಗೆ ಮುಸ್ಲಿಂ ಮತಗಳ ಚಿಂತೆ!

Last Updated 22 ನವೆಂಬರ್ 2019, 19:33 IST
ಅಕ್ಷರ ಗಾತ್ರ

ಬೆಳಗಾವಿ:ಗೋಕಾಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಮುಸ್ಲಿಮರ ಮತಗಳನ್ನು ಹೇಗೆ ಸೆಳೆಯಬೇಕೆನ್ನುವ ಚಿಂತೆ ಕಾಡುತ್ತಿದೆ.

ಮೂವತ್ತು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ಅವರು, ಈಚೆಗಷ್ಟೇ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಕ್ಷೇತ್ರದ ಬಹುತೇಕ ಮುಸ್ಲಿಮರು ರಮೇಶ ಜೊತೆಗಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಾಲ್ಮೀಕಿ ಸಮುದಾಯದ ರಮೇಶ, ಕಮಲವನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮ ಸಮುದಾಯದ ಜೊತೆಗೆ ಮುಸ್ಲಿಮರ ಮತಗಳು ಸೇರಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಅವರದು.

‘ಬಿಜೆಪಿಯು ಮುಸ್ಲಿಂ ವಿರೋಧಿ ಪಕ್ಷ ಎನ್ನುವ ಭಾವನೆ ಕ್ಷೇತ್ರದ ಬಹಳಷ್ಟು ಜನರಲ್ಲಿದೆ. ಈ ಭಾವನೆಯನ್ನು ಹೋಗಲಾಡಿಸಿ, ಅವರ ಮನದಲ್ಲಿಯೂ ಕಮಲ ಅರಳಿಸುವ ಸವಾಲು ನನ್ನ ಎದುರಿಗಿದೆ’ ಎಂದು ರಮೇಶ ಪ್ರಚಾರ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 2.42 ಲಕ್ಷ ಮತದಾರರಿದ್ದಾರೆ. ಇವರಲ್ಲಿ ಮುಸ್ಲಿಮರ ಸಂಖ್ಯೆಯೂ ಗಮನಾರ್ಹವಾಗಿದೆ. ಕೆಲವು ಮತಗಟ್ಟೆಗಳಲ್ಲಿ ಇವರೇ ನಿರ್ಣಾಯಕರು. ಹೀಗಾಗಿ, ಅವರ ಮನವೊಲಿಸಲು ಇನ್ನಿಲ್ಲದಂತೆ ಕಸರತ್ತು ನಡೆಸಿದ್ದಾರೆ.

ಇತ್ತೀಚೆಗೆ ಗೋಕಾಕದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಸವದತ್ತಿ ಶಾಸಕ ಆನಂದ ಮಾಮನಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ರಮೇಶ, ‘ಗೋಕಾಕಿನಲ್ಲಿರುವ ಮುಸ್ಲಿಮರು ನಮ್ಮ ಜೊತೆಯಲ್ಲಿ ಇದ್ದಾರೆ. ಹೀಗಾಗಿ ಅವರ ವಿರುದ್ಧ ಮಾತನಾಡಬಾರದು’ ಎಂದು ಹೇಳಿದ್ದರು.

ಮುಖಂಡರ ಸಭೆ:ಇತ್ತೀಚೆಗೆ ನಡೆದ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯಲ್ಲಿ ರಮೇಶ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅವರ ಜತೆಗಿನ ಇಷ್ಟು ವರ್ಷಗಳ ಒಡನಾಟವನ್ನು ನೆನಪಿಸಿ, ಮತಯಾಚಿಸಿದ್ದಾರೆ. ಆದರೆ, ಕೆಲವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ರಮೇಶ ಪರ ಒಲವು ಇರುವ ಮುಸ್ಲಿಮರು ಚುನಾವಣೆ ದಿನ ಮತದಾನದಿಂದ ದೂರ ಉಳಿಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

‘ರಮೇಶ, ಇತ್ತೀಚೆಗೆ ಜಮಾತ್‌ಗಳ ಮುಖಂಡರ ಸಭೆ ನಡೆಸಿದ್ದು ನಿಜ. ಆಗ, ಕೆಲವರು ಬಿಜೆಪಿಗೆ ಮತ ಹಾಕುವುದಿಲ್ಲವೆಂದು ಹೇಳಿದ್ದೂ ಸತ್ಯ. ಮತದಾನದಿಂದ ದೂರ ಉಳಿಯಲು ಊರು ಬಿಡುತ್ತಾರೆ ಎನ್ನುವುದು ಅವರ ವೈಯಕ್ತಿಕ ನಿರ್ಧಾರ’ ಎಂದು ರಮೇಶ ಬೆಂಬಲಿಗ, ನಗರಸಭೆ ಸದಸ್ಯ ಶೇಖ್‌ ಫತ್ತೇವುಲ್ಲಾ ಅಬ್ದುಲ್‌ ರೆಹಮಾನ್‌ ಕೋತ್ವಾಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT