ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓದುಗರ ಅಭಿರುಚಿಗೆ ತಕ್ಕಂತೆ ಬರೆಯಬೇಕು’

ಜಯಶ್ರೀ ಅಬ್ಬಿಗೇರಿ ವಿರಚಿತ ಸಪ್ತ ಕೃತಿಗಳ ಬಿಡುಗಡೆ
Last Updated 7 ಜುಲೈ 2019, 13:00 IST
ಅಕ್ಷರ ಗಾತ್ರ

ಬೆಳಗಾವಿ: ‘ಲೇಖಕರಾದವರು ಓದುಗರ ಅಭಿರುಚಿಗೆ ತಕ್ಕಂತೆ ಬರೆಯಬೇಕು’ ಎಂದು ಸಾಹಿತಿ ಡಾ.ಜಯದೇವಿ ಹುಲೆಪ್ಪನವರಮಠ ಸಲಹೆ ನೀಡಿದರು.

ಜಿಲ್ಲಾ ಲೇಖಕಿಯರ ಸಂಘ ಹಾಗೂ ಸಂಕೇಶ್ವರದ ಲೋಕವಿದ್ಯಾ ಪ್ರಕಾಶನದ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜಯಶ್ರೀ ಅಬ್ಬಿಗೇರಿ ವಿರಚಿತ ‘ಹಣ್ಣು ಬೇಕೆಂದರೆ ಮರ ಹತ್ತಬೇಕು’(ಚಿಂತನ ಲೇಖನಗಳು), ‘ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ’ (ವ್ಯಕ್ತಿತ್ವ ವಿಕಸನದ ಲೇಖನಗಳು), ‘ಜೇನಿನಗೂಡು ನಾವೆಲ್ಲ’ (ಅಂಕಣ ಬರಹಗಳು), ‘ಸಂತಸ ಅರಳುವ ಸಮಯ’ (ಭಾವನಾತ್ಮಕ ಲೇಖನಗಳು), ‘ಸಂಕಲ್ಪಗಳಿಗೆ ಈ ವೇಳೆಯೇ ಶುಭ ವೇಳೆ’ (ಪ್ರಸ್ತುತ ವಿದ್ಯಮಾನದ ಲೇಖನಗಳು), ‘ಎದೆಯ ಗೂಡಿನಲ್ಲಿ ಕದ್ದು ಮುಚ್ಚಿ’ (ಒಲವಿನೋಲೆಗಳು), ‘ನೀವು ನಿಮ್ಮ ಗುಳಿಗಿ ತಗೊಂಡ್ರಿಲ್ಲೊ?’ (ಹಾಸ್ಯ ಬರಹಗಳು) ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾವುದೇ ವಿಷಯದಿಂದ ಪ್ರಭಾವಿತರಾಗಬೇಕೇ ಹೊರತು, ಅದರಲ್ಲಿರುವ ವಸ್ತುವನ್ನು ಕದಿಯಬಾರದು. ಕದಿಯುವುದು, ನಮ್ಮತನಕ್ಕೆ ನಾವೇ ಮೋಸ ಮಾಡಿಕೊಂಡಂತೆ ಆಗುತ್ತದೆ. ಹೀಗಾಗಿ, ಬರವಣಿಗೆಯಲ್ಲಿ ನಮ್ಮದೇ ಶೈಲಿ ಇರಬೇಕು. ಆಗ ಓದುಗರು ನಮ್ಮನ್ನು ಗುರುತಿಸುತ್ತಾರೆ’ ಎಂದರು.

‘ಪತ್ರಿಕೆಗಳ ಓದುಗರ ಅಭಿರುಚಿ ಅರಿತುಕೊಂಡು ಬರೆಯುವುದೊಂದು ಕಲೆ. ಜಯಶ್ರೀ ಅವರಿಗೆ ಅದು ಸಿದ್ಧಿಸಿದೆ. ಅವರ ಕೃತಿಗಳಲ್ಲಿ ಪ್ರಸ್ತುತ ವಿಷಯಗಳ ಕುರಿತಂತೆ ಚುರುಕಾಗಿ ಬರೆದಿರುವ ಕೌಶಲ ಕಾಣಿಸುತ್ತದೆ. ತಂತ್ರಜ್ಞಾನದ ಸೌಲಭ್ಯಗಳನ್ನು ಬಳಿಸಿಕೊಂಡು ಅಚ್ಚುಕಟ್ಟಾಗಿ, ಸುಂದರ ಮುದ್ರಣದೊಂದಿಗೆ ಕೃತಿಗಳನ್ನು ಹೊರತಂದಿದ್ದಾರೆ. ಅನುಭವಿ ಲೇಖಕರ ಮುನ್ನುಡಿ, ಬೆನ್ನುಡಿಗಳಿವೆ. ಪುಸ್ತಕ ಪ್ರಕಟಣೆ ತುಂಬಾ ಶ್ರಮದ ಕೆಲಸ. ಇದನ್ನು ಸೊಗಸಾಗಿ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಮಾತನಾಡಿ, ‘ಇಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳನ್ನು ಗಮನಿಸಿದಾಗ, ಬೆಳಗಾವಿಯು ಧಾರವಾಡಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇದೆ. ಇದು ಸಂತಸದ ಸಂಗತಿ’ ಎಂದರು.

ಅರ್ಜುನ ಗೋಳಸಂಗಿ, ಎ.ಎಸ್. ಮಕಾನದಾರ ಹಾಗೂ ಸುನಂದಾ ಎಮ್ಮಿ ಕೃತಿಗಳನ್ನು ಪರಿಚಯಿಸಿದರು. ‘ಈ ಕೃತಿಗಳಲ್ಲಿ ವ್ಯಕ್ತಿತ್ವ ವಿಕಸನದ ಲೇಖನಗಳಿದ್ದು ಬದಕನ್ನು ಕಟ್ಟಿಕೊಡುವ ಕಾರ್ಯ ಮಾಡಿವೆ. ವರ್ತಮಾನಕ್ಕೆ ಕನ್ನಡಿಯಾಗಿವೆ. ಮಕ್ಕಳಿಗೆ ಕಿವಿಮಾತುಗಳಿವೆ, ಪಾಲಕರಿಗೆ ಸಲಹೆ– ಸೂಚನೆಗಳಿವೆ. ಜೀವನದ ಪ್ರತಿಯೊಂದು ಕ್ಷಣಗಳನ್ನು ಸಂಭ್ರಮಿಸಬೇಕೆಂಬ ಸಂದೇಶವಿದೆ. ಎಲ್ಲ ವಯೋಮಾನದವರೂ ಓದುವಂತಹ ಕೃತಿಗಳಾಗಿವೆ’ ಎಂದು ತಿಳಿಸಿದರು.

ಜಯಶ್ರೀ ಮಾತನಾಡಿ, ‘ಅಕ್ಷರ ಎಂದೂ ಬೆಲೆ ಕಳೆದುಕೊಳ್ಳದು. ಅಕ್ಷರದಲ್ಲಿರುವ ಶಕ್ತಿಯನ್ನು ನಾನಿಂದು ಕಂಡುಕೊಂಡಿದ್ದೇನೆ. ಇಷ್ಟೊಂದು ಬರೆಹಗಳನ್ನು ಬರೆಯಲು ಹೇಗೆ ಸಾಧ್ಯವಾಗುತ್ತದೆ ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಶ್ರದ್ಧೆ ಹಾಗೂ ಯೋಜನಾಬದ್ಧವಾದ ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು’ ಎಂದು ಹೇಳಿದರು.

ಅಕ್ಷಯಕುಮಾರ ಹಿರೇಮಠ ಹಾಗೂ ಎ.ಎ. ಸನದಿ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಲೋಕವಿದ್ಯಾ ಪ್ರಕಾಶನದ ಎಲ್.ವಿ. ಪಾಟೀಲ ಸ್ವಾಗತಿಸಿದರು. ಸುಮಾ ಕಿತ್ತೂರ ನಿರೂಪಿಸಿದರು. ಜಯಪ್ರಕಾಶ ಅಬ್ಬಿಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT