ಮಂಗಳವಾರ, ನವೆಂಬರ್ 19, 2019
22 °C
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

ಯಲ್ಲಮ್ಮನಗುಡ್ಡ: ತೊಂದರೆಯಾಗುವ ಮಳಿಗೆಗಳ ತೆರವು

Published:
Updated:

ಬೆಳಗಾವಿ: ‘ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ತೊಂದರೆಯಾಗುವ ರೀತಿಯಲ್ಲಿರುವಂತಹ ಮಳಿಗೆಗಳನ್ನು ಮತ್ತು ಗೂಡಂಗಡಿಗಳನ್ನು ಸರ್ವೇ ನಡೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಆ ವ್ಯಾಪಾರಿಗಳು ಬೀದಿಗೆ ಬೀಳದಂತೆ ನೋಡಿಕೊಳ್ಳಲು ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಯಲ್ಲಮ್ಮ ದೇವಸ್ಥಾನ ಸೇರಿದಂತೆ ರಾಜ್ಯದ ಇನ್ನೂ ಕೆಲವು ದೇವಾಲಯಗಳ ಆವರಣ, ಬೀದಿಗಳನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ದೇವಸ್ಥಾನ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎನ್ನುವ ಆರೋಪಗಳಿವೆ. ಈ ಕುರಿತು ಕೂಡ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘‌‌‌‌ರಾಜ್ಯದಲ್ಲಿ ಪ್ರವಾಸೋದ್ಯಮ‌ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ’ ರಚಿಸಿದ್ದಾರೆ. ಅದಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸುಧಾ ಮೂರ್ತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಈಗಾಗಲೇ ಹಲವು ಸಭೆಗಳು ನಡೆದಿವೆ. ಅದರಲ್ಲಿ, ಮುಜರಾಯಿ ದೇವಾಲಯಗಳ‌ನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎನ್ನುವುದನ್ನೂ ಪರಿಗಣಿಸಲಾಗುತ್ತದೆ. ಈ ಕುರಿತು ಕೂಡ ಶಿಫಾರಸು ಮಾಡಲಾಗುತ್ತದೆ. ಅತ್ಯಂತ ಪುರಾತನ, ಐತಿಹಾಸಿಕ ಹಾಗೂ ಇತಿಹಾಸವನ್ನು ಸಾರಿ ಹೇಳುವಂತಹ ಕಲಾಕೃತಿಗಳು ಇರುವಂಥ ದೇವಸ್ಥಾನಗಳನ್ನು ಇಲಾಖೆಯಿಂದ ಗುರುತು ಮಾಡುತ್ತಿದ್ದೇವೆ. ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಯಲ್ಲಮ್ಮ ದೇವಸ್ಥಾನದ‌ ಆವರಣದಲ್ಲಿ ರಾಸಾಯನಿಕ ಲೇಪಿತ ಕುಂಕುಮ ಮೊದಲಾದ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟವನ್ನು ಇಲಾಖೆ ಸಹಿಸುವುದಿಲ್ಲ. ಕುಂಕುಮ, ಶ್ರೀಗಂಧ ಸೇರಿದಂತೆ ಕಲಬೆರಕೆ ಇರುವುದು ಗಮನಕ್ಕೆ ಬಂದರೆ ತನಿಖೆ ನಡೆಸಲಾಗುವುದು. ಅವುಗಳನ್ನು ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)