ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪಿಯು ಫಲಿತಾಂಶ– ‘ಸೊನ್ನೆ’ ಸುತ್ತಿದ ಸಪ್ತ ಕಾಲೇಜುಗಳು!

ಉತ್ತೀರ್ಣರಾದವರಲ್ಲಿ ಬಾಲಕಿಯರದ್ದೇ ಮೇಲುಗೈ
Last Updated 16 ಏಪ್ರಿಲ್ 2019, 14:22 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 1 ಹಾಗೂಚಿಕ್ಕೋಡಿಯ 6 ಕಾಲೇಜುಗಳು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಗಳಿಸಿವೆ.

ಹಿಂದಿನ ಬಾರಿ ಚಿಕ್ಕೋಡಿಯ ಒಂದು ಕಾಲೇಜು ಮಾತ್ರ ಶೂನ್ಯ ಸಾಧನೆ ಮಾಡಿತ್ತು.

ಎರಡೂ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 325 ಪದವಿಪೂರ್ವ ಕಾಲೇಜುಗಳಿವೆ. ಈ ಪೈಕಿ, ಬೆಳಗಾವಿಯ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹೊರವಲಯದ ಕಣಬರಗಿಯ ಶ್ರೀಸಾಯಿ ಅಂಜನ ಪಿಯು ಕಾಲೇಜು, ಚಿಕ್ಕೋಡಿ ವ್ಯಾಪ್ತಿಯ ಗೋಕಾಕ ತಾಲ್ಲೂಕು ಮಮದಾಪುರದ ಸಿ. ಪಾವಟೆ ಪಿಯು ಕಾಲೇಜು, ರಾಯಬಾಗ ತಾಲ್ಲೂಕು ಕೋಳಿಗುಡ್ಡದ ಸ್ವತಂತ್ರ ಪಿಯು ಕಾಲೇಜು, ದುಗ್ಗೇವಾಡಿಯ ಜಿ.ಬಿ. ಚೌಗುಲೆ ಸ್ವತಂತ್ರ ಪಿಯು ಕಾಲೇಜು, ಹಾರೊಗೇರಿ ಕ್ರಾಸ್‌ನ ಬಿ.ಎಂ. ಅಸಣಗಿ ಪಿಯು ಕಾಲೇಜು, ಹಾರೊಗೇರಿಯ ನ್ಯಾಷನಲ್ ಪಿಯು ಕಾಲೇಜು ಮತ್ತು ಚಿಕ್ಕೋಡಿ ತಾಲ್ಲೂಕು ಕಬ್ಬೂರದ ಬಸವೇಶ್ವರ ಪಿಯು ಕಾಲೇಜುಗಳು ಕಳಪೆ ಸಾಧನೆ ತೋರಿವೆ. ಇವೆಲ್ಲವೂ ಅನುದಾನರಹಿತ ಕಾಲೇಜುಗಳು ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಖಂಡ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 42,693 ವಿದ್ಯಾರ್ಥಿಗಳ ಪೈಕಿ 25,063 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬೆಳಗಾವಿಯಲ್ಲಿ ಹಾಜರಾಗಿದ್ದ 19,677 ವಿದ್ಯಾರ್ಥಿಗಳಲ್ಲಿ 11,055 ಮಂದಿ ಉತ್ತೀರ್ಣರಾಗಿದ್ದಾರೆ. ಚಿಕ್ಕೋಡಿಯಲ್ಲಿ ಪರೀಕ್ಷೆ ಬರೆದವರು 23,016 ವಿದ್ಯಾರ್ಥಿಗಳು. ಇವರಲ್ಲಿ 14,008 ಮಂದಿ ಪಾಸಾಗಿದ್ದಾರೆ.

ಈ ಬಾರಿಯ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಪರೀಕ್ಷೆ ಬರೆದ 28,936 ಬಾಲಕರ ಪೈಕಿ 12,651 ಮಂದಿ (ಶೇ 43.42) ಉತ್ತೀರ್ಣರಾಗಿದ್ದಾರೆ. 23,587 ಬಾಲಕಿಯರ ಪೈಕಿ 15,130 ಬಾಲಕಿಯರು (ಶೇ 64.09) ತೇರ್ಗಡೆಯಾಗಿದ್ದಾರೆ.

ವಿಭಾಗವಾರು ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು (ಶೇ 56.99) ಅಗ್ರಸ್ಥಾನದಲ್ಲಿದ್ದಾರೆ.

ಕಲಾ ವಿಭಾಗ: ಬೆಳಗಾವಿಯಲ್ಲಿ 7,015ರಲ್ಲಿ 3,170 ಮಂದಿ ಉತ್ತೀರ್ಣರಾಗಿದ್ದಾರೆ. ಚಿಕ್ಕೋಡಿಯಲ್ಲಿ 10,562 ವಿದ್ಯಾರ್ಥಿಗಳ ಪೈಕಿ 5,583 ಮಂದಿ ‍ಪಾಸಾಗಿದ್ದಾರೆ.

ವಾಣಿಜ್ಯ: ಬೆಳಗಾವಿಯಲ್ಲಿ 7,549ರಲ್ಲಿ 4,696 ವಿದ್ಯಾರ್ಥಿಗಳು ತೇರ್ಗಡೆ. ಚಿಕ್ಕೋಡಿಯಲ್ಲಿ 7,108 ವಿದ್ಯಾರ್ಥಿಗಳ ಪೈಕಿ 5,005 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಿಜ್ಞಾನ: ಬೆಳಗಾವಿಯಲ್ಲಿ 5,113 ಮಂದಿಯಲ್ಲಿ 3,189 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಚಿಕ್ಕೋಡಿಯಲ್ಲಿ 5,346ರಲ್ಲಿ 3,420 ಮಂದಿ ಉತ್ತೀರ್ಣರಾಗಿದ್ದಾರೆ.

ಬೆಳಗಾವಿ ನಗರ ವಲಯದಲ್ಲಿ ಶೇ.56.69ರಷ್ಟು, ಗ್ರಾಮೀಣ ವಿಭಾಗದಲ್ಲಿ ಶೇ.54.73ರಷ್ಟು ಹಾಗೂ ಚಿಕ್ಕೋಡಿ ನಗರ ವಲಯದಲ್ಲಿ ಶೇ.58.09ರಷ್ಟು, ಗ್ರಾಮೀಣದಲ್ಲಿ ಶೇ.64.31ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 10 ಕಾಲೇಜುಗಳ ಫಲಿತಾಂಶವನ್ನು ತಾಂತ್ರಿಕ ಕಾರಣದಿಂದ ತಡೆಹಿಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT