ರೈತ ಮುಖಂಡರ ವಿರುದ್ಧ ಜಿಲ್ಲಾ ಪಂಚಾಯ್ತಿ ಸದಸ್ಯರ ಆಕ್ರೋಶ

7

ರೈತ ಮುಖಂಡರ ವಿರುದ್ಧ ಜಿಲ್ಲಾ ಪಂಚಾಯ್ತಿ ಸದಸ್ಯರ ಆಕ್ರೋಶ

Published:
Updated:

ಬೆಳಗಾವಿ: ‘ಈಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ಕೆಲವು ರೈತ ಮುಖಂಡರು ಅಕ್ರಮವಾಗಿ ಬಂದು, ಪ್ರತಿಭಟಿಸಿದ್ದರಿಂದ ನಮ್ಮ ಹಕ್ಕುಚ್ಯುತಿಯಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಜಿತೇಂದ್ರ ಮಾದರ, ‘ಕೆಲವರು ರೈತರು ಎಂದುಕೊಂಡು ಸಭೆಗೆ ಬಂದಿದ್ದರು. ಅವರ ವಿರುದ್ಧ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದೆವು ಹಾಗೂ ಹೊರ ಕಳುಹಿಸಿದ್ದೆವು. ನನ್ನೊಬ್ಬನ ವಿರುದ್ಧ ಮಾತ್ರವೇ ಮಾರ್ಕೆಟ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ‘ಬಿ’ ರಿಪೋರ್ಟ್‌ ಹಾಕಿ ಪ್ರಕರಣ ಮುಗಿಸಿದ್ದಾರೆ. ಆದರೆ, ಹೀಗೆ ಸಭೆಗೆ ಅಕ್ರಮವಾಗಿ ಬಂದು ನಮ್ಮ ವಿರುದ್ಧವೇ ದೂರು ಕೊಡುವುದು ಹಕ್ಕುಚ್ಯುತಿಯಲ್ಲವೇ?’ ಎಂದು ಕೇಳಿದರು.

ಇದಕ್ಕೆ ದನಿಗೂಡಿಸಿದ ಸದಸ್ಯರು, ದೂರು ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯ ನಿಂಗಪ್ಪ ಅರಕೇರಿ ಮಾತನಾಡಿ, ‘ಹೊಲವೇ ಇರುವುದಿಲ್ಲ, ಕೃಷಿಯನ್ನೇ ಮಾಡುವುದಿಲ್ಲವಾದರೂ ರೈತ ಮುಖಂಡರು ಎಂದು ಹೇಳಿಕೊಂಡು ಓಡಾಡುತ್ತಾರೆ. ಹಸಿರು ಶಾಲು ಹಾಕಿಕೊಂಡು ಓಡಾಡುತ್ತಾರೆ. ಅಂಥವರನ್ನು ಕ್ರಿಮಿನಲ್‌ಗಳೆಂದು ಪರಿಗಣಿಸಬೇಕು. ಸಭೆಗೆ ಬಂದು ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದಸ್ಯರ ಸಭೆಗೆ ಯಾರೂ ಅಕ್ರಮವಾಗಿ ಪ್ರವೇಶಿಸದಂತೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಸಿಇಒ ಆರ್. ರಾಮಚಂದ್ರನ್ ತಿಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !