ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೂ ಬಾರದ ಅಧ್ಯಕ್ಷೆ

ಭಾನುವಾರ, ಜೂಲೈ 21, 2019
22 °C
ಬಂಧನ ಬೀತಿ ಎದುರಿಸುತ್ತಿರುವ ಆಶಾ ಐಹೊಳೆ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೂ ಬಾರದ ಅಧ್ಯಕ್ಷೆ

Published:
Updated:
Prajavani

ಬೆಳಗಾವಿ: ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಪತಿ ಪ್ರಶಾಂತ ಐಹೊಳೆ ಬಂಧನವಾದ ಬಳಿಕ, ತಮ್ಮ ವಿರುದ್ಧವೂ ದಾಖಲಾದ ಪ್ರಕರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ ಬಂಧನ ಭೀತಿ ಎದುರಿಸುತ್ತಿರುವ ಜಿಲ್ಲಾ ಪ‍ಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮಂಗಳವಾರ ನಡೆದ ಸಾಮಾನ್ಯ ಸಭೆಗೂ ಅವರು ಹಾಜರಾಗಲಿಲ್ಲ.

ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸದಸ್ಯ ಜಿತೇಂದ್ರ ಮಾದರ, ‘ಅಧ್ಯಕ್ಷರ ವಿರುದ್ಧ ಮಾಧ್ಯಮದಲ್ಲಿ ಹಲವು ಸುದ್ದಿಗಳು  ಬರುತ್ತಿವೆ. ವಂಚನೆ ಆರೋಪವೂ ಕೇಳಿಬಂದಿದೆ. ಕಚೇರಿಗೂ ಬರುತ್ತಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿಸಬೇಕು’ ಎಂದು ಒತ್ತಾಯಿಸಿದರು. ಹಲವು ಸದಸ್ಯರು ಇದಕ್ಕೆ ದನಿಗೂಡಿಸಿದರು.

ಪ್ರತಿಕ್ರಿಯಿಸಿದ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಬೆಳಿಗ್ಗೆ ಕರೆ ಮಾಡಿದ್ದ ಅಧ್ಯಕ್ಷರು ಅನಾರೋಗ್ಯದ ಕಾರಣದಿಂದ ಸಭೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಉಪಾಧ್ಯಕ್ಷ ಅರುಣ ಕಟಾಂಬಳೆ ಅಧ್ಯಕ್ಷತೆ ವಹಿಸಿದ್ದಾರೆ’ ಎಂದು ತಿಳಿಸಿದರು.

‘ಅಧ್ಯಕ್ಷರೇ ಸಾಮಾನ್ಯ ಸಭೆಗೆ ಬಾರದಿದ್ದರೆ ಹೇಗೆ? ಅನಾರೋಗ್ಯ ಕಾರಣವೋ, ಬೇರೆಯದೋ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು’ ಎಂದು ಜಿತೇಂದ್ರ ಪಟ್ಟು ಹಿಡಿದರು.

‘ತಮ್ಮ ವಿರುದ್ಧ ಆರೋಪ ಕೇಳಿಬಂದ ಕೂಡಲೇ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕಿತ್ತು’ ಎಂದು ಸದಸ್ಯ ರಮೇಶ ದೇಶಪಾಂಡೆ ಹೇಳಿದರು.

‘ಅಧ್ಯಕ್ಷರು ಆರೋಗ್ಯದ ಸಮಸ್ಯೆ ಎಂದು ಹೇಳಿರುವುದರಿಂದ, ಹೆಚ್ಚಿನ ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ. ಅವರು ಹೇಳುವುದನ್ನು ನಂಬಬೇಕಾಗುತ್ತದೆ. ಅವರ ವಿರುದ್ಧ ಕೇಳಿಬಂದಿರುವ ಆರೋಪದ ವಿಷಯ ಜಿಲ್ಲಾ ಪಂಚಾಯ್ತಿಗೆ ಸಂಬಂಧಿಸಿದ್ದಲ್ಲ. ಹೀಗಾಗಿ, ಆ ಬಗ್ಗೆ ಚರ್ಚೆ ಅಗತ್ಯವಿಲ್ಲ’ ಎಂದು ಹೇಳಿದ ಸಿಇಒ ಚರ್ಚೆಗೆ ತೆರೆ ಎಳೆದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಅಧ್ಯಕ್ಷೆ ಜಿಲ್ಲಾ ಪಂಚಾಯ್ತಿಗೆ ಸರಿಯಾಗಿ ಬರುತ್ತಿಲ್ಲದಿರುವುದು ಗಮನಕ್ಕೆ ಬಂದಿದೆ. ಮೊಬೈಲ್ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನುವುದು ಸದಸ್ಯರ ದೂರಾಗಿದೆ. ಹೀಗಾಗಿ, ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಶೀಘ್ರವೇ ಪಕ್ಷದ ಸದಸ್ಯರ ಸಭೆ ಕರೆದು ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !