ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಆರೋಪ ಪ್ರಕರಣ: ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಗೆ ಬಂಧನ ಭೀತಿ

ಪತಿ ಪ್ರಶಾಂತ ಐಹೊಳೆ ಬಂಧನ
Last Updated 2 ಜೂನ್ 2019, 9:06 IST
ಅಕ್ಷರ ಗಾತ್ರ

ಬೆಳಗಾವಿ: ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಪತಿ ಪ್ರಶಾಂತ ಐಹೊಳೆ ಬಂಧನವಾದ ಬಳಿಕ, ಈಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಕೂಡ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಠೇವಣಿ ವಂಚನೆಗೆ ಸಂಬಂಧಿಸಿದಂತೆ ದಾಖಲಾದ ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಆಶಾ ಐಹೊಳೆ ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿ ಮೇ 28ರಂದು ಆದೇಶ ನೀಡಿದೆ. ಪರಿಣಾಮ, ಅವರಿಗೀಗ ಸಂಕಷ್ಟ ಎದುರಾಗಿದೆ.

ಅಥಣಿಯ ಮಹಾಲಕ್ಷ್ಮಿ ಮಲ್ಟಿಟ್ರೇಡ್‌ ಡಿಸ್ಟ್ರಿಬ್ಯೂಷನ್‌ ಸಂಸ್ಥೆಯ ಮಾಲೀಕರು ಮತ್ತು ನಿರ್ದೇಶಕಿ ಕ್ರಮವಾಗಿ ಎನ್‌. ಪ್ರಶಾಂತ ಐಹೊಳೆ ಹಾಗೂಆಶಾ ಐಹೊಳೆ ವಿರುದ್ಧ ಕಾಗವಾಡ ತಾಲ್ಲೂಕು ಉಗಾರ್‌ಬುದ್ರಕ ಗ್ರಾಮದ ಧರೆಪ್ಪ ಸತ್ಯಪ್ಪ ಕುಸುನಾಳೆ ಮೇ 6ರಂದು ಅಥಣಿ ಠಾಣೆಯಲ್ಲಿ 420, 406, 506 ಕಲಂ ಅಡಿ ಠೇವಣಿ ವಂಚನೆ ಪ್ರಕರಣ ದಾಖಲಿಸಿದ್ದರು. 2011ರಲ್ಲಿ ಠೇವಣಿ ಇಟ್ಟಿದ್ದ ₹50ಸಾವಿರವನ್ನು ಅವಧಿ ಮುಗಿದರೂ ಪಾವತಿಸುತ್ತಿಲ್ಲ. ಬದಲಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯ ದೊರಕಿಸಿಕೊಡಬೇಕು ಎಂದು ಧರೆಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸ್‌ ಬಂಧನದಿಂದ ತಪ್ಪಿಸಿಕೊಳ್ಳಲು ಆಶಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮೇ 23ರಿಂದ 4 ಬಾರಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ‘ವಿಶೇಷ ಪ್ರಕರಣ ಹೊರತುಪಡಿಸಿದ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ, ಠೇವಣಿ ವಂಚನೆ ಪ್ರಕರಣಗಳಲ್ಲಿ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ’ ಎನ್ನುವ ಆಧಾರದ ಮೇಲೆ ನ್ಯಾಯಾಧೀಶ ಆರ್‌.ಜೆ. ಸತೀಶ ಸಿಂಗ್‌ ಜಾಮೀನು ಅರ್ಜಿ ತಿರಸ್ಕೃರಿಸಿ ಮೇ 28ರಂದು ಆದೇಶ ಹೊರಡಿಸಿದ್ದಾರೆ.

ಮಹಾಲಕ್ಷ್ಮಿ ಎಸ್ಟೇಟ್ಸ್‌ ಸಂಸ್ಥೆ ಮೂಲಕ ನಿವೇಶನ ನೀಡುವುದಾಗಿ ನಂಬಿಸಿ ಪ್ರಶಾಂತ ಐಹೊಳೆ ₹ 2 ಲಕ್ಷ ಪಡೆದಿದ್ದರು. ನಿವೇಶನ ನೀಡದೇ, ಹಣ ಕೂಡ ವಾಪಸ್‌ ಕೊಡದೇ ವಂಚಿಸಿದ್ದಾರೆ ಎಂದು ಅಥಣಿಯ ಸಂಜಯ ಸಂಕಪಾಲಕರ್‌ ಏ. 27ರಂದು ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಂಜಯ ಸಂಕಪಾಲಕರ್‌ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಮೇ 17ರಂದು ಪ್ರಶಾಂತ ಐಹೊಳೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆ ಆಗಿರುವ ಕುರಿತು ಮಾಹಿತಿ, ದಾಖಲೆ ಸಂಗ್ರಹಿಸಲಾಗುತ್ತಿದೆ. ತನಿಖೆ ನಡೆಯುತ್ತಿದೆ’ ಎಂದು ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT