ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದೆಯಾಗುವೆನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ!

ಚಿಕ್ಕೋಡಿ ಕ್ಷೇತ್ರದ ಮಾಜಿ ಸಂಸದೆ ರತ್ನಮಾಲಾ ಸವಣೂರ
Last Updated 26 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜಕೀಯ ಎನ್ನುವುದು ಅದೃಷ್ಟದ ಆಟವಿದ್ದಂತೆ. ನಾನು ಯಾವತ್ತೂ ಸಂಸದಳಾಗುತ್ತೇನೆ. ಕೇಂದ್ರ ಸಚಿವೆಯಾಗುತ್ತೇನೆ ಎಂದುಕೊಂಡಿರಲಿಲ್ಲ. ಅದೃಷ್ಟವೇ ನನ್ನನ್ನು ಅಲ್ಲಿಯವರೆಗೆ ಕರೆದುಕೊಂಡು ಹೋಗಿತ್ತು...’

ಸತತ ಏಳುಬಾರಿ ಸಂಸದರಾಗಿದ್ದ ಕಾಂಗ್ರೆಸ್‌ನ ಬಿ.ಶಂಕರಾನಂದ ಅವರನ್ನು ಮೊದಲ ಚುನಾವಣೆಯಲ್ಲಿಯೇ ಸೋಲಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಜನತಾ ದಳದ ರತ್ನಮಾಲಾ ಸವಣೂರ ಅವರ ಮಾತುಗಳಿವು.

1996ರಲ್ಲಿ ಚಿಕ್ಕೋಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು, ಐ.ಕೆ. ಗುಜ್ರಾಲ್‌ ಅವರ ಸರ್ಕಾರದಲ್ಲಿ ಯೋಜನಾ ಹಾಗೂ ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವೆಯಾಗಿದ್ದರು. ತಾವು ಎದುರಿಸಿದ ಮೊದಲ ಚುನಾವಣೆಯ ನೆನಪುಗಳನ್ನು ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡಿದ್ದಾರೆ.

ರಾಮಕೃಷ್ಣ ಹೆಗಡೆ ಅವರ ದೂರದೃಷ್ಟಿ

1990ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಜನತಾ ದಳದ ಪ್ರಮುಖ ನಾಯಕರಾಗಿದ್ದರು. 1996ರ ಲೋಕಸಭೆಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದರು. ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಶಂಕರಾನಂದ ಏಳು ಬಾರಿ ಸತತ ಗೆಲುವು ಸಾಧಿಸಿದ್ದರು. ಇವರನ್ನು ಮಣಿಸಬಲ್ಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದರು.

ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹೇಗೆ ಎನ್ನುವ ಚಿಂತನೆ ಮಾಡಿದರು. ಅದರ ಫಲವಾಗಿ ರತ್ನಮಾಲಾ ಸವಣೂರ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂದಿತು.

‘ಮನೆಯಿಂದ ಹೊರಹೋಗದ ನಾನು ಚುನಾವಣೆ ನಿಲ್ಲುತ್ತೇನೆ ಎಂದುಕೊಂಡಿರಲಿಲ್ಲ. ಆದರೆ, ತಂದೆ ಹಾಗೂ ಕುಟುಂಬ ಸದಸ್ಯರ ಒತ್ತಾಯದಿಂದಾಗಿ ಸ್ಪರ್ಧಿಸಿದೆ. ಹೆಣ್ಣುಮಗಳು ಚುನಾವಣೆಗೆ ನಿಂತಿದ್ದಾಳೆ ಎಂದುಕೊಂಡು ಹಲವರು ಸಹಾಯ ಮಾಡಿದರು’ ಎಂದು ನೆನಪುಗಳನ್ನು ಸ್ಮರಿಸಿಕೊಂಡರು.

‘ಅಂದು ಶಾಸಕರಾಗಿದ್ದ ಎ.ಬಿ. ಪಾಟೀಲ ಬಹಳಷ್ಟು ಸಹಾಯ ಮಾಡಿದರು. ಭಾಷಣ ಹೇಗೆ ಮಾಡಬೇಕು, ಸಾರ್ವಜನಿಕ ಸಭೆ– ಸಮಾರಂಭಗಳಲ್ಲಿ ಹೇಗೆ ನಡೆದುಕೊಳ್ಳಬೇಕು, ಜನರ ಜೊತೆ ಹೇಗೆ ಬೆರೆಯಬೇಕು ಎನ್ನುವುದನ್ನು ಹೇಳಿಕೊಟ್ಟರು. ಚುನಾವಣೆಯಲ್ಲಿ ನನ್ನ ಪರ ಸಾಕಷ್ಟು ಪ್ರಚಾರ ಮಾಡಿದರು. ನನ್ನ ಗೆಲುವಿನಲ್ಲಿ ಅವರ ಬಹುದೊಡ್ಡ ಕೊಡುಗೆ ಇದೆ’ ಎಂದರು.

‘ಆಗ ನನಗೆ ಪಕ್ಷದ ಕಡೆಯಿಂದ ಬಂದಿದ್ದ ಪಾರ್ಟಿ ಫಂಡ್‌ ಹಣವನ್ನಷ್ಟೇ ನಾನು ಖರ್ಚು ಮಾಡಿದ್ದೆ. ಹೆಚ್ಚಿಗೆ ಖರ್ಚು ಮಾಡಲು ನನ್ನ ಬಳಿ ಹಣ ಇರಲಿಲ್ಲ. ಆಗ ಜನರು ಕೂಡ ಹಣದ ಅಪೇಕ್ಷೆಯನ್ನು ಅಷ್ಟಾಗಿ ಮಾಡುತ್ತಿರಲಿಲ್ಲ. ಶಂಕರಾನಂದ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಕೆಲಸ ಮಾಡಿಲ್ಲವೆನ್ನುವ ಆಕ್ರೋಶವಿತ್ತು. ಇದೇ ನನಗೆ ಗೆಲುವು ತಂದುಕೊಟ್ಟಿತು’ ಎಂದು ಹೇಳಿದರು.

‘ನಾನು ಎದುರಿಸಿದ ಚುನಾವಣೆಗೂ, ಇಂದಿನ ಚುನಾವಣೆಗೂ ಜಮೀನು– ಆಕಾಶದ ವ್ಯತ್ಯಾಸವಿದೆ. ಇಂದು ಹಣವಿಲ್ಲದೇ ಯಾವ ಮಾತುಗಳೂ ಇಲ್ಲ. ಎಲ್ಲರೂ ಹಣ ಕೇಳುತ್ತಾರೆ, ಹಣ ಮಾಡುವುದಕ್ಕಾಗಿಯೇ ರಾಜಕಾರಣ ಎನ್ನುವಂತಾಗಿದೆ’ ಎಂದು ನುಡಿದರು.

ಮಹಿಳೆಯರಿಗೆ ಅವಕಾಶ ಕಡಿಮೆ

‘ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಯಲ್ಲಿ ಮಾತ್ರ ಮಹಿಳಾ ಮೀಸಲಾತಿ ಇದೆ. ಆದರೆ, ಲೋಕಸಭೆ– ವಿಧಾನಸಭೆಯಲ್ಲಿ ಇನ್ನೂ ಮೀಸಲಾತಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಹಣವಂತರು ಹಾಗೂ ಬಲಾಢ್ಯ ಪುರುಷರೇ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಹೇಳಿದರು.

‘ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕೆಂದು ಹೇಳುವುದೆಲ್ಲ ಬಾಯಿ ಮಾತಿನ ಹೇಳಿಕೆಗಳಾಗಿವೆ. ಇವುಗಳನ್ನು ಯಾರೂ ಜಾರಿಗೆ ತರುತ್ತಿಲ್ಲ. ಗಂಡು– ಹೆಣ್ಣಿನ ಭೇದಭಾವ ಹೆಚ್ಚಾಗುತ್ತಿದೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT