ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಪ್ರವಾಹ | ಬೆಳಗಾವಿ ಜಿಲ್ಲೆಯಲ್ಲಿ ₹ 10ಸಾವಿರ ಕೋಟಿ ನಷ್ಟ

ಈವರೆಗೆ ಬಿಡುಗಡೆಯಾಗಿದ್ದು ₹ 167 ಕೋಟಿ: ಜಿಲ್ಲಾಧಿಕಾರಿ ಮಾಹಿತಿ
Last Updated 20 ಸೆಪ್ಟೆಂಬರ್ 2019, 14:28 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ₹ 10ಸಾವಿರ ಕೋಟಿ ನಷ್ಟ ಸಂಭವಿಸಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದಿಂದ ಈವರೆಗೆ ₹ 167 ಕೋಟಿ ಬಿಡುಗಡೆಯಾಗಿದೆ. ಸಂತ್ರಸ್ತ ಕುಟುಂಬಗಳಿಗೆ ₹ 10ಸಾವಿರ ತಾತ್ಕಾಲಿಕ ಪರಿಹಾರ ನೀಡಲು ಇದನ್ನು ಬಳಸಿಕೊಳ್ಳಲಾಗಿದೆ. ₹ 8 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿದೆ’ ಎಂದು ಮಾಹಿತಿ ನೀಡಿದರು.

‘ನೆರೆಯಿಂದಾಗಿ 28 ಮಂದಿ ಮೃತ‍ಪಟ್ಟಿದ್ದಾರೆ. 25 ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. 750 ಜಾನುವಾರುಗಳು ಮೃತಪಟ್ಟಿವೆ. ಆರಂಭದಲ್ಲಿ 1.64 ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ ನಡೆಸಿದ ಸಮೀಕ್ಷೆ ಪ್ರಕಾರ 69,183 ಮನೆಗಳಿಗೆ ಹಾನಿ ಆಗಿರುವುದು ದೃಢಪಟ್ಟಿದೆ. 40ಸಾವಿರ ಮನೆಗಳ ಜಿಪಿಎಸ್ ಕಾರ್ಯ ಪೂರ್ಣಗೊಂಡಿದೆ’ ಎಂದು ಸ್ಪಷ್ಟಪಡಿಸಿದರು.

‘ಮುಂಗಾರಿನಲ್ಲಿ 6.60 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿತ್ತು. ನೆರೆಯಿಂದಾಗಿ 2.77 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳೆ ಸಮೀಕ್ಷೆ ಶೀಘ್ರವೇ ಪೂರ್ಣಗೊಳಿಸಲಾಗುವುದು. ಮನೆಗಳನ್ನು ನಿರ್ಮಿಸಿಕೊಡಲು ಅನುದಾನ ಬೇಕಾಗಿದೆ’ ಎಂದು ತಿಳಿಸಿದರು.

ಮರುಸಮೀಕ್ಷೆ ನಡೆಸಿ:

ಶಾಸಕ ಆನಂದ ಮಾಮನಿ ಮಾತನಾಡಿ, ‘ಮೊದಲು ಪ್ರವಾಹ ಬಂದಾಗ ಭಾಗಶಃ ಬಿದ್ದಿದ್ದ ಮನೆಗಳು ಮತ್ತೊಮ್ಮೆ ಪ್ರವಾಹ ಬಂದಾಗ ಸಂಪೂರ್ಣವಾಗಿ ಬಿದ್ದಿವೆ. ಹೀಗಾಗಿ ಮರು ಸಮೀಕ್ಷೆ ನಡೆಸಬೇಕು. ಹೆಸರು, ಜೋಳ, ಹತ್ತಿ, ಸೋಯಾಬೀನ್ ಸಂಪೂರ್ಣ ನಾಶವಾಗಿದೆ. ಮುನವಳ್ಳಿಯಲ್ಲಿ ಅಂಗಡಿಗಳೆಲ್ಲಾ ಮುಳುಗಿದ್ದವು. ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗಿದೆ. ನೇಕಾರರು ಬೀದಿಗೆ ಬಂದಿದ್ದಾರೆ. ಇವರೆಲ್ಲರಿಗೂ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ಮನೆಗಳು ಶೇ 50ರಷ್ಟು ಹಾನಿಯಾಗಿದ್ದರೆ ಸಂಪೂರ್ಣ ಕುಸಿದಿದೆ ಎಂದೇ ಪರಿಗಣಿಸಿ ಪರಿಹಾರ ಕೊಡಬೇಕು. ಪರಿಹಾರ ಕೇಂದ್ರಕ್ಕೆ ಹೋಗಿಲ್ಲದಿದ್ದ ಸಂತ್ರಸ್ತ ಕುಟುಂಬಗಳಿಗೂ ತಲಾ ₹10ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಶಾಸಕ ದುರ್ಯೋಧಯ ಐಹೊಳೆ ಮಾತನಾಡಿ, ‘ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದರು.

ತಕ್ಷಣಕ್ಕೆ ₹ 1 ಲಕ್ಷ ಬಿಡುಗಡೆ:

ಸಚಿವ ಶೆಟ್ಟರ್‌ ಮಾತನಾಡಿ, ‘ಸಂಪೂರ್ಣ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಆರಂಭಿಸಲು ತಕ್ಷಣವೇ ಒಂದು ₹ 1 ಲಕ್ಷ ಬಿಡುಗಡೆಗೆ ನಿರ್ಧರಿಸಲಾಗಿದೆ. ಇದಕ್ಕಾಗಿ ₹ 1ಸಾವಿರ ಕೋಟಿ ಬಿಡುಗಡೆಗೆ ಶೀಘ್ರ ಆದೇಶ ಹೊರಡಿಸಲಾಗುವುದು. ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಎನ್.ಡಿ.ಆರ್.ಎಫ್. ಜೊತೆಗೆ ರಾಜ್ಯ ಸರ್ಕಾರ ಕೂಡ ವಿಶೇಷ ಪರಿಹಾರ ಪ್ರಕಟಿಸಲಿದೆ’ ಎಂದು ತಿಳಿಸಿದರು.

‘ಹಾನಿ ಸರಿಪಡಿಸಿ ಸಹಜ ಸ್ಥಿತಿಗೆ ತರುವುದು ಸರ್ಕಾರದ ಆದ್ಯತೆಯಾಗಿದೆ. ಜಿಲ್ಲೆಗೆ ತಕ್ಷಣ ₹ 200 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದರು.

‘ಪ್ರವಾಹಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ₹ 500 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿ ಆಗಿರುವುದರಿಂದ ಸಾಲ ವಸೂಲಿ ಪ್ರಕ್ರಿಯೆ ಸ್ಥಗಿತಗೊಳಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಆದಾಗ್ಯೂ ವಸೂಲಿಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರ ಸಾಲ ಮನ್ನಾ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಲು ಸಮಯ ಸಿಗಲೆಂಬ ಕಾರಣಕ್ಕೆ, ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT