ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: 21 ಕೆರೆಗಳಿಗೆ ಬಂತು ಜೀವ ಕಳೆ

ತುಂಗಭದ್ರಾ ನದಿಯಿಂದ ಪೈಪ್‌ಲೈನ್‌ನಿಂದ ಕೆರೆ ಭರ್ತಿ; ಅಂತರ್ಜಲ ಮಟ್ಟ ಹೆಚ್ಚಳ
Last Updated 28 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಸತತ ನಾಲ್ಕು ವರ್ಷಗಳಿಂದ ಬರ ಪೀಡಿತವಾಗಿರುವ ಪ್ರದೇಶದಲ್ಲಿ ಈ ವರ್ಷವೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆದರೆ, ಇಲ್ಲಿನ ಕೆರೆ, ಕಟ್ಟೆಗಳು ಮೈದುಂಬಿಕೊಂಡಿವೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ. ರೈತರ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿವೆ!

ಅಚ್ಚರಿ ಎನಿಸಿದರೂ ಇದು ನಿಜ ಸಂಗತಿ. ಜಲ ಸಂಪನ್ಮೂಲ ಇಲಾಖೆಯು ತುಂಗಭದ್ರಾ ನದಿಯಿಂದ ಪೈಪ್‌ಲೈನ್‌ ಮೂಲಕ ಕೆರೆಗಳನ್ನು ತುಂಬಿಸಿದರ ಫಲವಾಗಿ ಇಷ್ಟೆಲ್ಲ ಬದಲಾಗಿದೆ. ಅಂತಹದ್ದೊಂದು ಬದಲಾವಣೆಗೆ ಸಾಕ್ಷಿಯಾಗಿದೆಬಳ್ಳಾರಿ ಜಿಲ್ಲೆಯ ಮಲ್ಲಿಗೆ ನಾಡಿನ ಖ್ಯಾತಿಯ ಹೂವಿನಹಡಗಲಿ ತಾಲ್ಲೂಕು.

ತಾಲ್ಲೂಕು ವ್ಯಾಪ್ತಿಯ ಒಟ್ಟು 21 ಕೆರೆಗಳನ್ನು ತುಂಬಿಸಲಾಗಿದೆ. ಕೆರೆ ವ್ಯಾಪ್ತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು, ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ, ಕೆರೆಗಳನ್ನು ತುಂಬಿಸಿರುವುದರಿಂದ ಆಯಾ ಕೆರೆ ವ್ಯಾಪ್ತಿಯ ಐದು ಕಿ.ಮೀ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿದೆ.

ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ನೀರು ಚಿಮ್ಮಿದೆ. ಮಳೆಯಾಶ್ರಿತ ಬೆಳೆ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತರೀಗ ಕಬ್ಬು, ಭತ್ತ ಬೆಳೆಯುತ್ತಿದ್ದಾರೆ. ಈಗ ಅವರು ಮಳೆಗಾಗಿ ಕಾದು ಕೂರುವ ಪ್ರಮೇಯಇಲ್ಲ.

ಒಟ್ಟು ₹124 ಕೋಟಿ ಮೊತ್ತದ ಯೋಜನೆಯನ್ನು2017ರ ಜೂನ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆರಂಭದಲ್ಲಿ ಹತ್ತು ಕೆರೆಗಳನ್ನು ತುಂಬಿಸಲಾಯಿತು. ಉತ್ತಮ ಫಲ ಸಿಕ್ಕಿದ್ದರಿಂದ ಎರಡನೇ ಹಂತದಲ್ಲಿ 11 ಕೆರೆಗಳನ್ನು ಭರ್ತಿ ಮಾಡಲಾಯಿತು. ತಾಲ್ಲೂಕಿನ ಮಾಗಳ, ಶಾಕಾರ, ಹುಗಲೂರು ಮತ್ತು ಹೊನ್ನನಾಯಕನಹಳ್ಳಿಯಲ್ಲಿ ಜಾಕ್‌ವೆಲ್‌ ನಿರ್ಮಿಸಿ, ಅಲ್ಲಿಂದ ಪೈಪ್‌ಲೈನ್‌ ಮೂಲಕ ಹಿರೇಹಡಗಲಿ, ಹಗರನೂರು, ದೇವಗೊಂಡನಹಳ್ಳಿ, ಮುದೇನೂರು, ತಳಕಲ್ಲು, ಹಿರೇಮಲ್ಲನಕೆರೆ, ಹ್ಯಾರಡ, ದಾಸನಹಳ್ಳಿ, ಬನ್ನಿಕಲ್ಲು ಸೇರಿದಂತೆ ಒಟ್ಟು 21 ಕೆರೆಗಳನ್ನು ತುಂಬಿಸಲಾಗಿದೆ.

ಆರಂಭದಲ್ಲಿ ಗದ್ದೆಗಳ ಮೂಲಕ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಂಡಿದ್ದಾಗ, ‘ಪರಿಹಾರ ಕೊಡದೆ ಪೈಪ್‌ ಹಾಕುವುದು ಬೇಡ’ ಎಂದು ರೈತರು ಆಕ್ಷೇಪ ಎತ್ತಿದ್ದರು. ಅಧಿಕಾರಿಗಳು ಪರಿಹಾರದ ಭರವಸೆ ಕೊಟ್ಟ ಬಳಿಕ ರೈತರು ಸಹಕರಿಸಿದ್ದರು. ಎರಡು ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ಆದರೆ, ಅವರ ಕೊಳವೆಬಾವಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದಿರುವುದರಿಂದ ಅವರು ಖುಷಿಗೊಂಡಿದ್ದಾರೆ. ‘ಪರಿಹಾರ ಸಿಗುವುದು ವಿಳಂಬವಾದರೂ ಆಗಲಿ’ ಎಂಬ ಮಾತುಗಳನ್ನು ಈಗ ರೈತರು ಆಡುತ್ತಿದ್ದಾರೆ.

‘ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ದೂರವಾಗಿದೆ. ನಮ್ಮ ಕೊಳವೆಬಾವಿಗಳಲ್ಲಿ ನೀರು ಬಂದಿರುವುದರಿಂದ ರೈತಾಪಿ ಮಾಡಲು ಅನುಕೂಲವಾಗಿದೆ. ಜಾನುವಾರುಗಳಿಗೆ ನೀರು, ಮೇವಿಗಾಗಿ ಊರೂರು ಅಲೆಯುವ ಸ್ಥಿತಿಯಿತ್ತು. ಈಗ ಎಲ್ಲವೂ ಊರಿನಲ್ಲೇ ಸಿಗುತ್ತಿದೆ’ ಎನ್ನುತ್ತಾರೆ ಹಿರೇಹಡಗಲಿಯ ರೈತ ಗುಂಡಿ ಚರಣರಾಜ್‌.

‘ನಾನು ಚಿಕ್ಕವನಿದ್ದಾಗ ಒಂದೋ, ಎರಡೋ ಸಲ ನಮ್ಮೂರಿನ ಕೆರೆ ಪೂರ್ಣ ತುಂಬಿರುವುದು ನೋಡಿದೆ. ಅನಂತರ ಉತ್ತಮ ಮಳೆಯಾಗಲಿಲ್ಲ. ಕೆರೆಯೂ ತುಂಬಲಿಲ್ಲ. ಈಗ ಭರ್ತಿಯಾಗಿದೆ’ ಎಂದು ಹ್ಯಾರಡದ ರೈತ ಮಂಜುನಾಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT