₨300ರ ಚೆಕ್‌ಗೆ ₨250 ಶುಲ್ಕ!

7

₨300ರ ಚೆಕ್‌ಗೆ ₨250 ಶುಲ್ಕ!

Published:
Updated:

ಹೊಸಪೇಟೆ: ₨300ರ ಚೆಕ್‌ ಕ್ಲಿಯರ್‌ಗಾಗಿ ನಗರದ ಇಂಡಿಯನ್‌ ಬ್ಯಾಂಕ್‌ ಗ್ರಾಹಕರೊಬ್ಬರಿಗೆ ₨250 ಶುಲ್ಕ ವಿಧಿಸಿದೆ.

ಇಲ್ಲಿನ ಪುಣ್ಯಮೂರ್ತಿ ವೃತ್ತದ ಶಾರದಾ ಬುಕ್‌ಸ್ಟಾಲ್‌ನವರಿಗೆ ಐ.ಸಿ.ಐ.ಸಿ.ಐ. ಬ್ಯಾಂಕಿನವರು ಒಂದು ತಿಂಗಳ ದಿನಪತ್ರಿಕೆಯ ಹಣವನ್ನು ಮೇ 23ರಂದು ₨300 ಅನ್ನು ಚೆಕ್‌ ರೂಪದಲ್ಲಿ ನೀಡಿದ್ದಾರೆ. ಬುಕ್‌ಸ್ಟಾಲ್‌ ಮಾಲೀಕ ವೆಂಕಟೇಶ್‌ ಕುಡಿತಿನಿ ಅವರು ಆ ಚೆಕ್‌ ಅನ್ನು ನಗರದ ಇಂಡಿಯನ್‌ ಬ್ಯಾಂಕಿನ ಅವರ ಖಾತೆಗೆ ಇದೇ 14ರಂದು ಜಮಾ ಮಾಡಿದ್ದಾರೆ. ಐ.ಸಿ.ಐ.ಸಿ.ಐ. ಬ್ಯಾಂಕಿನ ಕನೆಕ್ಟಿವಿಟಿ ಸಮಸ್ಯೆಯಿಂದ ಇಂಡಿಯನ್‌ ಬ್ಯಾಂಕಿನವರು ಚೆಕ್‌ ಹಿಂತಿರುಗಿಸಿದ್ದಾರೆ. ಅಷ್ಟೇ ಅಲ್ಲ, ವೆಂಕಟೇಶ್‌ ಅವರ ಖಾತೆಯಿಂದ ₨250 ಕಡಿತ ಮಾಡಿಕೊಂಡಿದ್ದಾರೆ. ‘ಖಾತೆಯಿಂದ ₨250 ಕಡಿತಗೊಳಿಸಿದ್ದೇಕೆ ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ, ಇದನ್ನೆಲ್ಲ ನಮಗೆ ಕೇಳಬೇಡಿ. ಚೆಕ್‌ ಕೊಟ್ಟಿರುವ ಐ.ಸಿ.ಐ.ಸಿ.ಐ. ಬ್ಯಾಂಕಿನವರನ್ನು ಕೇಳಿ ಎಂದು ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ. ₨250 ಕಡಿತಗೊಳಿಸಿರುವುದಕ್ಕೆ ನಿಖರ ಕಾರಣ ನೀಡುತ್ತಿಲ್ಲ’ ಎಂದು ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕನೆಕ್ಟಿವಿಟಿ ಸಮಸ್ಯೆ ಬ್ಯಾಂಕಿನವರದ್ದು. ಅವರ ಸಮಸ್ಯೆಯಿಂದಾಗಿ ನಮ್ಮ ಮೇಲೆ ಶುಲ್ಕ ವಿಧಿಸುವುದು ಸರಿಯಲ್ಲ. ಚೆಕ್‌ನಲ್ಲಿ ಏನಾದರೂ ದೋಷವಿದ್ದರೆ ಶುಲ್ಕ ವಿಧಿಸಲಿ. ₨300 ಚೆಕ್‌ಗೆ ₨250 ಶುಲ್ಕ ವಿಧಿಸುವುದು ಯಾವ ನ್ಯಾಯ. ಈ ಕುರಿತು ಬ್ಯಾಂಕಿನವರು ನಿಖರ ಕಾರಣ ಕೂಡ ತಿಳಿಸುತ್ತಿಲ್ಲ. ಗ್ರಾಹಕರೊಂದಿಗೆ ಈ ರೀತಿ ವರ್ತಿಸುವುದು ಸರಿಯಲ್ಲ. ನ್ಯಾಯ ಸಿಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ವೆಂಕಟೇಶ್‌ ಹೇಳಿದ್ದಾರೆ.
‘ಬ್ಯಾಂಕಿನವರಿಗೆ ₨250 ಕಡಿಮೆ ಹಣ ಅನಿಸುತ್ತಿರಬಹುದು. ಆದರೆ, ಅದು ನಮ್ಮ ಮಟ್ಟಿಗೆ ದೊಡ್ಡದು. ತಿಂಗಳಿಡಿ ಪತ್ರಿಕೆ ಪೂರೈಸಿ ಕಷ್ಟಪಟ್ಟು ಗಳಿಸಿದ ಹಣವದು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !