ತಾಲ್ಲೂಕು ನೇಕಾರರ ಸಂಘ ಅಸ್ತಿತ್ವಕ್ಕೆ

7
ಚದುರಿ ಹೋಗಿರುವ ಏಳು ಜಾತಿಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ

ತಾಲ್ಲೂಕು ನೇಕಾರರ ಸಂಘ ಅಸ್ತಿತ್ವಕ್ಕೆ

Published:
Updated:
Prajavani

ಹೊಸಪೇಟೆ: ‘ನೇಕಾರ ಸಮುದಾಯವನ್ನು ಸಂಘಟಿಸುವುದಕ್ಕಾಗಿ ತಾಲ್ಲೂಕು ನೇಕಾರರ ಸಂಘ ಹುಟ್ಟು ಹಾಕಲಾಗಿದೆ’ ಎಂದು ಸಂಘದ ಅಧ್ಯಕ್ಷ ಬಸವರಾಜ ನಾಲತ್ವಾಡ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪದ್ಮಶಾಲಿ ಸಮಾಜ, ದೇವಾಂಗ ಸಮಾಜ, ಕುರುಹಿನಶೆಟ್ಟಿ ಸಮಾಜ, ಸ್ವಕುಳಸಾಲಿ ಸಮಾಜ, ಪಟ್ಟಸಾಲಿ ಸಮಾಜ, ತೆಲುಗು ದೇವಾಂಗ ಸಮಾಜ, ತೊಗಟವೀರ ಸಮಾಜದ ಹೆಸರುಗಳಿಂದ ನೇಕಾರರು ಗುರುತಿಸಿಕೊಳ್ಳುತ್ತಾರೆ. ಎಲ್ಲರನ್ನೂ ಒಂದೇ ವೇದಿಕೆಗೆ ಕರೆ ತರುವ ಉದ್ದೇಶದಿಂದ ಈ ಸಂಘ ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

‘ಬೇರೆ ಬೇರೆ ಹೆಸರುಗಳಿಂದ ಸಮಾಜದವರು ಗುರುತಿಸಿಕೊಂಡಿದ್ದರೂ ಎಲ್ಲರ ಮೂಲಕುಲಕಸುಬು ನೇಕಾರಿಕೆಯಾಗಿದೆ. ವಿದ್ಯುತ್‌ ಯಂತ್ರಗಳು ಬಂದಿರುವುದರಿಂದ ನೇಕಾರಿಗೆ ದೊಡ್ಡ ಹೊಡೆತ ಬಿದ್ದಿದೆ. ಸಮಾಜದವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.

‘ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮಾಜವನ್ನು ಸಂಘಟಿಸಿ, ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಂಘ ರಚಿಸಲಾಗುತ್ತಿದೆ. ಎಲ್ಲರೂ ಒಂದೇ ವೇದಿಕೆಗೆ ಬಂದರೆ ನಮ್ಮ ಧ್ವನಿಗೆ ಬಲ ಬರುತ್ತದೆ’ ಎಂದರು.

ಪ್ರಧಾನ ಕಾರ್ಯದರ್ಶಿ ಮಹೇಶ್‌ ಮಾಚಲ್‌ ಮಾತನಾಡಿ, ‘ಕಳೆದ ಆರೇಳು ವರ್ಷಗಳಿಂದ ಸಂಘಟನೆ ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದೆವು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ರಾಜ್ಯದಾದ್ಯಂತ ಒಟ್ಟು 29 ಸಣ್ಣ ಸಣ್ಣ ಜಾತಿಗಳ ಹೆಸರಿನಲ್ಲಿ ನೇಕಾರರು ಚದುರಿ ಹೋಗಿದ್ದಾರೆ. ನಗರವೊಂದರಲ್ಲೇ 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಎಲ್ಲರೂ ಒಗ್ಗಟ್ಟಾದರೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬಹುದು’ ಎಂದು ಅಭಿಪ್ರಾಯಪಟ್ಟರು.

ಸಂಘದ ಗೌರವ ಅಧ್ಯಕ್ಷ ಬೋಡಾ ರಾಮಪ್ಪ, ಉಪಾಧ್ಯಕ್ಷ ಅಗಳಿ ಭಾಸ್ಕರ್‌, ಸಹ ಕಾರ್ಯದರ್ಶಿ ಪರಗಿ ಶ್ರೀಶೈಲಪ್ಪ, ಸಂಘಟನಾ ಕಾರ್ಯದರ್ಶಿ ಬುದ್ಧಿ ರಾಮಕೃಷ್ಣ, ನಿರ್ದೇಶಕ ಗೋಪಾಲ್ ರಾವ್‌ ಕೆಂದೋಳಿ, ಸಲಹಾ ಸಮಿತಿ ಸದಸ್ಯರಾದ ಐಲಿ ಸಿದ್ದಣ್ಣ, ತೋಟಾ ಆಂಜನೇಯಲು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !