ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಜಲಾಶಯದಿಂದ ತುಂಗಭದ್ರಾ ಅಣೆಕಟ್ಟೆಗೆ 3 ಟಿಎಂಸಿ ನೀರು

Last Updated 1 ಏಪ್ರಿಲ್ 2020, 12:57 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ನೋಡಿಕೊಂಡು ಕಾಲುವೆಗಳಿಗೆ ನೀರು ಹರಿಸಲು ಮುನಿರಾಬಾದ್‍ನ ಕರ್ನಾಟಕ ನೀರಾವತಿ ನಿಗಮ ನಿಯಮಿತ ನಿರ್ಧರಿಸಿದೆ.

‘ಜಲಾಶಯದ ಎಡದಂಡೆ ಕಾಲುವೆಗೆ ಏ. 1ರಿಂದ 10ರ ವರೆಗೆ 2,500 ಕ್ಯುಸೆಕ್‌ ನೀರು ಹರಿಸಬೇಕಿತ್ತು. ಆದರೆ, ಏ. 1ರಿಂದ 5ರ ವರೆಗೆ 3,500 ಕ್ಯುಸೆಕ್‌, ಏ. 6ರಿಂದ 10ರ ವರೆಗೆ 2,900 ಕ್ಯುಸೆಕ್‌ನಂತೆ ನೀರು ಬಿಡಲಾಗುವುದು. ಉಳಿದ ಕಾಲುವೆಗಳಿಗೆ ನೀರಿನ ಹರಿವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ನಿಗಮದ ತುಂಗಭದ್ರಾ ಯೋಜನಾ ವೃತ್ತದ ಸೂಪರಿಟೆಂಡೆಂಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ತುಂಗಭದ್ರಾ ಅಚ್ಚುಕಟ್ಟಿನಲ್ಲಿ ಹಿಂಗಾರು ಹಂಗಾಮಿಗೆ ತಡವಾಗಿ ಬಿತ್ತನೆ ಮಾಡಿ ಬೆಳೆದಿರುವ ಬೆಳೆಗೆ ಸದ್ಯ ನೀರು ಹರಿಸಬೇಕಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗುತ್ತಿರುವುದರಿಂದ ಭದ್ರಾ ಜಲಾಶಯದಿಂದ ಅಣೆಕಟ್ಟೆಗೆ ಸರ್ಕಾರ 3 ಟಿ.ಎಂ.ಸಿ. ಅಡಿ ನೀರು ಹರಿಸಲು ಮುಂದಾಗಿದೆ’ ಎಂದು ಹೇಳಿದ್ದಾರೆ.

‘ಭದ್ರಾ ಜಲಾಶಯದಿಂದ 3 ಟಿ.ಎಂ.ಸಿ. ಅಡಿ ನೀರು ಸೇರಿದಂತೆ ಜಲಾಶಯದಲ್ಲಿ ಒಟ್ಟು ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಸಾರವಾಗಿ ಒಟ್ಟಾರೆ ಸರಿದೂಗಿಸಿಕೊಂಡು ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆಗಳಡಿ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಏ.11ರಿಂದ ಏ.15ರ ವರೆಗೆ ನೀರು ಹರಿಸುವುದು ಮುಂದುವರೆಸಲಾಗುವುದು. ನಂತರ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಏ.16ರ ನಂತರ ಸದರಿ ಕಾಲುವೆಯ ಅವಲಂಬಿತ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ರೈತರು ಅನಗತ್ಯವಾಗಿ ನೀರು ಪೋಲು ಮಾಡದೆ ನೀರನ್ನು ಸಮರ್ಪಕವಾಗಿಬಳಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT