ಸೋಮವಾರ, ಆಗಸ್ಟ್ 26, 2019
28 °C
ಜೈನ ದೇವಾಲಯದಲ್ಲಿ ಚಾತುರ್ಮಾಸ ಸಂಭ್ರಮ

31 ದಿನ ಬಿಸಿ ನೀರಷ್ಟೇ ಆಹಾರ!

Published:
Updated:
Prajavani

ಬಳ್ಳಾರಿ: 31 ದಿನ ಕಾಲ ಎರಡು ಹೊತ್ತು ಬಿಸಿ ನೀರೇ ಆಹಾರ! 539 ದಿನದಿಂದಲೂ ಸಪ್ಪೆ ಊಟ ಬಿಟ್ಟರೆ ಬೇರೆ ಏನನ್ನೂ ಸೇವಿಸಿಲ್ಲ.

ನಗರದ ಜೈನರ ಮಾರುಕಟ್ಟೆಯಲ್ಲಿರುವ ಶ್ರೀ ಪಾರ್ಶ್ವನಾಥ್‌ ಜೈನ್‌ ಶ್ವೇತಾಂಬರ್‌ ಮಂದಿರದಲ್ಲಿ ಚಾತುರ್ಮಾಸ ವ್ರತದ ಸಂಭ್ರಮವನ್ನು ಕಳೆಗಟ್ಟಿಸಿರುವ  ದಾವಣಗೆರೆಯ ದೇವಸಿದ್‌ ವಿಜಯ್‌ ಜಿ ಅವರ ವ್ರತಾಚರಣೆಯ ವಿಶೇಷವಿದು.

ಮೂಲತಃ ಬಣಜಿಗರಾದ ಅವರು 2018ರ ಜನವರಿ 24ರಂದು ಜೈನ ಮುನಿಯಾಗಿ ದೀಕ್ಷೆ ಪಡೆದ ದಿನದಿಂದ ಇಲ್ಲಿಯವರೆಗೆ ಅಂಬಿಲ್‌ ವ್ರತ ಆಚರಿಸುತ್ತಿದ್ದು, ಸಪ್ಪೆ ಊಟವನ್ನಷ್ಟೆ ಸೇವಿಸಿದ್ದಾರೆ. ಬೇಯಿಸಿದ ಹೆಸರು ಬೇಳೆ, ಅನ್ನವಷ್ಟೇ ಅವರ ಆಹಾರ. ಅದೂ ಒಂದು ಹೊತ್ತು ಮಾತ್ರ ಸೇವನೆ. ಈ ನಡುವೆ ಅವರು 31 ದಿನಗಳ ಅವಧಿಯ ಮಾಸಕ್ಷಮಣ್‌ ವ್ರತ (ಮೃತ್ಯುಂಜಯ ವ್ರತ)ವನ್ನು ಆಚರಿಸಿದ್ದಾರೆ. ಈ ಅವಧಿಯಲ್ಲಿ ಅವರು ದಿನವೂ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕುದಿಸಿ ಆರಿಸಿದ ಬಿಸಿ ನೀರನ್ನಷ್ಟೆ ಸೇವಿಸಿದ್ದಾರೆ. ದಿನವೂ ಕನಿಷ್ಠ ಎರಡು ಲೀಟರ್‌ ನೀರು ಸೇವಿಸಿ ಮೌನವಾಗಿರುವ ಈ ವ್ರತ ಮಂಗಳವಾರಕ್ಕೆ ಮುಗಿಯಲಿದೆ. ನೇಮಿನಾಥರು ದೀಕ್ಷೆ ಪಡೆದ ದಿನವೇ ಈ ವ್ರತ ಮುಕ್ತಾಯವಾಗಲಿದೆ.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಜೈನರ ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಮೋಜಿನ ಜೀವನ ನಡೆಸುತ್ತಿದ್ದೆ. ಡಾಬಾಗಳೇ ನನ್ನ ಮನೆಯಾಗಿದ್ದವು. ದಿನವೂ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದೆ. ಅನೈತಿಕ ಸಂಬಂಧದಿಂದ ನನ್ನ ಗೆಳೆಯನೊಬ್ಬನ ಜೀವನ ದುರಂತ ಕಂಡ ಬಳಿಕ ನನ್ನಲ್ಲಿ ಜಿಗು‍ಪ್ಸೆ ಮೂಡಿತ್ತು. ಈರ್‌ ಚಂದ್ರ ಸುರ್‌ಜಿ ದೀಕ್ಷೆ ನೀಡಿದರು’ ಎಂದು ಸ್ಮರಿಸಿದರು.

ಅವರೊಂದಿಗೆ ರಾಜ್ಯದ ದಾವಣಗೆರೆ, ವಿಜಯಪುರ, ಭದ್ರಾವತಿ, ಬಾಂಬೆ, ಗುಜರಾತ್‌ನ ಹತ್ತು ಮುನಿಗಳು ಹಾಗೂ ಐವರು ಮಹಿಳಾ ಮುನಿಗಳು ದೇವಾಲಯದಲ್ಲಿ ವಾಸ್ತವ್ಯ ಹೂಡಿ ವಿವಿಧ ವ್ರತಗಳನ್ನು ಆಚರಿಸುತ್ತಿದ್ದಾರೆ.

ಲೆಕ್ಕಪರಿಶೋಧಕರಾಗಿ ಶ್ರೀಮಂತ ಜೀವನ ನಡೆಸುತ್ತಿದ್ದ ಗುಜರಾತ್‌ನ ನ್ಯಾಯ್‌ರತ್ನ ವಿಜಯ್‌ಜಿ, ಲೆಕ್ಕ ಪರಿಶೋಧಕರ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿಜಯಪುರದ ಜ್ಞಾನ್‌ ವಿಮಲ್‌ ವಿಜಯ್‌ಜಿ, ಮೆಕ್ಯಾನಿಕಲ್‌ ಎಂಜಿನಿಯರ್‌ ಕೆಲಸ ಬಿಟ್ಟು ಬಂದ ಭದ್ರಾವತಿಯ ಖಿಮಾ ರತ್ನ್‌ ವಿಜಯ್‌ ಜಿ ಕೂಡ ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೈನ ಸಮುದಾಯದ ನೂರಾರು ಭಕ್ತರು ದಿನವೂ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Post Comments (+)