ಭಾನುವಾರ, ಆಗಸ್ಟ್ 25, 2019
21 °C
ಹೊಸಪೇಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ನೀಗಬೇಕಿದೆ ಶಿಕ್ಷಕರ ಸಮಸ್ಯೆ

ಹೊಸಪೇಟೆ: ಖಾಲಿ ಇವೆ 341 ಶಿಕ್ಷಕರ ಹುದ್ದೆ

Published:
Updated:

ಹೊಸಪೇಟೆ: ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಒಟ್ಟು 341 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಒಂದರಿಂದ ಐದನೇ ತರಗತಿಗೆ 166, ಆರರಿಂದ ಎಂಟನೇ ತರಗತಿಯ 175 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಪೈಕಿ 203 ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಜೂನ್‌ನಲ್ಲಿ ಈ ಶಿಕ್ಷಕರು ಶಾಲೆಗಳಿಗೆ ಬಂದಿದ್ದು, ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ 138 ಹುದ್ದೆಗಳು ಖಾಲಿ ಉಳಿದಿವೆ. 

ಅಂದಹಾಗೆ, ಇಡೀ ತಾಲ್ಲೂಕಿಗೆ ಒಂದರಿಂದ ಐದನೇ ತರಗತಿಗೆ ಒಟ್ಟು 1,010 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 844 ಸದ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಆರರಿಂದ ಎಂಟನೇ ತರಗತಿಗೆ 402 ಮಂಜೂರಾದ ಹುದ್ದೆಗಳಲ್ಲಿ 257 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಈ ಪೈಕಿ ಕೆಲವರು ಮುಖ್ಯಶಿಕ್ಷಕರು, ಸಿ.ಆರ್‌.ಪಿ., ಬಿ.ಆರ್‌.ಪಿ. ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಡಿ ನಡೆಯುವ ಕಾರ್ಯಕ್ರಮಕ್ಕೆ ಅನೇಕ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ತರಗತಿಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ ಅವರನ್ನು ಸಂಪರ್ಕಿಸಿದರೆ, ‘ವರ್ಗಾವಣೆ ಪ್ರಕ್ರಿಯೆ ಮುಗಿದ ಬಳಿಕ ಎಲ್ಲ ಸರಿ ಹೋಗಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನಷ್ಟೇ ಆ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಸದ್ಯಕ್ಕೆ ಸಮಸ್ಯೆ ದೂರವಾಗುವುದು ಅನುಮಾನ ಎನ್ನಲಾಗಿದೆ.

ಕೆಲವು ಶಿಕ್ಷಕರು, ‘ಇಡೀ ವರ್ಗಾವಣೆ ಪ್ರಕ್ರಿಯೆ ರದ್ದುಗೊಳಿಸಬೇಕು. ಅದು ಅವೈಜ್ಞಾನಿಕವಾಗಿದೆ’ ಎಂದು ಈಗಾಗಲೇ ಮುಖ್ಯಮಂತ್ರಿಗೆ ದೂರು ಕೂಡ ಸಲ್ಲಿಸಿದ್ದಾರೆ. ವರ್ಗಾವಣೆ ಮೇಲೆ ಕರಿನೆರಳು ಬಿದ್ದಿರುವುದರಿಂದ ಸದ್ಯ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳು ಭರ್ತಿಯಾಗುವ ಸಾಧ್ಯತೆ ತೀರ ಕಡಿಮೆ. ಇದು ನೇರವಾಗಿ ವಿದ್ಯಾರ್ಥಿಗಳ ನಿತ್ಯದ ಪಾಠದ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

‘ಸರ್ಕಾರಿ ಶಾಲೆಗಳಲ್ಲಿ ಮೊದಲಿನಿಂದಲೂ ಶಿಕ್ಷಕರ ಸಮಸ್ಯೆ ಇದೆ. ಈ ಕುರಿತು ಹಲವು ಸಲ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸರ್ಕಾರಿ ಶಾಲೆಯಲ್ಲಿ ಬಹುತೇಕ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳೇ ಓದುತ್ತಾರೆ. ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಆದರೆ, ಸರ್ಕಾರದಿಂದ ಆ ಕೆಲಸ ಆಗುತ್ತಿಲ್ಲ. ಸ್ಥಳೀಯ ಅಧಿಕಾರಿಗಳನ್ನು ದೂರಿದರೆ ಯಾವುದೇ ಪ್ರಯೋಜನವಿಲ್ಲ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಯೂಸುಫ್‌ ಪಟೇಲ್‌.

ಆಧಾರ್‌ ಇಲ್ಲದ ವಿದ್ಯಾರ್ಥಿಗಳು: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಒಟ್ಟು 85,304 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ಪೈಕಿ 3,267 ವಿದ್ಯಾರ್ಥಿಗಳ ಬಳಿ ಆಧಾರ್‌ ಸಂಖ್ಯೆಯೇ ಇಲ್ಲ. ಅವರು ಇದುವರೆಗೆ ಹೆಸರು ನೋಂದಣಿ ಮಾಡಿಸದ ಕಾರಣ ಆಧಾರ್‌ ಗುರುತಿನ ಚೀಟಿ ಹೊಂದಿಲ್ಲ. ಇದರಿಂದ ಆ ವಿದ್ಯಾರ್ಥಿಗಳು ಶಿಷ್ಯವೇತನ ಸೇರಿದಂತೆ ಇತರೆ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ.

‘ಶಾಲೆಗಳಲ್ಲಿ ಆಧಾರ್‌ ನೋಂದಣಿ ವ್ಯವಸ್ಥೆ ಮಾಡಿಸಬೇಕು. ಗ್ರಾಮೀಣ ಪ್ರದೇಶದವರು ನಗರಕ್ಕೆ ಬಂದು ಆಧಾರ್‌ ಮಾಡಿಸಲು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರಕ್ಕೆ ಬಂದರೂ ಒಂದೇ ದಿನದಲ್ಲಿ ಆಧಾರ್‌ ನೋಂದಣಿಯಾಗುತ್ತದೆ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ’ ಎಂದು ಯೂಸುಫ್‌ ಪಟೇಲ್‌ ಹೇಳಿದರು.

Post Comments (+)