ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ 425 ಎಕರೆ ಸರ್ಕಾರಿ ಜಾಗ ಪತ್ತೆ

ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ; ಸರ್ಕಾರಿ ಆಸ್ತಿ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮ
Last Updated 14 ಸೆಪ್ಟೆಂಬರ್ 2022, 9:03 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಭೂಕಬಳಿಕೆಗೆ ಸಂಬಂಧಿಸಿದಂತೆ ಆರೋಪ–ಪ್ರತ್ಯಾರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲಾಡಳಿತವು ಸದ್ದಿಲ್ಲದೇ ಸರ್ಕಾರಿ ಆಸ್ತಿ ಪತ್ತೆ ಹಚ್ಚಿ, ಅದನ್ನು ಗುರುತಿಸಿ, ಹದ್ದು ಬಸ್ತುಗೊಳಿಸಲು ಮುಂದಾಗಿದೆ.

ಜಿಲ್ಲೆಯ ಹೊಸಪೇಟೆ ತಾಲ್ಲೂಕೊಂದರಲ್ಲೇ ಜಿಲ್ಲಾಡಳಿತವು ಸರ್ಕಾರಕ್ಕೆ ಸೇರಿದ 425.02 ಎಕರೆ ಸರ್ಕಾರಿ ಜಾಗ ಗುರುತಿಸಿದೆ. ಇದರಲ್ಲಿ ಸಿಂಹಪಾಲು ಹೊಸಪೇಟೆ ನಗರದ ಸುತ್ತಮುತ್ತಲಿನ ಜಮೀನು ಸೇರಿದೆ. ನಗರಕ್ಕೆ ಹೊಂದಿಕೊಂಡು ನಗರದ ಭಾಗವೇ ಆಗಿರುವ ಅಮರಾವತಿ, ಚಿತ್ತವಾಡ್ಗಿ, ಅನಂತಶಯನಗುಡಿ, ಸಂಕ್ಲಾಪುರ, ಕಾರಿಗನೂರು, ಜಂಬುನಾಥಹಳ್ಳಿ, ತಾಲ್ಲೂಕಿನ ಕಲ್ಲಹಳ್ಳಿ, ರಾಜಪುರ ಸೇರಿವೆ. ಒಟ್ಟು 338.96 ಎಕರೆ ಜಾಗ ಗುರುತಿಸಿ, ಹದ್ದು ಬಸ್ತು ಮಾಡಲಾಗುತ್ತಿದೆ.

ಇನ್ನು, ತಾಲ್ಲೂಕಿನ ಕಮಲಾಪುರ ಹೋಬಳಿ ವ್ಯಾಪ್ತಿಯಲ್ಲಿ 23.74 ಎಕರೆ ಹಾಗೂ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ 62.32 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ಅದರ ಸಂರಕ್ಷಣೆಗೆ ಜಿಲ್ಲಾಡಳಿತವು ಮುಂದಾಗಿದೆ. ಈ ಪೈಕಿ 44.29 ಎಕರೆ ಸರ್ಕಾರಿ ಜಾಗವನ್ನು ಶಾಲೆ, ಕುಡಿಯುವ ನೀರಿನ ಟ್ಯಾಂಕ್‌, ಉದ್ಯಾನವನ, ಶಿಕ್ಷಣ ಸಂಸ್ಥೆ, ಉದ್ಯೋಗ ತರಬೇತಿ ಕೇಂದ್ರ ಹಾಗೂ ಇತರೆ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ.

ಹೊಸಪೇಟೆ ಜಿಲ್ಲಾ ಕೇಂದ್ರವಾದ ನಂತರ ನಗರದ ಸುತ್ತಮುತ್ತಲಿನ ಜಮೀನಿಗೆ ಬಂಗಾರದ ಬೆಲೆ ಬಂದಿದೆ. ಸಹಜವಾಗಿಯೇ ಭೂಗಳ್ಳರ ಕೆಂಗಣ್ಣು ಇದರ ಮೇಲೆ ಬಿದ್ದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ವಂಚನೆ ಪ್ರಕರಣಗಳು ಬಯಲಿಗೆ ಬಂದಿವೆ. ಇಷ್ಟೇ ಅಲ್ಲ, ಮೇಲಿಂದ ಭೂ ಒತ್ತುವರಿಗೆ ಸಂಬಂಧಿಸಿದಂತೆ ಆರೋಪ–ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ವಿಶೇಷ ಆಸಕ್ತಿ ವಹಿಸಿ, ಸರ್ಕಾರಿ ಆಸ್ತಿ ಸಂರಕ್ಷಣೆಗೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT