3
ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಮುನಿವಾಸುದೇವ ರೆಡ್ಡಿ ಹೇಳಿಕೆ

ಐದು ಮಾದರಿ ಅಂಗನವಾಡಿ ನಿರ್ಮಾಣ

Published:
Updated:
ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಡಾ.ಪಿ. ಮುನಿವಾಸುದೇವ ರೆಡ್ಡಿ, ಕಾರ್ಯದರ್ಶಿ ಕೆ.ಎಸ್‌.ಕೃಷ್ಣಮೂರ್ತಿ (ಎಡಬದಿ)

ಹೊಸಪೇಟೆ: ‘ನಗರದ ಕೊಳೆಗೇರಿ ಪ್ರದೇಶಗಳಲ್ಲಿ ಐದು ಮಾದರಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಡಾ.ಪಿ. ಮುನಿವಾಸುದೇವ ರೆಡ್ಡಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಳೆಗೇರಿ ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯಲಿ ಎಂಬ ಸದುದ್ದೇಶದಿಂದ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅದೇ ರೀತಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಐದು ‘ಹ್ಯಾಪಿ ಸ್ಕೂಲ್‌’ಗಳನ್ನು ಆರಂಭಿಸಲಾಗುವುದು. ಅದಕ್ಕೆ ಶಿಕ್ಷಣ ಇಲಾಖೆಯ ನೆರವು ಪಡೆಯಲಾಗುವುದು’ ಎಂದು ವಿವರಿಸಿದರು.

‘ಸಾಕ್ಷರತೆ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಲಾಗುವುದು. ಯಾವ ಶಾಲೆಗಳಿಗೆ ಪೀಠೋಪಕರಗಳ ಅಗತ್ಯವಿದೆಯೋ ಅವುಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. ಬುಧವಾರ ನಗರದ ರಾಣಿ ಚನ್ನಮ್ಮದೇವಿ ಶಾಲೆಗೆ 20 ಬೆಂಚ್‌ಗಳನ್ನು ವಿತರಿಸಲಾಗುವುದು150ರಿಂದ 180 ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

‘ಗೋ ಗ್ರೀನ್‌ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗಿಡಗಳನ್ನು ನೆಡಲಾಗುವುದು. ಸ್ಥಳೀಯ ವಿಜಯನಗರ ಚಾನೆಲ್‌ ಮೂಲಕ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಪಾಠ ಹಾಗೂ ಸಂವಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಭವಿಷ್ಯದ ಯೋಜನೆಗಳನ್ನು ವಿವರಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆಗೆ ಒತ್ತು ಕೊಡಲಾಗುವುದು. ತುರ್ತಾಗಿ ಅಗತ್ಯ ಇರುವ ಕಡೆ ಹೊಸ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುವುದು. ಈಗಾಗಲೇ ನಿರ್ಮಿಸಿರುವ ಹಳೆಯ ಶೌಚಾಲಯಗಳನ್ನು ದುರಸ್ತಿ ಮಾಡಲಾಗುವುದು. ಆರಂಭಿಕ ಹಂತದಲ್ಲಿ 25 ಶಾಲೆಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

‘ನಗರದ ಶ್ರೀರಾಮುಲು ಉದ್ಯಾನವನ, ನ್ಯಾಯಾಲಯ ಸಂಕೀರ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿನ ಸಾರ್ವಜನಿಕ ಶೌಚಾಲಯಗಳನ್ನು ದುರಸ್ತಿಗೊಳಿಸಲಾಗುವುದು. ನಗರಸಭೆ ನಮಗೆ ವಹಿಸಿಕೊಟ್ಟರೆ ಅವುಗಳನ್ನು ನಿರ್ವಹಣೆ ಮಾಡುತ್ತೇವೆ’ ಎಂದರು.

‘ಯುವಕರಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 150 ಯುವಕರನ್ನು ಆಯ್ಕೆ ಮಾಡಿ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲಾಗುವುದು. ಜತೆಗೆ ಕೆ.ಎ.ಎಸ್‌., ಐ.ಎ.ಎಸ್‌. ಪರೀಕ್ಷೆ ಬರೆಯ ಬಯಸುವವರಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು’ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !