ಹಂಪಿ ಬೈ ಸ್ಕೈಗೆ ನೀರಸ ಪ್ರತಿಕ್ರಿಯೆ

ಗುರುವಾರ , ಮಾರ್ಚ್ 21, 2019
25 °C
ಹೆಲಿಕ್ಯಾಪ್ಟರ್‌ನಲ್ಲಿ ಸ್ಮಾರಕ ನಗರಿ ನೋಡಿದ 548 ಜನ

ಹಂಪಿ ಬೈ ಸ್ಕೈಗೆ ನೀರಸ ಪ್ರತಿಕ್ರಿಯೆ

Published:
Updated:
Prajavani

ಹೊಸಪೇಟೆ: ಹಂಪಿ ಉತ್ಸವದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆಯು ಈ ವರ್ಷ ಹಮ್ಮಿಕೊಂಡಿದ್ದ ‘ಹಂಪಿ ಬೈ ಸ್ಕೈ’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಒಟ್ಟು 548 ಜನ ಹೆಲಿಕ್ಯಾಪ್ಟರ್‌ ಹತ್ತಿ, ಆಗಸದಿಂದ ಹಂಪಿಯ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಮಾರ್ಚ್‌ ಒಂದರಿಂದ ಆರರ ವರೆಗೆ ಬಾನಿನಿಂದ ಸ್ಮಾರಕಗಳ ವೀಕ್ಷಣೆಗೆ ಪ್ರವಾಸೋದ್ಯಮ ಇಲಾಖೆಯು ಚಿಪ್ಸನ್‌ ಕಂಪನಿಯ ಹೆಲಿಕ್ಯಾಪ್ಟರ್‌ ವ್ಯವಸ್ಥೆ ಮಾಡಿತ್ತು. ಹೆಲಿಕ್ಯಾಪ್ಟರ್‌ನಲ್ಲಿ ಒಟ್ಟು ಎಂಟು ನಿಮಿಷಗಳ ಹಾರಾಟಕ್ಕಾಗಿ ಒಬ್ಬರಿಗೆ ₹2,500 ನಿಗದಿಪಡಿಸಲಾಗಿತ್ತು. ಆದರೆ, ಈ ಸಲ ಜನ ಅದಕ್ಕೆ ಒಲವು ತೋರಿಸಲಿಲ್ಲ.

ಬರದ ಕಾರಣಕ್ಕಾಗಿ ಈ ವರ್ಷ ಉತ್ಸವವನ್ನು ಎರಡು ದಿನಕ್ಕೆ ಮೊಟಕುಗೊಳಿಸಲಾಗಿತ್ತು. ಅಷ್ಟೇ ಅಲ್ಲ, ಫೆ. 28ಕ್ಕೆ ಆರಂಭಗೊಳ್ಳಬೇಕಿದ್ದ ಹಂಪಿ ಬೈ ಸ್ಕೈಗೆ ಒಂದು ದಿನ ತಡವಾಗಿ ಚಾಲನೆ ನೀಡಲಾಯಿತು. 

ಹಿಂದಿನ ವರ್ಷದ ಉತ್ಸವದ ಸಂದರ್ಭದಲ್ಲಿ ಇಲಾಖೆಯು ಎರಡು ಹೆಲಿಕ್ಯಾಪ್ಟರ್‌ಗಳಿಗೆ ವ್ಯವಸ್ಥೆ ಮಾಡಿತ್ತು. ಆಗ ಕೂಡ ಇಷ್ಟೇ ದರ ನಿಗದಿಪಡಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಜನ ಆಗಸದಿಂದ ಹಂಪಿ ವೀಕ್ಷಿಸಿದ್ದರು. ಏಳು ದಿನಗಳ ಅವಧಿಯಲ್ಲಿ ಒಟ್ಟು 1,600 ಜನ ಹಂಪಿ ವೀಕ್ಷಿಸಿ, ಸಂಭ್ರಮ ಪಟ್ಟಿದ್ದರು.

ಪ್ರತಿ ವರ್ಷ ನ. 3ರಿಂದ 5ರ ವರೆಗೆ ಉತ್ಸವ ಆಚರಿಸಲಾಗುತ್ತದೆ. ಈ ಸಲ ಲೋಕಸಭೆ ಉಪಚುನಾವಣೆ ಬಂದದ್ದರಿಂದ ಮುಂದೂಡಲಾಯಿತು. ಬಳಿಕ ಮಾ. 2,3ಕ್ಕೆ ದಿನಾಂಕ ನಿಗದಿಗೊಳಿಸಲಾಯಿತು. ಇದೇ ವೇಳೆ ಪಿ.ಯು.ಸಿ. ಪರೀಕ್ಷೆ ಆರಂಭಗೊಂಡವು. ಮೈಸುಡುವ ಬಿಸಿಲು ಸಹ ಇತ್ತು. ಈ ಕಾರಣಕ್ಕಾಗಿ ಜನ ಆ ಕಡೆ ಸುಳಿಯಲಿಲ್ಲ ಎನ್ನಲಾಗಿದೆ.

ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್‌ ಲಮಾಣಿ ಅವರನ್ನು ಪ್ರಶ್ನಿಸಿದಾಗ, ‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಬಹಳ ಕಡಿಮೆ ಜನ ಆಗಸದಿಂದ ಹಂಪಿ ಕಣ್ತುಂಬಿಕೊಂಡಿದ್ದಾರೆ. ಪ್ರತಿ ವರ್ಷ ಮೂರು ದಿನ ಉತ್ಸವ ಆಚರಿಸಲಾಗುತ್ತದೆ. ಈ ವರ್ಷ ಎರಡೇ ದಿನ ಇದ್ದದ್ದರಿಂದ ಹೀಗಾಗಿರಬಹುದು’ ಎಂದು ತಿಳಿಸಿದರು.

‘ಕೆಂಡದಂತಹ ಬಿಸಿಲು ಒಂದೆಡೆಯಾದರೆ, ಪರೀಕ್ಷೆ ಕಾಲ. ಇಂತಹ ಸಂದರ್ಭದಲ್ಲಿ ಉತ್ಸವ ಇಟ್ಟುಕೊಂಡರೆ ಯಾರು ತಾನೆ ಬರುತ್ತಾರೆ. ವಾಸ್ತವವಾಗಿ ಹಂಪಿ ಬೈ ಸ್ಕೈ ಕಮಲಾಪುರದ ಬದಲು, ನಗರದಲ್ಲಿ ಹಮ್ಮಿಕೊಳ್ಳಬೇಕು. ಏಕೆಂದರೆ ನಗರದಿಂದ 17ರಿಂದ 18 ಕಿ.ಮೀ. ಕ್ರಮಿಸಿ, ನಂತರ ಹೆಲಿಕ್ಯಾಪ್ಟರ್‌ ಹತ್ತಲು ಯಾರೂ ಇಷ್ಟಪಡುವುದಿಲ್ಲ. ಅದರ ಬದಲು, ನಗರದಿಂದ ಆರಂಭಿಸಿದರೆ, ಅಲ್ಲಿರುವ ಜನ, ಹೊರಗಿನಿಂದ ಬಂದವರು ಸುಲಭವಾಗಿ ಹಂಪಿ ನೋಡಿಕೊಂಡು ಬರಲು ಸಾಧ್ಯವಾಗುತ್ತದೆ’ ಎಂದು ಹಂಪಿ ಮಾರ್ಗದರ್ಶಿ ರಾಜು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !