ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿಗಳ ಸಂತಾನಶಕ್ತಿಹರಣಕ್ಕೆ ₹20 ಲಕ್ಷ

ಪ್ರತಿ ಶಸ್ತ್ರಚಿಕಿತ್ಸೆಗೆ ₹1,600 ವೆಚ್ಚ; ಹೊಸಪೇಟೆಯಲ್ಲಿವೆ 5 ಸಾವಿರ ಬೀದಿ ಶ್ವಾನಗಳು
Last Updated 27 ಸೆಪ್ಟೆಂಬರ್ 2022, 4:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದಲ್ಲಿ ಬೀದಿ ನಾಯಿಗಳ ಉಪಟಳ ನಿಯಂತ್ರಿಸಲು ಮುಂದಾಗಿರುವ ಇಲ್ಲಿನ ನಗರಸಭೆ ಅದಕ್ಕಾಗಿ ₹20 ಲಕ್ಷ ವ್ಯಯಿಸಲು ಮುಂದಾಗಿದೆ.

ಮಹಾರಾಷ್ಟ್ರದ ಪುಣೆಯ ‘ಅನಿಮಲ್‌ ಪ್ರೊಟೆಕ್ಷನ್‌ ಅಂಡ್‌ ವೆಲ್‌ಫೇರ್‌ ಸೊಸೈಟಿ’ಗೆ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಕೆಲಸದ ಗುತ್ತಿಗೆ ನೀಡಿದೆ. ಕರ್ನಾಟಕ ಪಶು ಸಂಗೋಪನಾ ಮಂಡಳಿಯಲ್ಲಿ ನೋಂದಣಿಗೊಂಡಿರುವ ಈ ಸಂಸ್ಥೆ ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿದೆ. ಸಂಸ್ಥೆಯ ಅಜಯಕುಮಾರ್‌ ಕಾಂಬ್ಳೆ ಶರ್ಮಾ ನೇತೃತ್ವದ ತಂಡ ನಗರಕ್ಕೆ ಬಂದು ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿದೆ.

ನಗರಸಭೆಯ ಒಂದು ಅಂದಾಜಿನ ಪ್ರಕಾರ ನಗರವೊಂದರಲ್ಲೇ ಐದು ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವುದು, ಬೈಕ್‌ ಸವಾರರನ್ನು ಬೆನ್ನಟ್ಟಿಸಿಕೊಂಡು ದಾಳಿ ನಡೆಸುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಸದಾಕಾಲ ಬೀಡು ಬಿಟ್ಟಿರುತ್ತವೆ. ಈ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿರುವುದರಿಂದ ನಗರಸಭೆ ಅವುಗಳ ಉಪಟಳ ನಿಯಂತ್ರಿಸಲು ಮುಂದಾಗಿದೆ.

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕೆಲ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿ, ಅವುಗಳ ಸಂತತಿ ಹೆಚ್ಚಾಗದಂತೆ ತಡೆಯಲು ಮುಂದಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಇದನ್ನು ಮುಂದುವರೆಸುವುದು ನಗರಸಭೆಯ ಯೋಜನೆ.

‘ಪುಣೆ ಮೂಲದ ಸಂಸ್ಥೆಯವರಿಗೆ ಈಗಾಗಲೇ ಗುತ್ತಿಗೆ ವಹಿಸಲಾಗಿದೆ. ನಾಯಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ಕೆಲವು ದಿನಗಳ ವರೆಗೆ ಆರೈಕೆ ಮಾಡಿ ಬಿಡುತ್ತಾರೆ. ಪ್ರತಿ ನಾಯಿಯ ಶಸ್ತ್ರಚಿಕಿತ್ಸೆಗೆ ₹1,600 ಶುಲ್ಕ ವಿಧಿಸುತ್ತಾರೆ. ಇದು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ತಿಳಿಸಿದರು.

‘ನಾಯಿಗಳ ಶಸ್ತ್ರಚಿಕಿತ್ಸೆ, ಆರೈಕೆಗಾಗಿ ಸಂಸ್ಥೆಗೆ ಅನಂತಶಯನಗುಡಿ ಬಳಿ ಒಂದು ಎಕರೆ ಜಾಗ ಕೊಡಲಾಗಿದೆ. ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ವ್ಯತ್ಯಾಸ ಗುರುತಿಸಲು ಅವುಗಳ ಕಿವಿಗೆ ಉಂಗುರ ಅಳವಡಿಸುತ್ತಾರೆ’ ಎಂದು ವಿವರಿಸಿದರು.

ಬೀದಿ ನಾಯಿಗಳಿಂದ ಭಯ:

ಕೊಟ್ಟೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಹಿರಿಯ ನಾಗರಿಕರು ಭಯದಲ್ಲಿ ಓಡಾಡುವಂತಾಗಿದೆ.

ಬೀದಿ ನಾಯಿಗಳು ಬೆನ್ನಟ್ಟಿದ್ದರಿಂದ ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹೀಗಿದ್ದರೂ ಅವುಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ಬಸವರಾಜ್, ಕೊಟ್ರೇಶ್ ದೂರಿದರು. ‘ಬೀದಿ ನಾಯಿಗಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲಾ ತಿಳಿಸಿದರು.

ಹೆಚ್ಚಿದ ಬೀದಿನಾಯಿಗಳ ಹಾವಳಿ:

ಹರಪನಹಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನ ಅವುಗಳಿಂದ ಬೇಸತ್ತಿದ್ದಾರೆ.

ಕುಂಚೂರು ಗ್ರಾಮದಲ್ಲಿ ಈಚೆಗೆ ಕುರಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಅವುಗಳಿಗೆ ಮಾಂಸದ ರುಚಿ ಹತ್ತಿರುವುದರಿಂದ ಇಂಥ ಘಟನೆಗಳು ಜರುಗುತ್ತಿವೆ. ಪಟ್ಟಣದ ಬಾಪೂಜಿ ನಗರ, ಅಂಬೇಡ್ಕರ ಬಡಾವಣೆ, ಕುರುಬರಗೇರಿ, ಹಡಗಲಿ ರಸ್ತೆ ಉಪ್ಪಾರ ಗೇರಿ, ಕೋಣನಕೇರಿ, ಹೊಸಪೇಟೆ ರಸ್ತೆ, ಪ್ರವಾಸಿ ಮಂದಿರ ವೃತ್ತ, ಕೆ.ಎಚ್‍ಬಿ ಬಡಾವಣೆ, ಗಾಜಿಕೇರಿ, ಆಂಜನೇಯ ಬಡಾವಣೆ, ತೆಲುಗರ ಓಣಿ, ಬಾಣಗೇರೆ, ಮೇಗಳಪೇಟೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹೆಚ್ಚಾಗಿವೆ.

ಬೀದಿನಾಯಿಗಳಿಗಿಲ್ಲ ಕಡಿವಾಣ:

ಹೂವಿನಹಡಗಲಿ: ಪಟ್ಟಣದಲ್ಲಿ ಹಂದಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ, ವಿವಿಧ ಬಡಾವಣೆಗಳಲ್ಲಿ ನಾಯಿಗಳ ಹಿಂಡು ಅಲೆಯುತ್ತಿರುತ್ತವೆ.

ಶಾಸ್ತ್ರಿ ವೃತ್ತದಲ್ಲಿ ಬೀದಿ ನಾಯಿಗಳು ಬೀಡು ಬಿಟ್ಟಿರುವುದರಿಂದ ವಾಹನ ಸಂಚಾರ, ಜನರ ಓಡಾಟಕ್ಕೂ ಅಡಚಣೆಯಾಗಿದೆ. ಮಾಂಸದ ಅಂಗಡಿಗಳವರು ನಾಯಿಗಳಿಗೆ ಮಾಂಸದ ರುಚಿ ತೋರಿಸಿದ್ದರಿಂದ ಬೀದಿ ನಾಯಿಗಳು ಆಕಳ ಕರುಗಳ ಮೇಲೆ ದಾಳಿ ಮಾಡುತ್ತವೆ. ಕೋಡಿಹಳ್ಳಿಯವರ ಓಣಿ, ಕಳ್ಳಿಯವರ ಓಣಿಯ ರೈತರು ಈ ಕುರಿತು ಪ್ರತಿಭಟಿಸಿದ್ದರು. ಬೀದಿನಾಯಿಗಳ ನಿಯಂತ್ರಣಕ್ಕೆ ಪುರಸಭೆ ಕ್ರಮ ಕೈಗೊಂಡಿಲ್ಲ.


120 ಜನಕ್ಕೆ ಬೀದಿನಾಯಿ ಕಡಿತ:

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ತಿಂಗಳಲ್ಲೇ 120 ಜನಕ್ಕೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಎಲ್ಲರೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಾಯಿಗಳ ಉಪಟಳ ಪಟ್ಟಣದಲ್ಲಿ ಹೆಚ್ಚಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಾಯಿಗಳ ದಂಡು ಕಾಣುತ್ತದೆ. ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದವರು ಒಂದು ಕಡೆಯಾದರೆ, ದ್ವಿಚಕ್ರ ವಾಹನಗಳಿಗೆ ಅಡ್ಡ ಬಂದ ಪರಿಣಾಮ ಗಾಯಗೊಂಡವರು 15ಕ್ಕೂ ಹೆಚ್ಚು ಜನ.

ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದಿಂದ 250 ನಾಯಿಗಳನ್ನು ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಈ ಬಾರಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ ಸಂತತಿ ಬೆಳೆಯದಂತೆ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಅರೋಗ್ಯ ಅಧಿಕಾರಿ ಕೆ.ಜಯಲಕ್ಷ್ಮಿ ತಿಳಿಸಿದರು.

ಭಯದಲ್ಲೇ ಸವಾರರ ಸಂಚಾರ:

ಕೂಡ್ಲಿಗಿ: ಪಟ್ಟಣದಲ್ಲಿ ನಡುರಸ್ತೆಯಲ್ಲೇ ಬೀದಿನಾಯಿಗಳು ಬೀಡು ಬಿಟ್ಟಿರುವುದರಿಂದ ವಾಹನ ಸವಾರರು ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ.

ಪಟ್ಟಣದ ಕೊಟ್ಟೂರು ರಸ್ತೆ, ಹೊಸಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂತೆ ಮೈದಾನದಲ್ಲಿ ಯಾವಾಗಲೂ ನಾಯಿಗಳ ಹಿಂಡು ಇರುತ್ತದೆ. ಮದಕರಿ ನಾಯಕ ವೃತ್ತವೂ ಹೊರತಾಗಿಲ್ಲ. ಸುಗಮ ಸಂಚಾರಕ್ಕೂ ತೊಡಕಾಗಿದ್ದು, ಇದನ್ನು ತಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ‘ನಾಯಿಗಳನ್ನು ಸ್ಥಳಾಂತರಿಸುವಂತಿಲ್ಲ. ಅವುಗಳನ್ನು ನಿಯಂತ್ರಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದರು.

ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಎಸ್‌.ಎಂ. ಗುರುಪ್ರಸಾದ್‌, ಸಿ. ಶಿವಾನಂದ, ಕೆ. ಸೋಮಶೇಖರ್‌, ಎ.ಎಂ. ಸೋಮಶೇಖರಯ್ಯ, ವಿಶ್ವನಾಥ ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT