ಬಿಡಿಸಿಸಿಗೆ ₨7.50 ಕೋಟಿ ನಿವ್ವಳ ಲಾಭ

7
ಬ್ಯಾಂಕಿನ ನೌಕರರಿಗೆ ಎರಡು ತಿಂಗಳ ಬೋನಸ್‌; ಅಧ್ಯಕ್ಷ ಎಂ.ಪಿ. ರವೀಂದ್ರ ಹೇಳಿಕೆ

ಬಿಡಿಸಿಸಿಗೆ ₨7.50 ಕೋಟಿ ನಿವ್ವಳ ಲಾಭ

Published:
Updated:

ಹೊಸಪೇಟೆ: ‘ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು (ಬಿ.ಡಿ.ಸಿ.ಸಿ.) 2017–18ನೇ ಸಾಲಿನಲ್ಲಿ ₨7.50 ಕೋಟಿ ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ರೈತರಿಗೆ ₨500 ಕೋಟಿ ಬೆಳೆ ಸಾಲ ವಿತರಿಸಲು ತೀರ್ಮಾನಿಸಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಪಿ.ರವೀಂದ್ರ ತಿಳಿಸಿದರು.

ಸೋಮವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ವರ್ಷ ಬ್ಯಾಂಕಿನಿಂದ ಹೊಸದಾಗಿ 13 ಎ.ಟಿ.ಎಂ. ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನಗರ, ಬಳ್ಳಾರಿ, ಸಿರುಗುಪ್ಪ, ಕಾನಹೊಸಹಳ್ಳಿ, ಕಂಪ್ಲಿಯಲ್ಲಿ ಕೇಂದ್ರಗಳ ನಿರ್ಮಾಣ ಕೆಲಸ ಅಂತಿಮ ಹಂತದಲ್ಲಿದ್ದು, ಶೀಘ್ರ ಕೆಲಸ ನಿರ್ವಹಿಸಲಿವೆ. ಕೇಂದ್ರ ಕಚೇರಿ ನವೀಕರಣ ಕೆಲಸ ಭರದಿಂದ ಸಾಗಿದೆ. ಜಿಲ್ಲೆಯ ಚಿಕ್ಕಜೋಗಿಹಳ್ಳಿ, ಕುಡಿತಿನಿ, ಹಂಪಸಾಗರದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗುವುದು. ಬ್ಯಾಂಕಿನ ನೌಕರರಿಗೆ ಎರಡು ತಿಂಗಳ ಬೋನಸ್‌ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಶೇ 70 ಕೃಷಿ ಹಾಗೂ ಶೇ 30ರಷ್ಟು ಕೃಷಿಯೇತರ ಸಾಲ ಸೌಲಭ್ಯ ನೀಡಲಾಗಿದ್ದು, ಅದು ಮರುಪಾವತಿಯೂ ಆಗಿದೆ. ಕಟ್ಟಡ ನಿರ್ಮಾಣ ಹಾಗೂ ಉಳಿತಾಯ ನಿಧಿಗೆ ತಲಾ ₨1 ಕೋಟಿ ಮೀಸಲಿಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಂಪ್ಯೂಟರೀಕರಣ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ’ ಎಂದು ವಿವರಿಸಿದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರ ₨50 ಸಾವಿರದ ವರೆಗೆ ರೈತರ ಸಾಲ ಮನ್ನಾ ಮಾಡಿದ್ದರಿಂದ ಜಿಲ್ಲೆಯಲ್ಲಿ 66,448 ರೈತರ ಒಟ್ಟು ₨296.88 ಕೋಟಿ ಸಾಲ ತೀರಿದೆ. ಸರ್ಕಾರದಿಂದ ಬ್ಯಾಂಕಿಗೆ ₨248 ಕೋಟಿ ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಶೀಘ್ರ ಬಿಡುಗಡೆಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೀಡಿದ್ದಾರೆ’ ಎಂದರು.

ಬಿ.ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷ ಕೋಳೂರು ಮಲ್ಲಿಕಾರ್ಜುನ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕುಬೇರಪ್ಪ, ನಿರ್ದೇಶಕರಾದ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಕೂಡ್ಲಿಗಿ ಎಂ.ಗುರುಸಿದ್ಧನಗೌಡ, ಜೆ.ಎಂ.ವೃಷಭೇಂದ್ರಯ್ಯ, ಟಿ.ಎಂ.ಚಂದ್ರಶೇಖರಯ್ಯ, ಪಿ.ಗಾದೆಪ್ಪ, ಬಾತಿ ಚೌಡಪ್ಪ, ಬಿ.ಚಂದ್ರಶೇಖರ್, ಡಿ.ಭೋಗಾರೆಡ್ಡಿ, ಅಪೆಕ್ಸ್ ಬ್ಯಾಂಕಿನ ಪ್ರತಿನಿಧಿ ಕೆ.ಎಂ.ಗಂಗಾಧರಯ್ಯ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !