ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹನಾ ಠೇವಣಿದಾರರಿಗೆ ಸಿಗಲಿದೆ ನ್ಯಾಯ: ಬಿ.ಎಚ್‌. ಕೃಷ್ಣಾರೆಡ್ಡಿ ಅಭಯ

Last Updated 27 ಆಗಸ್ಟ್ 2021, 10:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅಹನಾ ಬ್ಯಾಂಕಿನ ಠೇವಣಿದಾರರಿಗೆ ಸಿಗಲಿದೆ ನ್ಯಾಯ. ಅವರು ಭಯಪಡಬೇಕಿಲ್ಲ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್‌. ಕೃಷ್ಣಾರೆಡ್ಡಿ ಅಭಯ ನೀಡಿದರು.

‘ಅಹನಾ ಬ್ಯಾಂಕಿನಲ್ಲಿ ಆಗಿರುವ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡ್ಮೂರು ಸಭೆ ನಡೆಸಲಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಬ್ಯಾಂಕಿನ ನಿರ್ದೇಶಕರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಠೇವಣಿದಾರರಿಗೆ ಅವರ ಹಣ ವಾಪಸ್‌ ಮರಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಹಕಾರ ಕ್ಷೇತ್ರದ 170 ಸಂಸ್ಥೆಗಳಲ್ಲಿ ಅಹನಾ ಬ್ಯಾಂಕಿನಲ್ಲಿ ಮಾತ್ರ ಹಣದ ವಹಿವಾಟು ಸರಿಯಾಗಿ ನಡೆದಿಲ್ಲ. ಈ ವಿಚಾರದಲ್ಲಿ ಯಾರನ್ನೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಯಾರೊ ಒಬ್ಬರ ಸ್ವಾರ್ಥಕ್ಕೆ ಠೇವಣಿದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಅವರಿಗೆ ನ್ಯಾಯ ಒದಗಿಸಲಾಗುವುದು. ಈಗಾಗಲೇ ಬ್ಯಾಂಕಿನ ಅಧ್ಯಕ್ಷರು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ವಿವರಿಸಿದರು.

ಸಹಕಾರ ಸಚಿವಾಲಯಕ್ಕೆ ಸ್ವಾಗತ:

‘ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಸ್ಥಾಪಿಸಿರುವುದು ಸ್ವಾಗತಾರ್ಹ. ಸಹಕಾರ ಕ್ಷೇತ್ರದ ಕೊರತೆಯನ್ನು ಇದು ನೀಗಿಸಲಿದೆ. ಈ ಬೃಹತ್‌ ಕ್ಷೇತ್ರದ ಪ್ರಾತಿನಿಧ್ಯವೇ ಇದುವರೆಗೆ ಇರಲಿಲ್ಲ. ಅದಕ್ಕೆ ಈಗ ಮಾನ್ಯತೆ ಸಿಕ್ಕಿದೆ. ಠೇವಣಿದಾರರ ಹಿತರಕ್ಷಣೆಗೆ ವಿಮೆ ಹಣವನ್ನು ₹1ರಿಂದ ₹5 ಲಕ್ಷಕ್ಕೆ ಏರಿಸಿರುವ ಕ್ರಮ ಒಳ್ಳೆಯದು’ ಎಂದು ಕೃಷ್ಣಾರೆಡ್ಡಿ ತಿಳಿಸಿದರು.

‘ಸಹಕಾರ ಕ್ಷೇತ್ರ ಆರ್‌ಬಿಐ ನಿಯಂತ್ರಣದಲ್ಲಿಲ್ಲ. ಸಹಕಾರ ಬ್ಯಾಂಕುಗಳಿಗೆ ಮಾತ್ರ ಆರ್‌ಬಿಐ ನಿಯಮಗಳು ಅನ್ವಯಿಸುತ್ತವೆ. ಈ ಹಿಂದೆ ಜಾರಿಯಲ್ಲಿದ್ದ ಸಹಕಾರ ಕ್ಷೇತ್ರದ ಕಾಯ್ದೆಗಳನ್ನು ಮರು ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಹೇಳಿದರು.

‘ಸಹಕಾರ ಚಳವಳಿಗೆ 117 ವರ್ಷಗಳ ಇತಿಹಾಸ ಇದೆ. ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ದೇಶದ 6.30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರದ ಚಟುವಟಿಕೆಗಳು ವಿಸ್ತರಿಸಿವೆ’ ಎಂದು ತಿಳಿಸಿದರು.

ಸಂಯುಕ್ತ ಸಹಕಾರಿ ನಿರ್ದೇಶಕರಾದ ವಿಶ್ವನಾಥ ಚ. ಹಿರೇಮಠ, ನಂಜನಗೌಡ್ರು, ಕಲಬುರ್ಗಿ ಪ್ರಾಂತದ ಪ್ರಾಂತೀಯ ವ್ಯವಸ್ಥಾಪಕ ಎಚ್‌. ರಾಜಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT