ಜಾತಿಗೆ ಸೀಮಿತಗೊಂಡ ದಾರ್ಶನಿಕರು: ವಿಷಾದ

7
ಎಬಿವಿಪಿಯ ಅಂಬೇಡ್ಕರ್‌ ವಾಚನಾಲಯ ಉದ್ಘಾಟನೆ

ಜಾತಿಗೆ ಸೀಮಿತಗೊಂಡ ದಾರ್ಶನಿಕರು: ವಿಷಾದ

Published:
Updated:
Deccan Herald

ಬಳ್ಳಾರಿ: ‘ಜಾತೀಯತೆಯನ್ನು ಧಿಕ್ಕರಿಸಿ ಬದುಕಿದ ಬಸವಣ್ಣ, ಕನಕದಾಸ, ಯೋಗಿ ವೇಮನ, ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ನಿರ್ದಿಷ್ಟ ಜಾತಿ, ಧರ್ಮಗಳಿಗೆ ಸೀಮಿತಗೊಳಿಸಲಾಗಿದೆ. ಯಾವುದರ ವಿರುದ್ಧ ಅವರೆಲ್ಲ ಹೋರಾಡಿದರೋ ಅದರೊಳಗೇ ಅವರನ್ನು ಹಿಡಿದಿಡಲಾಗಿದೆ’ ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಿಷಾದಿಸಿದರು.

ನಗರದ ವಿಶಾಲನಗರದಲ್ಲಿ ಭಾನುವಾರ ಎಬಿವಿಪಿ ವಿದ್ಯಾರ್ಥಿ ಸೇವಾ ಸಮಿತಿಯ ಜ್ಞಾನಯೋಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಾರ್ವಜನಿಕ ವಾಚನಾಲಯವನ್ನು ಉದ್ಘಾಟಿಸಿದ ಬಳಿಕ, ಬಿಪಿಎಸ್‌ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡಿದ ದಾರ್ಶನಿಕರನ್ನು ಅವರ ಆಶಯಗಳಿಗೆ ತಕ್ಕಂತೆ ಪರಿಭಾವಿಸುವ ಪ್ರಯತ್ನ ನಡೆಯದಿರುವುದು ಶೋಚನೀಯ’ ಎಂದರು.

‘ಶಿಕ್ಷಣ ಪಡೆಯಲು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಇಂದು ಹಲವು ಸೌಲಭ್ಯಗಳಿವೆ. ಆದರೆ ಅಂಬೇಡ್ಕರ್‌ ಅವರು ವಿದ್ಯಾರ್ಥಿಯಾಗಿದ್ದ ಕಾಲಘಟ್ಟದಲ್ಲಿ ಯಾವ ಸೌಲಭ್ಯಗಳೂ ಇರಲಿಲ್ಲ. ಅಂಥ ಪರಿಸ್ಥಿತಿಯಲ್ಲೇ ಅವರು ದೇಶಕ್ಕೆ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಪರಿಣಾಮವಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೇಶವು ಮುನ್ನುಡಿ ಬರೆಯುವಂತಾಯಿತು’ ಎಂದರು.

‘ರಾಷ್ಟ್ರಭಕ್ತ ಸಂಘಟನೆಯಾದ ಎಬಿವಿಪಿ ವಾಚನಾಲಯಕ್ಕೆ ವಿವೇಕಾನಂದರ ಅಥವಾ ಭಾರತಾಂಬೆಯ ಹೆಸರಿಡಬಹುದಿತ್ತು. ಆದರೆ ಹಾಗೆ ಮಾಡದೆ ಜ್ಞಾನಯೋಗಿ ಅಂಬೇಡ್ಕರ್‌ ಎಂಬ ಹೆಸರಿಟ್ಟಿರುವುದು ಶ್ಲಾಘನೀಯ’ ಎಂದರು.

ನಂತರ ಮಾತನಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಹೊನ್ನು ಸಿದ್ಧಾರ್ಥ, ‘ಎಬಿವಿಪಿ ಸಂಘಟನೆಯು ವಾಚನಾಲಯಕ್ಕೆ ಅಂಬೇಡ್ಕರ್ ಹೆಸರಿಟ್ಟಿರುವುದು ಮೊದಲಿಗೆ ಅಚ್ಚರಿ ತಂದಿತು. ಇದೊಂದು ಮಾದರಿ ನಡೆ’ ಎಂದರು.

ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿದರು. ಸಮಿತಿಯ ಮುಖಂಡ ಮರ್ಚೇಡು ಮಲ್ಲಿಕಾರ್ಜುನ, ಎಚ್‌.ಹನುಮಂತಪ್ಪ, ವಾಚನಾಲಯದ ಸಂಚಾಲಕ ಬಿ.ಬಿ.ನಾಗರಾಜ್‌, ಸಂಘಟನೆಯ ಜಿಲ್ಲಾ ಸಂಚಾಲಕ ಶ್ರೀಕಾಂತ ರೆಡ್ಡಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ ವೇದಿಕೆಯಲ್ಲಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !