ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾಗಿಂತ ಅಪಘಾತದಲ್ಲಿ ಹೆಚ್ಚು ಸಾವು’

ಪೊಲೀಸ್‌ ಇಲಾಖೆಯಿಂದ ಹೆಲ್ಮೆಟ್‌ ಜನಜಾಗೃತಿ ಜಾಥಾ
Last Updated 18 ಜನವರಿ 2021, 10:14 IST
ಅಕ್ಷರ ಗಾತ್ರ

ಹೊಸಪೇಟೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಪೊಲೀಸರು ಸೋಮವಾರ ನಗರದಲ್ಲಿ ಹೆಲ್ಮೆಟ್‌ ಜನಜಾಗೃತಿ ಜಾಥಾ ನಡೆಸಿದರು.

‘ಸಡಕ್‌ ಸುರಕ್ಷಾ, ಜೀವನ್‌ ಸುರಕ್ಷಾ’ ಎಂಬ ಘೋಷವಾಕ್ಯ ಹೊಂದಿರುವ ಜಾಗೃತಿ ಜಾಥಾಕ್ಕೆ ಡಿವೈಎಸ್ಪಿ ವಿ. ರಘುಕುಮಾರ ಅವರು ನಗರದ ಪಟ್ಟಣ ಠಾಣೆ ಬಳಿ ಹಸಿರು ನಿಶಾನೆ ತೋರಿಸಿದರು.

ಬಳಿಕ ಅವರು ಸೇರಿದಂತೆ ಇಲಾಖೆಯ ಸಿಬ್ಬಂದಿ, ಗೃಹ ರಕ್ಷಕ ದಳದವರು, ರೋಟರಿ ಕ್ಲಬ್, ಜೂನಿಯರ್‌ ಚೇಂಬರ್‌ ಆಫ್‌ ಇಂಡಿಯಾ ಸಂಘಟನೆಯವರು ಬೈಕ್‌ ರ್‍ಯಾಲಿ ನಡೆಸಿದರು. ನಗರದ ರೋಟರಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕಾಲೇಜು ರಸ್ತೆ, ಸಿದ್ಧಿಪ್ರಿಯಾ ಕಲ್ಯಾಣ ಮಂಟಪ ರಸ್ತೆ, ಸಾಯಿಬಾಬಾ ವೃತ್ತ, ವಾಲ್ಮೀಕಿ ವೃತ್ತ, ರಾಮ ಟಾಕೀಸ್‌, ಮಹಾತ್ಮ ಗಾಂಧಿ ವೃತ್ತದ ಮೂಲಕ ಹಾದು ಪಟ್ಟಣ ಠಾಣೆ ಬಳಿ ರ್‍ಯಾಲಿ ಕೊನೆಗೊಂಡಿತು. ಜಾಥಾದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಫಲಕಗಳು ಗಮನ ಸೆಳೆದವು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ರಘುಕುಮಾರ, ‘ಕೊರೊನಾ ವೈರಸ್‌ನಿಂದ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಪೈಕಿ ಶೇ 1ಕ್ಕಿಂತ ಕಡಿಮೆ ಜನ ಸಾವನ್ನಪ್ಪಿದ್ದಾರೆ. ಆದರೆ, ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹೆಲ್ಮೆಟ್‌ ಧರಿಸದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಬೈಕ್‌ ಸವಾರರು ಬಿದ್ದು ಗಾಯಗೊಂಡರೆ ತಲೆಗೆ ಪೆಟ್ಟು ಬಿದ್ದು ಸಾಯುವವರೇ ಅಧಿಕ. ಸುರಕ್ಷತೆಯ ದೃಷ್ಟಿಯಿಂದ ಎಲ್ಲ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಇನ್ನೂ ಒಂದು ತಿಂಗಳ ವರೆಗೆ ನಗರದಲ್ಲಿ ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರ ಧರಿಸದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜನ ಕೂಡ ಹೆಲ್ಮೆಟ್‌ ಮಹತ್ವ ಅರಿತು ಅವರಾಗಿಯೇ ಧರಿಸಬೇಕು. ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವ ಕಾನೂನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆ ನೀಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ನಗರದ ಪ್ರಮುಖ ಜಾಗಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಹಾಳಾಗಿವೆ. ಅವುಗಳನ್ನು ಬದಲಿಸಿ ಹೊಸ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಗತ್ಯ ಇರುವ ಕಡೆಗಳಲ್ಲಿ ಸಿಗ್ನಲ್‌ ವ್ಯವಸ್ಥೆ ಮಾಡಲಾಗುವುದು. ನಗರದಲ್ಲಿ 70 ಸಂಚಾರ ಪೊಲೀಸರ ಅಗತ್ಯವಿದ್ದು, ಸದ್ಯ 36 ಜನರಷ್ಟೇ ಇದ್ದಾರೆ. ಸಿಬ್ಬಂದಿ ಕೊರತೆ ನೀಗಿದರೆ ಎಲ್ಲ ಕಡೆ ಅವರನ್ನು ನಿಯೋಜಿಸಿ, ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬಹುದು’ ಎಂದು ತಿಳಿಸಿದರು.

‘ಸೈಲೆನ್ಸರ್‌ ತೆಗೆದು ಬೈಕ್‌ ಓಡಿಸುವವರ ವಿರುದ್ಧ ಈಗಾಗಲೇ ಕ್ರಮ ಜರುಗಿಸಲಾಗಿದೆ. ಈಗಾಗಲೇ ವಾಹನ ಮೆಕ್ಯಾನಿಕ್‌ ಅಂಗಡಿಗಳವರ ಸಭೆ ಕರೆದು, ಸೈಲೆನ್ಸರ್‌ ತೆಗೆಯದಂತೆ ಸೂಚಿಸಲಾಗಿದೆ. ಕಾಲೇಜುಗಳಲ್ಲಿ ಸಭೆ ನಡೆಸಿ, ದ್ವಿಚಕ್ರ ವಾಹನ ಸವಾರರಲ್ಲಿ ಅರಿವು ಮೂಡಿಸಲಾಗುವುದು’ ಎಂದರು.

ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಶ್ರೀನಿವಾಸ್‌, ಟಿ.ಬಿ. ಡ್ಯಾಂ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿ. ನಾರಾಯಣ, ಸಂಚಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹಾಂತೇಶ್‌ ಈ. ಸಜ್ಜನ್‌, ಗೃಹರಕ್ಷಕ ದಳದ ಕಮಾಂಡೆಂಟ್‌ ಎಸ್‌.ಎಂ. ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT