ಸೋಮವಾರ, ನವೆಂಬರ್ 30, 2020
24 °C
ಆಡಳಿತಾತ್ಮಕ ಅನುಕೂಲಕ್ಕೆ ವಿಜಯನಗರ ಜಿಲ್ಲೆ ರಚನೆ

ಬಲವಂತದ ಬಳ್ಳಾರಿ ಬಂದ್‌ ಮಾಡಿದ್ರೆ ಕ್ರಮ: ಅರಣ್ಯ ಸಚಿವ ಆನಂದ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಆಡಳಿತಾತ್ಮಕ ಅನುಕೂಲಕ್ಕಾಗಿ ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಲಾಗುತ್ತಿದೆ ಹೊರತು ಇದರಲ್ಲಿ ಬೇರೇನೂ ಸ್ವಾರ್ಥವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ, ಬಂದ್‌ ಮಾಡುವುದಕ್ಕೆ ಸ್ವಾತಂತ್ರ್ಯ ಇದೆ. ಆದರೆ, ಬಲವಂತದಿಂದ ಬಳ್ಳಾರಿ ಬಂದ್‌ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಎಚ್ಚರಿಕೆ ನೀಡಿದರು.

ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ. 26ರಂದು ಬಳ್ಳಾರಿ ಬಂದ್‌ಗೆ ಕರೆ ಕೊಟ್ಟಿರುವುದರ ಕುರಿತು ಗುರುವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
‘ಬಲವಂತದಿಂದ ಬಂದ್‌ ಮಾಡಿ ಜನರಿಗೆ ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು. ಬೇಕಾದರೆ ಸಾಂಕೇತಿಕವಾಗಿ ಹೋರಾಟ ನಡೆಸಲಿ. ಆಡಳಿತದ ಅನುಕೂಲಕ್ಕಾಗಿ ರಾಮನಗರ, ಯಾದಗಿರಿ ಜಿಲ್ಲೆಗಳನ್ನು ಮಾಡಲಾಗಿದೆ. ಅದೇ ರೀತಿ ಈಗ ವಿಜಯನಗರ ಜಿಲ್ಲೆ ರಚನೆ ಮಾಡಲಾಗುತ್ತಿದೆ. ವಿಜಯನಗರ ಜಿಲ್ಲೆಯಾಗಬೇಕೆಂಬ ಕೂಗು ನಿನ್ನೆ, ಮೊನ್ನೆಯದಲ್ಲ. ದಶಕದಿಂದ ಆ ಬೇಡಿಕೆ ಇದೆ. ವಿಜಯನಗರ ಜಿಲ್ಲೆ ಘೋಷಣೆಯಿಂದ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳ ಜನ ಸಂತಸಗೊಂಡಿದ್ದಾರೆ’ ಎಂದರು.

‘ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸಮಾಧಾನವಾಗಿಯೇ ಇದ್ದಾರೆ. ಆದರೆ, ಕೆಲ ಮಾಧ್ಯಮದವರೇ ಅವರನ್ನು ಪ್ರಚೋದಿಸುತ್ತಿದ್ದಾರೆ. ಇನ್ನೂ ಹೊಸ ಜಿಲ್ಲೆಯ ನಕಾಶೆ ಅಂತಿಮಗೊಂಡಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಇತರೆ ಇಲಾಖೆಗಳ ಉನ್ನತ ಅಧಿಕಾರಿಗಳು ಚರ್ಚಿಸಿ, ಯಾವ ತಾಲ್ಲೂಕು ಯಾವ ಜಿಲ್ಲೆಗೆ ಸೇರಿಸಬೇಕು ಎನ್ನುವುದರ ಬಗ್ಗೆ ತೀರ್ಮಾನಿಸುವರು’ ಎಂದು ಸ್ಪಷ್ಟಪಡಿಸಿದರು.

‘ಈ ಹಿಂದೆ ಕಾಂಗ್ರೆಸ್‌ ಶಾಸಕನಿದ್ದಾಗ ಇದೇ ವೇದಿಕೆ ಮೂಲಕ ವಿಜಯನಗರ ಜಿಲ್ಲೆ ರಚನೆ ಬಗ್ಗೆ ಭರವಸೆ ಕೊಟ್ಟಿದ್ದೆ. ಜಿಲ್ಲೆ ಘೋಷಣೆಯಾದ ಮರುದಿನ ಇದೇ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಕಾಕತಾಳೀಯವಷ್ಟೇ. ಜನರ ಹಿತದೃಷ್ಟಿಯಿಂದ ಜಿಲ್ಲೆ ಮಾಡಲಾಗುತ್ತಿದೆ. ಯಾರೂ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸರ್ಕಾರದ ಈ ಕ್ರಮದಿಂದ ವಿಜಯನಗರದ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ’ ಎಂದು ಇದಕ್ಕೂ ಮುನ್ನ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದರು.

‘ನಾಲ್ಕೈದು ತಿಂಗಳ ಹಿಂದೆಯೇ ವಿಜಯನಗರ ಜಿಲ್ಲೆ ರಚನೆ ಘೋಷಣೆಯಾಗಬೇಕಿತ್ತು. ಆದರೆ, ಮುಖ್ಯಮಂತ್ರಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಮಾಡಿದ್ದಾರೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

‘ಕೆಲವರು ಜಿಲ್ಲೆ ರಚನೆಗೆ ಅಪಸ್ವರ ಎತ್ತಿದ್ದಾರೆ. ಆದರೆ, ಆಡಳಿತದ ಅನುಕೂಲಕ್ಕಾಗಿ ವಿಭಜನೆಯ ಅಗತ್ಯವಿದೆ. ರಾಜ್ಯದ ಅನೇಕ ಜಿಲ್ಲೆಗಳು ಈಗಾಗಲೇ ವಿಭಜನೆಯಾಗಿವೆ. ಚಿಕ್ಕ ಜಿಲ್ಲೆಯಾದರೆ ಜನರಿಗೆ ಬಹಳ ಪ್ರಯೋಜನವಾಗುತ್ತದೆ. ಹಾಗಾಗಿ ಯಾರೂ ವಿರೋಧಿಸಬಾರದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು