ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶ್‌ಗೌಡಗೆ ಮಹತ್ವದ ಖಾತೆ

ಬಿಜೆಪಿ ಸರ್ಕಾರ ಖಚಿತ; ಹೆಬ್ಬೂರಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ
Last Updated 10 ಮೇ 2018, 9:10 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶ್‌ಗೌಡ ಅವರನ್ನು ಸಚಿವರನ್ನಾಗಿ ಮಾಡಲಾಗುವುದು. ಅವರನ್ನು ಬೆಂಬಲಿಸಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮತದಾರರಿಗೆ ಮನವಿ ಮಾಡಿದರು.

ತಾಲ್ಲೂಕಿನ ಹೆಬ್ಬೂರು ಗ್ರಾಮದಲ್ಲಿ ಬುಧವಾರ ಸುರೇಶ್‌ಗೌಡ ಅವರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದು, ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ದೊರಕಿಸಿ ಅಭಿವೃದ್ಧಿಪಡಿಸಿದ್ದಾರೆ. ಕ್ಷೇತ್ರದ ಶಾಸಕ ಸುರೇಶ್‌ಗೌಡ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಈ ಬಾರಿ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಮಹತ್ವ ಸಚಿವ ಸ್ಥಾನ ಲಭಿಸಲಿದೆ’ ಎಂದು ಪುನರುಚ್ಛರಿಸಿದರು.

ಕಾಂಗ್ರೆಸ್ ದೂಳಿಪಟ: ‘ಕರ್ನಾಟಕದ ಎಲ್ಲ ಪ್ರದೇಶಕ್ಕೂ ಚುನಾವಣೆ ಪ್ರಚಾರಕ್ಕೆ ತೆರಳಿ ಈಗ ಇಲ್ಲಿಗೆ ಬಂದಿದ್ದೇನೆ. ಎಲ್ಲ ಕಡೆಗೂ ಬಿಜೆಪಿಯ ಸುನಾಮಿ ಅಲೆಯೇ ಇದೆ. ಈ ಸುನಾಮಿ ಅಲೆಯ ಮುಂದೆ ಕಾಂಗ್ರೆಸ್ ದೂಳಿಪಟವಾಗಲಿದೆ’ ಎಂದು ಹೇಳಿದರು.

ತೆಂಗು ಸಂಸ್ಕರಣ ಕೇಂದ್ರ ಸ್ಥಾಪನೆ: ‘ತೆಂಗು ಬೆಳೆಗಾರರ ರಕ್ಷಣೆಗೆ ತುಮಕೂರು, ಚಿತ್ರದುರ್ಗ, ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆ ಸೇರಿದಂತೆ 5 ಕಡೆ ತೆಂಗು ಸಂಸ್ಕರಣಾ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಹೊಂದಿದೆ. ಅಲ್ಲದೇ, ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರ ಪ್ರೋತ್ಸಾಹಿಸಲು ಜಿಲ್ಲೆಯಲ್ಲಿ ಗುಬ್ಬಿ ವೀರಣ್ಣ ಅವರ ಹೆಸರಿನಲ್ಲಿ ₹ 100 ಕೋಟಿ ವೆಚ್ಚದಲ್ಲಿ ಕಲಾ ಕೇಂದ್ರ ಸ್ಥಾಪಿಸಲಾಗುವುದು’ ಎಂದು ವಿವರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ 113 ಯೋಜನೆಗಳನ್ನು ಕಲ್ಪಿಸಿದ್ದಾರೆ. ಆದರೆ, ಇಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪೇಕ್ಷೆಯಿಂದ ಅವುಗಳು ಸಮರ್ಪಕವಾಗಿ ಜನರನ್ನು ತಲುಪಿಲ್ಲ’ ಎಂದು ಆರೋಪಿಸಿದರು.

ಅಭ್ಯರ್ಥಿ ಹಾಗೂ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ‘ಕ್ಷೇತ್ರದ ಮತದಾರರು ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಗಮನಿಸಿ ಬೆಂಬಲಿಸಿದ್ದಾರೆ. ಈ ಬಾರಿಯೂ ಅದೇ ರೀತಿ ಬೆಂಬಲ ನೀಡಲಿದ್ದು, 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕೆ ಮನ್ನಣೆ ಇಲ್ಲ. ಬಡವರು, ದಲಿತರು, ರೈತರ ಪರ ಕೆಲಸ ಮಾಡುವವರಿಗೆ ಬೆಲೆ ಇದೆ. ಕ್ಷೇತ್ರದ ಮತದಾರರು ಆಲದ ಮರ ಬೆಳೆಸುತ್ತಾರೆಯೇ ಹೊರತು ಕಳ್ಳಿ ಮರ ಬೆಳೆಸಲ್ಲ ಎಂಬ ವಿಶ್ವಾಸ ಇದೆ’ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಸಿದ್ದೇಗೌಡ, ಸದಸ್ಯ ಗೂಳೂರು ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಾಂತಕುಮಾರ್, ಪಕ್ಷದ ಮುಖಂಡ ರಾಮಸ್ವಾಮಿಗೌಡ, ಶಿವಕುಮಾರ್, ಚಿಕ್ಕಾನಟ್ಟಿ ಶಿವಕುಮಾರ್ ವೇದಿಕೆಯಲ್ಲಿದ್ದರು. ಲಕ್ಷ್ಮೀಶ್ ನಿರೂಪಿಸಿದರು.
**
ಕುಣಿಗಲ್: ‘ಕರ್ನಾಟಕದ ಜನರ ಉತ್ಸಾಹ ನೋಡಿದರೆ ಮೇ 15ರಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದರು.

ಬುಧುವಾರ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಷೋ ಮೂಲಕ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಪರ ಮತಯಾಚಿಸಿ ಮಾತನಾಡಿದರು.

5 ವರ್ಷ ರಾಜ್ಯವನ್ನಾಳಿದ ಕಾಂಗ್ರೆಸ್ ರೈತ ವಿರೋಧಿ ಸರ್ಕಾರವಾಗಿದೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯೋಜನೆಗಳನ್ನು ಅನುಷ್ಠಾನ ಮಾಡದೆ ಕಾಲಹರಣ ಮಾಡಿದೆ. ಕೇಂದ್ರ ಸರ್ಕಾರದ ಸಹಕಾರ ಪಡೆದು ರಾಜ್ಯದ ಅಭಿವೃದ್ಧಿ ಮಾಡಲು ವಿಫಲವಾಗಿದೆ. ತೆಂಗು ಬೆಳೆಗಾರರ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಬಿಜೆಪಿ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ತೆಂಗು ಸಂಸ್ಕರಣ ಘಟಕ ಪ್ರಾರಂಭ ಮಾಡಲಿದೆ. ತುಮಕೂರು ಜಿಲ್ಲೆಯಲ್ಲಿಯೂ ಸಹ ಒಂದು ಘಟಕ ಪ್ರಾರಂಭವಾಗಲಿದೆ’ ಎಂದು ಹೇಳಿದರು.

ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಡಿ.ಕೆ.ಸುರೇಶ್, ಸಹೋದರ ಡಿ.ಕೆ ಶಿವಕುಮಾರ್ ಸೇರಿ ಸಂಚು ಮಾಡಿ ತಮ್ಮ ಹಣ ಬಲದಿಂದ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ತಾಲ್ಲೂಕಿನ ಸ್ವಾಭಿಮಾನಿ ಕನ್ನಡಿಗರು ತಕ್ಕ ಪಾಠ ಕಲಿಸಬೇಕಿದೆ. ತಾಲ್ಲೂಕಿನ ಬೆಟ್ಟ ಗುಡ್ಡಗಳ ಮೇಲೆ ಕಣ್ಣಿಟ್ಟಿರುವ ಕನಕಪುರದವರನ್ನು ಕುಣಿಗಲ್ ತಾಲ್ಲೂಕಿನಿಂದ ಹೊರಗಟ್ಟಿ, ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ರಾಜೇಶ್ ಗೌಡ, ನಾರಾಯಣ್ ಗೌಡ, ದಿನೇಶ್, ಬಲರಾಂ, ದಿನೇಶ್ ಕುಮಾರ್, ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT