ಶನಿವಾರ, ಮೇ 21, 2022
20 °C

ಹಗರಿಬೊಮ್ಮನಹಳ್ಳಿ ತಾಲ್ಲೂಕು: ಅಂತರ್ಜಲ ಪಾತಾಳಕ್ಕೆ, ಖಾಸಗಿ ಕೊಳವೆಬಾವಿಗಳೇ ಗತಿ!

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಬರದ ಹೊಡೆತಕ್ಕೆ ತಾಲ್ಲೂಕಿನ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ. ಅಷ್ಟೇ ಅಲ್ಲ, ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ತಾಲ್ಲೂಕು ಆಡಳಿತ ಹೆಣಗಾಟ ನಡೆಸುತ್ತಿದೆ.

ಕುಡಿವ ನೀರಿನ ಸಮಸ್ಯೆ ನೀಗಿಸಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಏಪ್ರಿಲ್‌ ತಿಂಗಳಲ್ಲಿ 15 ಕೊಳವೆಬಾವಿಗಳನ್ನು ಕೊರೆಸಿದೆ. ಆರರಲ್ಲಿ ಅಲ್ಪ ಪ್ರಮಾಣದ ನೀರು ಸಿಕ್ಕರೆ, ಮಿಕ್ಕಳಿದ ಒಂಬತ್ತು ಕೊಳವೆಬಾವಿಯಲ್ಲಿ ಹನಿ ನೀರು ದೊರೆತಿಲ್ಲ. ಇದರಿಂದ ಕಂಗೆಟ್ಟಿರುವ ಇಲಾಖೆಯು ಹೊಸ ಮಾರ್ಗ ಕಂಡುಕೊಂಡಿದೆ. ಯಾರ ಕೊಳವೆ ಬಾವಿಗಳಲ್ಲಿ ನೀರಿದೆ ಅಂತಹವುಗಳನ್ನು ಗುರುತಿಸಿ, ಬಾಡಿಗೆ ಆಧಾರದ ಮೇಲೆ ಪಡೆದು, ನೀರು ಪೂರೈಸುವ ಕೆಲಸ ಮಾಡುತ್ತಿದೆ.

ತಾಲ್ಲೂಕಿನ ಕೆ.ಕೆ. ತಾಂಡಾ, ವ್ಯಾಸಾಪುರ ತಾಂಡಾ, ಕನ್ನಿಹಳ್ಳಿ, ನೆಲ್ಕುದ್ರಿ-1, ಹಳೆ ನೆಲ್ಕುದ್ರಿ, ನೆಲ್ಕುದ್ರಿ-2, ಮಗಿಮಾವಿನಹಳ್ಳಿ, ಅಂಬಳಿ, ಆನೇಕಲ್ಲು ತಾಂಡಾ, ಉಪ್ಪಾರಗಟ್ಟಿ, ಕಡಲಬಾಳು, ಹೊಸಕೇರಿ, ನಂದಿಪುರ, ಮುಟುಗನಹಳ್ಳಿ, ಹಂಪಸಾಗರ-2, ಲೋಕಪ್ಪನಹೊಲ, ಮರಬ್ಬಿಹಾಳು, ಕೆ.ಓಬಳಾಪುರ, ಬಾಚಿಗೊಂಡನಹಳ್ಳಿ, ರಾಯರಾಳ ತಾಂಡಾ, ಕೆಚ್ಚಿನಬಂಡಿ, ಸೊನ್ನ, ವಟ್ಟಮ್ಮನಹಳ್ಳಿ, ವರಲಹಳ್ಳಿ, ಕಲ್ಲಹಳ್ಳಿ, ಹನಸಿ, ಕಲ್ಲಹಳ್ಳಿ ತಾಂಡಾ, ಕಣವಿ ನಾಯಕನಹಳ್ಳಿ, ದಶಮಾಪುರ, ಶೀಗೆನಹಳ್ಳಿ, ಉಪ್ಪಾರಗಟ್ಟಿ, ನಾರಾಯಣ ದೇವರಕೆರೆ, ಬನ್ನಿಕಲ್ಲು, ಮರಬ್ಬಿಹಾಳು ತಾಂಡಾ, ಕಿತ್ನೂರು ಗ್ರಾಮಗಳಲ್ಲಿ ಒಟ್ಟು 50 ರೈತರ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

‘ಪ್ರತಿ ಕೊಳವೆ ಬಾವಿಗೆ ನೀರಿನ ಲಭ್ಯತೆಗೆ ತಕ್ಕಂತೆ ರೈತರಿಗೆ ತಿಂಗಳಿಗೆ ₹9 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಕೆಲ ರೈತರು ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಅವರಿಗೆ ಸರ್ಕಾರದ ನಿಯಮಗಳನ್ನು ಮನವರಿಕೆ ಮಾಡಿ, ನೀರು ಪಡೆಯಲು ಯಶಸ್ವಿಯಾಗಿದ್ದೇವೆ’ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿಯೇ ಅಂತರ್ಜಲ ಕುಸಿದಿರುವುದು ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೊಳವೆ ಬಾವಿಗಳಲ್ಲಿ ನೀರು ಕುಸಿದಿರುವುದರಿಂದ ಅಲ್ಲಿಯೂ ಅನಿವಾರ್ಯವಾಗಿ ಬಾಡಿಗೆಗೆ ಕೊಳವೆ ಬಾವಿಗಳನ್ನು ಪಡೆಯಲಾಗಿದೆ. 

‘ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆಯೋ ಅಂತಹ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಾತ್ರೆಗಳಿಗೂ ಇದೇ ಮಾರ್ಗ ಅನುಸರಿಸಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮಲ್ಲಾ ನಾಯ್ಕ ತಿಳಿಸಿದರು.

ನೀರಿನ ಸಮಸ್ಯೆ ತೀವ್ರವಾಗಿರುವ ತಾಲ್ಲೂಕಿನ ಕೋಗಳಿ ತಾಂಡಾ, ಮಾದೂರು, ಚಿಕ್ಕ ಸೊಬಟಿಯಲ್ಲಿ ಜನ ತಳ್ಳುಬಂಡಿಗಳ ಮೂಲಕ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಮಾದೂರು ಗ್ರಾಮದ ಎಲ್ಲ ಮನೆಗಳಲ್ಲಿ ಎರಡೆರಡು ತಳ್ಳು ಬಂಡಿಗಳಿವೆ. ಬಹುತೇಕ ಮನೆಗಳಿಗೆ ನಲ್ಲಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣ. 

ಅನೇಕ ಕಡೆಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ಕಾಮಗಾರಿ ಪೂರ್ಣಗೊಳಿಸದ ಕಾರಣ ಬೇಸಿಗೆಯಲ್ಲಿ ಜನ ಸಮಸ್ಯೆ ಎದುರಿಸುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು