ಹಗರಿಬೊಮ್ಮನಹಳ್ಳಿ: ಊದುಬತ್ತಿಯಿಂದ ಬದುಕು ಉದ್ಧಾರ

7

ಹಗರಿಬೊಮ್ಮನಹಳ್ಳಿ: ಊದುಬತ್ತಿಯಿಂದ ಬದುಕು ಉದ್ಧಾರ

Published:
Updated:
Deccan Herald

ಹಗರಿಬೊಮ್ಮನಹಳ್ಳಿ: ಈ ಮನೆಯ ಸಮೀಪ ಹೋಗುತ್ತಿದ್ದಂತೆ ಊದುಬುತ್ತಿ ವಾಸನೆ ಬರುತ್ತದೆ. ಮನೆಯ ಆವರಣಕ್ಕೆ ಹೋದರೆ ಎಲ್ಲಿ ನೋಡಿದರಲ್ಲಿ ಊದು ಬುತ್ತಿಗಳೇ ಕಾಣ ಸಿಗುತ್ತವೆ.

ಇದು ತಾಲ್ಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿ ನಿಚ್ಚಾಪುರದ ಶಿವಪ್ಪ ಅವರ ಮನೆಯಲ್ಲಿ ನಿತ್ಯ ಕಾಣಸಿಗುವ ಚಿತ್ರಣ. ಬದುಕಿನ ಬಂಡಿ ಸಾಗಿಸಲು ಶಿವಪ್ಪ ಹಾಗೂ ಅವರ ಪತ್ನಿ ಕವಿತಾ ಊದುಬತ್ತಿ ತಯಾರಿಕೆ ಘಟಕ ಸ್ಥಾಪಿಸಿದ್ದಾರೆ. ಇವರ ಮನೆಯಲ್ಲಿ ಬಗೆಬಗೆಯ ಊದಿನ ಬತ್ತಿಗಳು ತಯಾರಾಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಬಳ್ಳಾರಿ, ದಾವಣಗೆರೆ ಜಿಲ್ಲೆಯಲ್ಲಿ ಇವರ ಊದುಬತ್ತಿಗಳಿಗೆ ಬಹಳ ಬೇಡಿಕೆ ಇದೆ. ಘಟಕ ಆರಂಭಿಸಿದ ಐದೇ ತಿಂಗಳಲ್ಲಿ ಹತ್ತು ಕ್ವಿಂಟಾಲ್‌ ಕಚ್ಚಾ ಊದುಬತ್ತಿ ಮಾರಾಟ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1 ಲಕ್ಷ ಆರ್ಥಿಕ ಸಹಾಯ ಹಾಗೂ ತಮ್ಮ ಬಳಿಯಿದ್ದ ₹60 ಸಾವಿರ ಬಂಡವಾಳ ಹಾಕಿ ಘಟಕ ಸ್ಥಾಪಿಸಿದ್ದಾರೆ. ಎಲ್ಲ ಖರ್ಚು ತೆಗೆದು ಮಾಸಿಕ ₹20 ಸಾವಿರ ಆದಾಯ ಗಳಿಸುತ್ತಿದ್ದಾರೆ.

ಪತಿ, ಪತ್ನಿ ಇಬ್ಬರೂ ಘಟಕದಲ್ಲಿ ಕೆಲಸ ಮಾಡುವುದರಿಂದ ಕೂಲಿ ಆಳುಗಳ ಅಗತ್ಯ ಇದುವರೆಗೂ ಕಂಡು ಬಂದಿಲ್ಲ. ಪ್ರತಿದಿನ ಸರಾಸರಿ 50 ಕಿಲೋ ಗ್ರಾಂ ಊದುಬತ್ತಿ ತಯಾರಿಸುತ್ತಾರೆ. ಅವುಗಳನ್ನು 24 ತಾಸು ನೆರಳಿನಲ್ಲಿ ಒಣಗಿಸುತ್ತಾರೆ. ಒಣಗಿದ ಕಡ್ಡಿಗಳನ್ನು ಬಂಡಲ್‌ ಕಟ್ಟಿ ಒಂದು ಕಡೆ ಸಂಗ್ರಹಿಸಿ ಇಡುತ್ತಾರೆ. ತಿಂಗಳಿಗೆ ಎರಡು ಬಾರಿ ಮಾರುಕಟ್ಟೆಗೆ ರವಾನಿಸುತ್ತಾರೆ.

ದಾವಣಗೆರೆಯಲ್ಲಿ ಊದುಬತ್ತಿ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು (ಇದ್ದಿಲು ಮಿಶ್ರಿತ ಮರದ ಪುಡಿ, ಗಮ್‌ ಪೌಡರ್‌) ಖರೀದಿಸುತ್ತಾರೆ. ಅದೇ ಸ್ಥಳದಲ್ಲಿ ಊದು ಬತ್ತಿ ಮಾರಾಟ ಮಾಡುವುದರಿಂದ ಇದುವರೆಗೂ ಇವರಿಗೆ ಮಾರುಕಟ್ಟೆ ಸಮಸ್ಯೆಯಾಗಿಲ್ಲ. ಇವರ ಘಟಕದಲ್ಲಿ ತಯಾರಾದ ಊದುಬತ್ತಿಗಳಿಗೆ ಕ್ವಿಂಟಾಲ್‌ಗೆ ₹63 ಸಾವಿರ ಬೆಲೆ ಇದೆ. ಉತ್ಪನ್ನ ತೂಕವಾದ ತಕ್ಷಣವೇ ಹಣ ನೀಡುತ್ತಾರೆ. ಬರುವಾಗ ಕಚ್ಚಾವಸ್ತುಗಳನ್ನು ಖರೀದಿಸಿ ಅದೇ ವಾಹನದಲ್ಲಿ ತರುವುದು ಇವರಿಗೆ ಅನುಕೂಲವಾಗಿದೆ.

‘ಪತ್ನಿಯ ಸಹಾಯದಿಂದ ನಡೆಸುತ್ತಿರುವ ಕಿರು ಉದ್ಯಮದಿಂದ ಉತ್ತಮ ಲಾಭವಿದೆ. ಘಟಕವನ್ನು ವಿಸ್ತರಿಸುವ ಉದ್ಧೇಶ ಹೊಂದಲಾಗಿದೆ. ದಿನಕ್ಕೆ ಕ್ವಿಂಟಾಲ್‌ ಕಡ್ಡಿ ಉತ್ಪಾದಿಸುವ ಯಂತ್ರ ಖರೀದಿಸುವ ಚಿಂತನೆ ಇದೆ’ ಎಂದು ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಪ್ಪ ಈ ಮೊದಲು ಮನೆಯ ಹಿಂದೆ ಕೊಟ್ಟಿಗೆ ನಿರ್ಮಿಸಿ ಹೈನುಗಾರಿಕೆ ಆರಂಭಿಸಿದ್ದರು. ಆದರೆ, ಅದು ಕೈ ಹಿಡಿಯಲಿಲ್ಲ. ಕೆಲವು ವರ್ಷಗಳು ಜೀವನೋಪಾಯಕ್ಕಾಗಿ ಆಟೋ ಓಡಿಸಿದರು. ಈಗ ಯಾವುದೇ ಒತ್ತಡ ಇಲ್ಲದೇ ಪತ್ನಿಯೊಂದಿಗೆ ಸೇರಿ ಊದು ಬತ್ತಿ ಘಟಕ ಆರಂಭಿಸಿ ಪತ್ನಿಯೊಂದಿಗೆ ಸಂತಸದ ಜೀವನ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !