ಶನಿವಾರ, ಆಗಸ್ಟ್ 20, 2022
21 °C
ಕ್ರಿಯಾ ಯೋಜನೆ ಸಲ್ಲಿಸಿ ಎಂಟು ತಿಂಗಳಾದರೂ ಹಣ ನೀಡಿಲ್ಲ; ಡಾ. ಅಜಯ್ ಸಿಂಗ್ ಟೀಕೆ

ಕಲಬುರ್ಗಿ: ಕೆಕೆಆರ್‌ಡಿಬಿಗೆ ಹಣ ಬಿಡುಗಡೆ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಂವಿಧಾನಾತ್ಮಕವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಆರು ಜಿಲ್ಲೆಗಳ ಶಾಸಕರು ಕ್ರಿಯಾ ಯೋಜನೆ ಸಲ್ಲಿಸಿ ಎಂಟು ತಿಂಗಳಾದರೂ ಇನ್ನೂ ನಯಾಪೈಸೆ ಬಿಡುಗಡೆ ಆಗಿಲ್ಲ. ಇದರಿಂದ ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿದ್ದು, ಈ ಭಾಗದ ಜನತೆಗೆ ರಾಜ್ಯ ಬಿಜೆಪಿ ಸರ್ಕಾರ ದ್ರೋಹ ಎಸಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಹರಿಹಾಯ್ದರು.

ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕವಾಗಿ ₹ 1500 ಕೋಟಿ ಅನುದಾನವನ್ನು ಮಂಡಳಿಗೆ ರಾಜ್ಯ ಸರ್ಕಾರ ನೀಡಬೇಕು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಮೊತ್ತವನ್ನು ₹ 1000 ಕೋಟಿಯಿಂದ ₹ 1500 ಕೋಟಿಗೆ ಹೆಚ್ಚಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ ನಿಗದಿತ ಅನುದಾನವನ್ನು ನೀಡದೇ ಸತಾಯಿಸುತ್ತಿದೆ. ಹೈದರಾಬಾದ್‌ ಕರ್ನಾಟಕ ಎಂದಿದ್ದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಹೇಳಿದರೆ ಎಲ್ಲವೂ ಆಗುತ್ತದೆ ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಒಟ್ಟು ₹ 1366 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಹಣ ಬಿಡುಗಡೆಯ ಬಗ್ಗೆ ಮುಖ್ಯಮಂತ್ರಿ ಅವರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಮಾತನಾಡುತ್ತಿಲ್ಲ. ₹ 1100 ಕೋಟಿ ಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ, ಇನ್ನೂವರೆಗೂ ಬಿಡುಗಡೆಯಾಗಿಲ್ಲ ಎಂದರು.

ತೊಗರಿಗೆ ₹ 1500 ಪ್ರೋತ್ಸಾಹ ಧನ: ಪ್ರಸಕ್ತ ಹಂಗಾಮಿನಲ್ಲಿ ಮಳೆಯಿಂದಾಗಿ ಅತಿವೃಷ್ಟಿ ಸಂಭವಿಸಿದೆ. ಅಳಿದುಳಿದ ತೊಗರಿ ಬೆಳೆಯಿಂದ ಮಾತ್ರ ರೈತರು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಿದೆ. ಆದ್ದರಿಂದ ಪ್ರತಿ ಕ್ವಿಂಟಲ್‌ಗೆ ₹ 1500 ಪ್ರೋತ್ಸಾಹಧನ ನಿಗದಿ ಮಾಡಬೇಕು. ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅಜಯ್ ಸಿಂಗ್ ಒತ್ತಾಯಿಸಿದರು.

ಬಿಜೆಪಿ ಅಧಿಕಾರ ದುರ್ಬಳಕೆ: ಡಾ.ಶರಣಪ್ರಕಾಶ
ಪ್ರಸ್ತುತ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮೂಲಕ ಅಭ್ಯರ್ಥಿಗಳನ್ನು ಬೆದರಿಸಿ ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಆರೋಪಿಸಿದರು.

ಸೇಡಂ ತಾಲ್ಲೂಕಿನಲ್ಲಿ ಸರ್ಕಾರಿ ನೌಕರರೊಬ್ಬರ ಸಹೋದರ ಚುನಾವಣೆಗೆ ಸ್ಪರ್ಧಿಸುವುದನ್ನು ಗಮನಿಸಿ ತಹಶೀಲ್ದಾರ್ ಮೂಲಕ ನೌಕರರಿಗೆ ಹೇಳಿಸಲಾಗಿದೆ. ಇದರಲ್ಲಿ ಸ್ಥಳೀಯ ಶಾಸಕರ ಕೈವಾಡವಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಇಂತಹ ಅಕ್ರಮಕ್ಕೆ ಅವಕಾಶ ಕೊಡಬಾರದು. ಬಹುತೇಕ ಕಡೆಗಳಲ್ಲಿ ಜಾತಿ ಪ್ರಮಾಣಪತ್ರವನ್ನೂ ನೀಡಲು ತಹಶೀಲ್ದಾರ್‌ಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು