ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ದಡ್ಡ ನಾಯಕ, ಉಗ್ರಪ್ಪ ಖಾಲಿ ಬಾಟಲಿ: ಪ್ರತಾಪ್‌ ಸಿಂಹ

ಬಿಜೆಪಿ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
Last Updated 28 ಅಕ್ಟೋಬರ್ 2018, 15:55 IST
ಅಕ್ಷರ ಗಾತ್ರ

ಹೊಸಪೇಟೆ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ ಗಾಂಧಿ ದಡ್ಡ ನಾಯಕ ಹಾಗೂ ಉಗ್ರಪ್ಪ ಖಾಲಿ ಬಾಟಲಿ ಎಂದು ಪ್ರತಾಪ್ಸಿಂಹ ಭಾನುವಾರ ವ್ಯಂಗ್ಯವಾಡಿದರು.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ, ಸಂಸದ ಪ್ರತಾಪ್‌ ಸಿಂಹ ಅವರು ಭಾನುವಾರ ಸಂಜೆ ನಗರದಲ್ಲಿ ಪಾದಯಾತ್ರೆ ನಡೆಸಿ ಪಕ್ಷದ ಅಭ್ಯರ್ಥಿ ಜೆ.ಶಾಂತಾ ಪರ ಮತಯಾಚಿಸಿದರು. ಈ ವೇಳೆ ಶ್ರೀರಾಮನೇ ಇಲ್ಲ ಎಂದು ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ದರಿದ್ರ ಪಕ್ಷ ಎಂದು ಪ್ರತಾಪ್‌ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಸ್ಟೇಶನ್‌ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪಾದಯಾತ್ರೆ, ಬಸ್‌ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತದ ಮೂಲಕ ಹಾದು ವಡಕರಾಯ ದೇವಸ್ಥಾನದ ಬಳಿ ಕೊನೆಗೊಂಡಿತು.

ಇದಕ್ಕೂ ಮುನ್ನ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಪ್ರತಾಪ್‌ ಸಿಂಹ, ‘ಮತದಾನಕ್ಕೆ ನಾಲ್ಕೈದು ದಿನಗಳಷ್ಟೇ ಉಳಿದಿದ್ದು, ಕಾಂಗ್ರೆಸ್‌ ಕಳ್ಳರು ಕೈಯಲ್ಲಿ ಹಣದ ಕವರ್‌, ಹೆಂಡದ ಬಾಟಲಿ ಹಿಡಿದುಕೊಂಡು ಮನೆಗೆ ಬರುತ್ತಾರೆ. ಅವರು ಕೊಟ್ಟಿದ್ದೆಲ್ಲವನ್ನು ತೆಗೆದುಕೊಂಡು ಬಿಜೆಪಿಗೆ ಮತ ಹಾಕಬೇಕು’ ಎಂದು ಹೇಳಿದರು.

‘ಸಚಿವ ಡಿ.ಕೆ. ಶಿವಕುಮಾರ ಅವರು ರಿಯಲ್‌ ಎಸ್ಟೇಟ್‌ನಿಂದ ಗಳಿಸಿದ ಹಣದಿಂದ ಚುನಾವಣೆ ಗೆಲ್ಲಲ್ಲು ಹೊರಟಿದ್ದಾರೆ. ಅಂತಹವರಿಗೆ ಜಿಲ್ಲೆಯ ಜನ ಪಾಠ ಕಲಿಸಬೇಕು. ಸ್ವಾಭಿಮಾನ ಬಿಟ್ಟು ಕುಮಾರಸ್ವಾಮಿ ಹಿಂದೆ ಓಡಾಡುತ್ತಿರುವ ಶಿವಕುಮಾರ ಅವರಿಗೆ ನಾಚಿಕೆಯಾಗಬೇಕು’ ಎಂದರು.

‘ವಿಶ್ವೇಶ್ವರಯ್ಯ ಎಂದರೆ ಕನ್ನಂಬಾಡಿ, ಕೆಂಗಲ್‌ ಹನುಮಂತಯ್ಯ ಎಂದರೆ ವಿಧಾನಸೌಧ ನೆನಪಾಗುತ್ತದೆ. ಬಿ.ಎಸ್‌.ಯಡಿಯೂರಪ್ಪನವರು ಎಂದರೆ ಭಾಗ್ಯಲಕ್ಷ್ಮಿ ಯೋಜನೆ ನೆನಪಾಗುತ್ತದೆ. ಯಾವುದೇ ಜಾತಿ, ಮತ ನೋಡದೆ ಎಲ್ಲ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿದರು. ಎಲ್ಲ ಕಡೆಗಳಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌, ಮಹರ್ಷಿ ವಾಲ್ಮೀಕಿ ಹಾಗೂ ಕನಕದಾಸರ ಭವನಗಳನ್ನು ನಿರ್ಮಿಸಿದರು. ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದರು. ಅಂತಹವರ ಬಗ್ಗೆ ಏನೂ ಕೆಲಸ ಮಾಡದ ದಿನೇಶ್‌ ಗುಂಡೂರಾವ್‌, ವಿ.ಎಸ್‌. ಉಗ್ರಪ್ಪನವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಜನ ತಕ್ಕ ಪಾಠ ಕಲಿಸುವುದು ಖಚಿತ’ ಎಂದು ತಿಳಿಸಿದರು.

‘ಶಿವಮೊಗ್ಗ, ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ನಿಲ್ಲಿಸಲು ಆಗಿಲ್ಲ. ಸಿದ್ದರಾಮಯ್ಯನವರು ಮಂಡ್ಯಕ್ಕೆ ಹೋಗಿ ಜೆ.ಡಿ.ಎಸ್‌. ಪರ ಮತ ಕೇಳುವ ದುರ್ಗತಿ ಬಂದಿದೆ. ಶ್ರೀರಾಮುಲು ಅವರನ್ನು ಸೋಲಿಸಿ ಅವರ ತೊಡೆ ಮುರಿಯಿರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನಲ್ಲಿ ಅವರ ತೊಡೆ ಮುರಿದಿದ್ದೇವೆ. ಶ್ರೀರಾಮುಲು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಕೆ.ಬಿ. ಶ್ರೀನಿವಾಸ್‌ ರೆಡ್ಡಿ, ಹನುಮಂತಪ್ಪ, ಕಿಶೋರ್‌ ಪತ್ತಿಕೊಂಡ, ಭರಮನಗೌಡ, ಜಂಬಾನಹಳ್ಳಿ ವಸಂತ, ಸಾಲಿ ಸಿದ್ದಯ್ಯ ಸ್ವಾಮಿ, ರಾಮಕೃಷ್ಣ, ವೈ. ಯಮುನೇಶ್‌, ಚಂದ್ರಕಾಂತ ಕಾಮತ್‌, ಶಂಕರ್‌ ಮೇಟಿ, ಅನಂತ ಪದ್ಮನಾಭ, ಬಸವರಾಜ ನಾಲತ್ವಾಡ, ಪರಶುರಾಮ ಗುದ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT