ಹೊಸಪೇಟೆ ತಾಲ್ಲೂಕು: ಮಳೆಗಾಲದಲ್ಲೇ ಬತ್ತಿದ ಕೆರೆಗಳು, ಕುಡಿವ ನೀರಿಗೂ ತತ್ವಾರ

7
ಅನುಷ್ಠಾನಗೊಳ್ಳದ ಕೆರೆ ತುಂಬಿಸುವ ಯೋಜನೆ; ಜನ, ಜಾನುವಾರುಗಳಿಗೆ ಸಂಕಷ್ಟ

ಹೊಸಪೇಟೆ ತಾಲ್ಲೂಕು: ಮಳೆಗಾಲದಲ್ಲೇ ಬತ್ತಿದ ಕೆರೆಗಳು, ಕುಡಿವ ನೀರಿಗೂ ತತ್ವಾರ

Published:
Updated:
Deccan Herald

ಹೊಸಪೇಟೆ: ತಾಲ್ಲೂಕು ವ್ಯಾಪ್ತಿಯ ಬಹುತೇಕ ಕೆರೆಗಳು ಮಳೆಗಾಲದಲ್ಲೇ ಬತ್ತಿ ಹೋಗಿವೆ. 

ನಾಲ್ಕು ವರ್ಷಗಳಿಂದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಈ ಸಲವಾದರೂ ಉತ್ತಮ ವರ್ಷಧಾರೆಯಾಗಿ ಕೆರೆ, ಕುಂಟೆಗಳು ತುಂಬಬಹುದು. ಕುಡಿಯುವ ನೀರಿನ ಸಮಸ್ಯೆ ನೀಗಬಹುದು. ಕೃಷಿ ಚಟುವಟಿಕೆಗಳು ಚುರುಕಿನಿಂದ ನಡೆಯಬಹುದು. ಜಾನುವಾರುಗಳಿಗೆ ಮೇವಿನ ಸಮಸ್ಯೆ ದೂರವಾಗಬಹುದು ಎಂದು ಜನ ಅಂದುಕೊಂಡಿದ್ದರು. ಅದಕ್ಕೆ ಪೂರಕವೆಂಬಂತೆ ಮುಂಗಾರು ಹಂಗಾಮಿನಲ್ಲಿ ಕೆಲವು ದಿನ ಉತ್ತಮ ಮಳೆಯಾಗಿತ್ತು. ಅದಾದ ನಂತರ ಇಲ್ಲಿಯ ವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ.

ಮಳೆಯಾಗದ ಕಾರಣ ತಾಲ್ಲೂಕು ವ್ಯಾಪ್ತಿಯ ಅತಿ ಸಣ್ಣ, ಸಣ್ಣ ಹಾಗೂ ದೊಡ್ಡ ಕೆರೆಗಳು ನೀರಿಲ್ಲದೆ ಬರಡಾಗಿವೆ. ಕೆಲವು ಕೆರೆಗಳಲ್ಲಿ ನೀರಿತ್ತು. ಆದರೆ, ಬಿಸಿಲಿನ ತಾಪದಿಂದ ನೀರು ಬತ್ತಿ ಹೋಗಿದೆ. ಕೆರೆಗಳು ಒಣಗಿ ಹೋಗಿರುವ ಕಾರಣ ಅದರ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಕುಸಿದಿದೆ. ಜನ–ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿರುವ ರೈತರು ಮತ್ತೆ ಬಿತ್ತುವ ಸಾಹಸಕ್ಕೆ ಕೈ ಹಾಕಿಲ್ಲ. ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

500 ಎಕರೆ ವಿಸ್ತೀರ್ಣಕ್ಕಿಂತಲೂ ದೊಡ್ಡ ಪ್ರದೇಶದಲ್ಲಿ ಹರಡಿಕೊಂಡಿರುವ ತಾಲ್ಲೂಕಿನ ಕಮಲಾಪುರ, ಹಳ್ಳಿಕೆರೆ, ಗೌರಮ್ಮನ ಕೆರೆ ಹಾಗೂ ವಿಠ್ಠಲಾಪುರ ಕೆರೆಗಳು ಸಂಪೂರ್ಣ ಬತ್ತು ಹೋಗಿದ್ದವು. ಆದರೆ, ಈ ಹಿಂದಿನಂತೆ ತುಂಗಭದ್ರಾ ಕಾಲುವೆಯಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಅವುಗಳಿಗೆ ಸ್ವಲ್ಪ ಕಳೆ ಬಂದಿದೆ. ಇನ್ನುಳಿದಂತೆ 500 ಎಕರೆ ಪ್ರದೇಶಕ್ಕಿಂತ ಕಡಿಮೆ ಇರುವ ಏಳು, 50 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಹರಡಿಕೊಂಡಿರುವ 40 ಕೆರೆಗಳಲ್ಲಿ ಹನಿ ನೀರು ಇಲ್ಲ.

ಬಹುತೇಕ ಕೆರೆಗಳು ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ.), ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ.) ಹಾಗೂ ಹಿನ್ನೀರಿನ ಪ್ರದೇಶಕ್ಕೆ ಹೊಂದಿಕೊಂಡಂತೆ ಇವೆ. ಆದರೆ, ಅವುಗಳಿಗೆ ಅಣೆಕಟ್ಟೆಯಿಂದ ನೀರು ತುಂಬಿಸುವ ಕೆಲಸ ಆಗಿಲ್ಲ.

‘ಜಲಾಶಯದಿಂದ 200 ಟಿ.ಎಂ.ಸಿ. ಅಡಿಗಿಂತಲೂ ಅಧಿಕ ನೀರು ನದಿಗೆ ಹರಿದು ಹೋಗಿದೆ. ಅದರಲ್ಲಿ ಸ್ವಲ್ಪ ಪಾಲು ನೀರು ಕೂಡ ಉಪಯೋಗಿಸಿಕೊಂಡರೆ ಇಂದು ಈ ದಿನ ಬರುತ್ತಿರಲಿಲ್ಲ’ ಎನ್ನುತ್ತಾರೆ ಸ್ಥಳೀಯ ರೈತ ಮುಖಂಡರು.

‘ಜಿಂದಾಲ್‌ನವರು ಆಲಮಟ್ಟಿಯಿಂದ ತೋರಣಗಲ್‌ ವರೆಗೆ ಪೈಪ್‌ಲೈನ್‌ ಮಾಡಿಕೊಂಡಿದ್ದಾರೆ. ಭುವನಹಳ್ಳಿ ಬಳಿ ಮೂರು ಟಿ.ಎಂ.ಸಿ. ನೀರು ಸಂಗ್ರಹ ಸಾಮರ್ಥ್ಯದ ಕೆರೆ ಕಟ್ಟಿಸಿಕೊಂಡಿದ್ದಾರೆ. ಒಂದು ಖಾಸಗಿ ಕಂಪನಿಗೆ ಇಷ್ಟೆಲ್ಲ ಮಾಡಲು ಸಾಧ್ಯವಾಗುವುದಾದರೆ ಸರ್ಕಾರಕ್ಕೆ ಏಕೆ ಆಗುವುದಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಪ್ರಶ್ನಿಸುತ್ತಾರೆ.

‘ಕೆಲವು ಕೆರೆಗಳಂತೂ ತುಂಗಭದ್ರಾ ಕಾಲುವೆಗಳಿಂದ ಸ್ವಲ್ಪವೇ ಅಂತರದಲ್ಲಿವೆ. ಅಲ್ಲಿಂದ ಪೈಪ್‌ಲೈನ್‌ ಮಾಡಿದರೆ ಬಹಳ ಕಡಿಮೆ ವೆಚ್ಚದಲ್ಲಿ ನೀರು ತುಂಬಿಸಬಹುದು. ಆದರೆ, ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅದರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಕೇವಲ ಭರವಸೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

‘ತಾಲ್ಲೂಕಿನ ಇಂಗಳಗಿಯಲ್ಲಿರುವ ಕೆರೆ ಭೌಗೋಳಿಕವಾಗಿ ಒಳ್ಳೆಯ ಜಾಗದಲ್ಲಿದೆ. 150 ವರ್ಷಗಳ ಹಿಂದೆ ಕಟ್ಟಿರುವ ಕೆರೆಯನ್ನು ನಮಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರೆಲ್ಲ ಸೇರಿಕೊಂಡು ಅನೇಕ ಸಲ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎ.ಕೆ. ಉದೇದಪ್ಪ ಹೇಳಿದರು.

‘ಇಂಗಳಗಿ ಬಳಿಯಿಂದಲೇ ಎಚ್‌.ಎಲ್‌.ಸಿ. ಹಾದು ಹೋಗಿದೆ. ಅಲ್ಲಿಂದ ಪೈಪ್‌ಲೈನ್‌ ಮೂಲಕ ಕೆರೆಗೆ ನೀರು ತುಂಬಿಸಿದರೆ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಜನ–ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಆದರೆ, ಅದು ಯಾರಿಗೂ ಬೇಕಿಲ್ಲ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !