ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಂದ್ರತೀರ್ಥರ ವೃಂದಾವನದಲ್ಲಿ ಪೂಜೆಗೆ ಅವಕಾಶ ಕೊಡಿ: ಸರ್ಕಾರಕ್ಕೆ ಕೋರಿಕೆ

ಹಂಪಿಯಲ್ಲಿ ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮನವಿ
Last Updated 14 ಅಕ್ಟೋಬರ್ 2018, 15:22 IST
ಅಕ್ಷರ ಗಾತ್ರ

ಹೊಸಪೇಟೆ: ‘ರಾಯರ ಮಠದ ಪೂರ್ವಿಕ ಗುರುಗಳಾದ ಸುರೇಂದ್ರ ತೀರ್ಥರ ವೃಂದಾವನ ಹೋಲುವ ಆಕೃತಿ ಹಂಪಿಯ ವಿಜಯ ವಿಠಲ ದೇಗುಲದ ಬಳಿ ಪತ್ತೆಯಾಗಿರುವುದರಿಂದ ಆ ಸ್ಥಳವನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಕೋರಲಾಗುವುದು’ ಎಂದು ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಹಂಪಿಯ ವಿಜಯ ವಿಠಲ ದೇಗುಲದ ಬಳಿ ಇತ್ತೀಚೆಗೆ ಪತ್ತೆಯಾಗಿದೆ ಎನ್ನಲಾದ ವೃಂದಾವನ ಆಕೃತಿ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಜಯನಗರ ಸಾಮ್ರಾಜ್ಯದ ಮೂರು ಶಾಸನಗಳಲ್ಲಿ ಸುರೇಂದ್ರ ತೀರ್ಥರ ಉಲ್ಲೇಖವಿದೆ. ಎಪಿಗ್ರಾಫಿಯ ಕರ್ನಾಟಕದ ಮೂರನೇ ಸಂಪುಟದಲ್ಲಿ ಇದರ ಉಲ್ಲೇಖ ಕೂಡ ಇದೆ. ವಸುಂಧರಾ ಫಿಲಿಯೋಜ್‌ ಎಂಬುವರು ಬರೆದಿರುವ ‘ಅಳಿದುಳಿದ ಹಂಪಿ’ ಕೃತಿಯಲ್ಲಿ ಸಹ ಇದರ ಬಗ್ಗೆ ಪ್ರಸ್ತಾಪ ವಿದೆ’ ಎಂದು ಹೇಳಿದರು.

‘ಸುರೇಂದ್ರ ತೀರ್ಥರ ವೃಂದಾವನ ಹಲವು ದಶಕಗಳಿಂದ ಪತ್ತೆಯಾಗಿರಲಿಲ್ಲ. ಈಗ ಪತ್ತೆಯಾಗಿರುವುದು ಖುಷಿ ತಂದಿದೆ. ವಿಜಯನಗರ ಅರಸರ ರಾಜ ಗುರುಗಳಾಗಿದ್ದ ವ್ಯಾಸರಾಜರ ಸಮಕಾಲೀನರು ಸುರೇಂದ್ರ ತೀರ್ಥರು. ಗುರುಗಳಾದ ರಘುನಂದನ ತೀರ್ಥರ ಮೂಲ ವೃಂದಾನವವೂ ಇಲ್ಲೇ ಸನಿಹದಲ್ಲಿದೆ. ಹೀಗಾಗಿ ಈಗ ಸಿಕ್ಕಿರುವ ವೃಂದಾವನ ಪ್ರತಿಷ್ಠಾಪಿಸಿ, ಪೂಜೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು’ ಎಂದರು.

‘ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕಾನೂನುಬದ್ಧವಾಗಿ ಏನು ಮಾಡಬೇಕೋ ಅದನ್ನೆಲ್ಲ ಮಾಡಿ ಪೂಜೆಗೆ ಅವಕಾಶ ಕಲ್ಪಿಸುವಂತೆ ಕೋರಲಾಗುವುದು. ಸುರೇಂದ್ರ ತೀರ್ಥರ ವೃಂದಾವನ, ಮಠವನ್ನು ಜೀರ್ಣೊದ್ಧಾರಗೊಳಿಸಿ ಅದರ ಪಾವಿತ್ರ್ಯತೆ ಕಾಪಾಡಲು ಶ್ರಮಿಸಲಾಗುವುದು’ ಎಂದು ತಿಳಿಸಿದರು.

‘ಮಂತ್ರಾಲಯ ಮಠದಲ್ಲಿ ಹಣಕಾಸು ಸೇರಿದಂತೆ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತಿವೆ. ಯಾರೂ ಅದರ ಬಗ್ಗೆ ಸಂಶಯ ಪಡುವ ಅಗತ್ಯವಿಲ್ಲ. ಯಾರಿಗಾದರೂ ಅನುಮಾನವಿದ್ದರೆ ನೇರವಾಗಿ ಬಂದು ಪರಿಶೀಲನೆ ಮಾಡಬಹುದು’ ಎಂದು ಸವಾಲು ಹಾಕಿದರು.

ಮಠದ ರಾಜಾ ಎಸ್. ಗಿರಿ ಆಚಾರ್ಯ, ಎನ್. ವಾದಿರಾಜಾಚಾರ್ಯ, ಗುರುರಾಜ್ ದಿಗ್ಗಾವಿ, ಅನಂತ ಪುರಾಣಿಕ್, ನಾಗರಾಜ್, ಮಂಜುನಾಥ್, ಡಣಾಪುರ ವಿಜಯಕುಮಾರ್, ವಿದ್ಯಾಧರ್ ಕಿನ್ನಾಳ್, ವಿಷ್ಣುತೀರ್ಥ ಕಲ್ಲೂರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT