ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೂ ಬತ್ತದ ಹನುಮನ ಡೋಣಿ

Last Updated 28 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕೂಡ್ಲಿಗಿ: ಸತತ ಬರ ಹಾಗೂ ಪ್ರಖರವಾದ ಬಿಸಿಲಿನಿಂದ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಆದರೆ, ತಾಲ್ಲೂಕಿನ ಶಿವಪುರ ಗ್ರಾಮದ ಅರಣ್ಯದಲ್ಲಿರುವ ನೀರಿನ ಕುಂಡ ಎಂದೂ ಬತ್ತುವುದಿಲ್ಲ.

ಬರದಲ್ಲೂ ತನ್ನ ಒಡಲಲ್ಲಿ ನೀರಿಟ್ಟುಕೊಂಡು ಜನರ ದಾಹ ನೀಗಿಸುತ್ತಿದೆ.ಶಿವಪುರ ಗ್ರಾಮದಿಂದ ಹೊಸಪೇಟೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮದಿಂದ ಸ್ವಲ್ಪ ದೂರ ಹೋಗಿ ಬಲ ಬದಿಗೆ ಹೋಗುವ ಬಂಡಿ ದಾರಿಯಲ್ಲಿ ಸಾಗಿದರೆ ದೈವದ ಕೆರೆ ಸಿಗುತ್ತದೆ. ಈ ಕೆರೆಯ ಪಕ್ಕದಲ್ಲಿ ದೊಡ್ಡದಾದ ಕಲ್ಲು ಬಂಡೆಯ ಮಧ್ಯ ದೋಣಿ ಅಕಾರದಲ್ಲಿ ಕುಂಡವಿದೆ. ಸುಮಾರು ಹತ್ತು ಅಡಿ ಅಳವಿರುವ ಅದರ ಒಳಗಡೆ ಒಂದು ಭಾಗದಲ್ಲಿ ಅಂಜನೇಯ ಸ್ವಾಮಿ ಮೂರ್ತಿ ಕೆತ್ತನೆ ಇದೆ. ಇದರಿಂದ ಈ ಕುಂಡಕ್ಕೆ ಸ್ಥಳೀಯರು ‘ಹನುಮನ ಡೋಣಿ’ ಎಂದು ಕರೆಯುತ್ತಾರೆ.

ಎಷ್ಟೇ ಬಿಸಿಲಿರಲಿ, ಮಳೆ ಬರಲಿ, ಬಿಡಲಿ ಈ ಕುಂಡ ಬತ್ತಿದ ನಿದರ್ಶನಗಳಿಲ್ಲ ಎನ್ನುತ್ತಾರೆ ಅನೇಕ ವರ್ಷಗಳಿಂದ ಅದನ್ನು ನೋಡುತ್ತ ಬಂದಿರುವ ಜನ.ಅರಣ್ಯದಲ್ಲಿ ದನ, ಕರು, ಕುರಿ, ಮೇಕೆ ಮೇಯಿಸಲು ಬರುವ ಶಿವಪುರ, ಬಂಡೇಬಸಾಪುರ ತಾಂಡಾ, ಸಂಡೂರು ತಾಲ್ಲೂಕಿನ ಉತ್ತರಮಲೆ, ಹುಲಿಕುಂಟೆಯ ಜನರಿಗೆ ನೀರಿನ ದಾಹ ತಣಿಸುವ ತಾಣವಾಗಿದೆ. ಪಕ್ಕದಲ್ಲಿ ‘ದೈವದ ಕೆರೆ’ ಇದೆ. ಅಲ್ಲಿ ಜಾನುವಾರುಗಳಿಗೆ ನೀರು ಸಿಗುತ್ತದೆ. ಆದರೆ, ಈಗ ಕೆರ ಬತ್ತುವ ಹಂತಕ್ಕೆ ಬಂದಿದೆ. ಇದರಿಂದ ಎಲ್ಲರೂ ಕುಂಡವನ್ನೇ ನೆಚ್ಚಿಕೊಂಡಿದ್ದಾರೆ.

ಯುಗಾದಿಯಲ್ಲಿ ಪೂಜೆ

ಹನುಮನ ಡೋಣಿಯಲ್ಲಿನ ನೀರನ್ನು ಪವಿತ್ರ ಗಂಗೆಯೆಂದು ಭಾವಿಸಿರುವ ಶಿವಪುರದ ಗ್ರಾಮಸ್ಥರು ಪ್ರತಿ ಯುಗಾದಿಯ ಚಂದ್ರಮಾನದಂದು ಸಕಲ ವಾದ್ಯಗಳೊಂದಿಗೆ ಹೋಗಿ ಡೋಣಿಯಲ್ಲಿರುವ ಹನುಮನ ಮೂರ್ತಿಗೆ ಪೂಜೆ ಪೂಜೆ ಸಲ್ಲಿಸಿ, ಗಂಗೆ ಪೂಜೆ ಮಾಡಿಕೊಂಡು ಬರುತ್ತಾರೆ. ಅಲ್ಲಿ ಪೂಜೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಉಳಿದುಕೊಂಡು ಬಂದಿದೆ. ‘ಅದನ್ನು ನಾವು ಮುಂದುವರೆಸಿಕೊಂಡು ಹೊಗುತ್ತಿದ್ದೇವೆ’ ಎಂದು ಗ್ರಾಮದ ಉಪ್ಪಾರ್ ಚಂದ್ರಪ್ಪ ಹೇಳುತ್ತಾರೆ.

‘ಈ ಭಾಗದ ಜನ, ಜಾನುವಾರುಗಳಿಗೆ ಜೀವನಾಡಿಯಾಗಿದ್ದ ದೈವದ ಕೆರೆಯ ಏರಿ ಒಡೆದು ಹೋಗಿ ಅನೇಕ ವರ್ಷಗಳ ಕಾಲ ನೀರಿಲ್ಲದಂತಾಗಿತ್ತು. ಸುಮಾರು 25 ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಹೊರಟಿದ್ದ ಅಂದಿನ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ಕೆರೆ ಒಡೆದು ಉಂಟಾಗಿರುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದೆವು. ಅದಕ್ಕೆ ಸ್ಪಂದಿಸಿದ ‌‌‌ಖಂಡ್ರೆಯವರು, ತಕ್ಷಣ ಕೆರೆಯ ಏರಿಯನ್ನು ದುರಸ್ತಿ ಮಾಡಿಸಿಕೊಟ್ಟಿದ್ದರು. ಇದರಿಂದ ಇಂದಿಗೂ ಕೆರಯಲ್ಲಿನ ನೀರು ನಮ್ಮ ಭಾಗದ ಜಾನುವಾರುಗಳಿಗೆ ಆಸರೆಯಾಗಿದೆ’ ಎಂದು ಗ್ರಾಮದ ಅದಿಮನಿ ಬಸವರಾಜಪ್ಪ, ಎನ್. ಭೀಮಜ್ಜ, ಬುಗಡಿ ಬಾಲಪ್ಪ ನೆನಕೆ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT